

ಹಾಸನ: ಜಿಲ್ಲೆಯಲ್ಲಿ ಹೃದಯಾಘಾತದ ಸರಣಿ ಸಾವು ಮುಂದುವರಿದಿದ್ದು, ಯುವಕ ಹಾಗೂ ಗೃಹಿಣಿ ಮೃತಪಟ್ಟಿದ್ದಾರೆ. ಇದರೊಂದಿಗೆ ಕಳೆದ ಒಂದೂವರೆ ತಿಂಗಳಿನಲ್ಲಿ ಹೃದಯಾಘಾತಕ್ಕೆ ಒಟ್ಟು 33 ಮಂದಿ ಜೀವ ಕಳೆದುಕೊಂಡಿದ್ದಾರೆ.
ಹಾಸನ ತಾಲೂಕಿನ ಚಿಟ್ನಳ್ಳಿ ಗ್ರಾಮದ ಮದನ್ (21) ಹಾಗೂ ನಗರದ ದಾಸರಕೊಪ್ಪಲಿನ ಬಿ.ಎನ್.ವಿಮಲಾ (55) ಮೃತ ದುರ್ದೈವಿಗಳು.
ಚಿಟ್ನಳ್ಳಿ ಗ್ರಾಮದ ಮದನ್ ತಾಯಿ ಜತೆ ಚನ್ನಪಟ್ಟಣದಲ್ಲಿ ವಾಸವಾಗಿದ್ದ. ಎರಡು ದಿನಗಳ ಹಿಂದೆ ನಗರದ ಚಿಕ್ಕಕೊಂಡಗುಳದಲ್ಲಿರುವ ಭಾವನ ಮನೆಗೆ ಬಂದಿದ್ದ. ಗುರುವಾರ ರಾತ್ರಿ ಎದೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಚಿಕ್ಕಗೊಂಡಗುಳದಿಂದ ಬೈಕ್‌ನಲ್ಲಿ ಎಲ್ಲಿಗೊ ತೆರಳುವಾಗ ತಮ್ಲಾಪುರ ಬಳಿ ಬೈಕ್ ನಿಲ್ಲಿಸಿ ಸ್ಥಳದಲ್ಲಿಯೇ ಕುಸಿದು ಮೃತಪಟ್ಟಿದ್ದಾನೆ. ಜಿಲ್ಲಾಸ್ಪತ್ರೆಗೆ ಮೃತದೇಹ ತಂದಿದ್ದಾರೆ. ಶುಕ್ರವಾರ ಬೆಳಗ್ಗೆ ಡಿಎಚ್‌ಒ ಡಾ.ಅನಿಲ್ ಕುಮಾರ್ ಆಸ್ಪತ್ರೆಗೆ ತೆರಳಿ ಮೃತದೇಹ ಪರಿಶೀಲನೆ ನಡೆಸಿದರು.
ಸಕಲೇಶಪುರ ತೋಟದಗದ್ದೆ ಕುಮಾರ್ ಎಂಬುವರ ಪತ್ನಿ ಬಿ.ಎನ್.ವಿಮಲಾ ನಗರದ ದಾಸರಕೊಪ್ಪಲಿನಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ವಿಮಲಾ ಅವರಿಗೆ ಶುಗರ್ ಇದ್ದರೂ ನಾರ್ಮಲ್ ಆಗಿದ್ದರು. ಆದರೆ ಕಳೆದ ರಾತ್ರಿ ಅದು ಏರುಪೇರಾಗಿ ಮಲಗಿದ್ದಾಗಲೇ ಹೃದಯಾಘಾತ ಸಂಭವಿಸಿ ಮನೆಯಲ್ಲೇ ಮೃತಪಟ್ಟಿದ್ದಾರೆ.