ಹೃದಯದಲ್ಲಿ ಬೆಳಗಬೇಕು ಜಗಜ್ಯೋತಿ

CTD 10 BASAVA DC OFFICE--0001
Published on

ಚಿತ್ರದುರ್ಗ: ರಾಜ್ಯ ಸರ್ಕಾರದ ಆದೇಶದಂತೆ ಎಲ್ಲ ಕಚೇರಿಗಳಲ್ಲಿ ಬಸವೇಶ್ವರ ಭಾವಚಿತ್ರ ಅನಾವರಣಗೊಳಿಸಲಾಗಿದೆ ಎಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ, ಭಾವಚಿತ್ರಗಳಿಗೆ ಪುಷ್ಪ ನಮನ ಅರ್ಪಿಸಿ ಮಾತನಾಡಿದರು.
ಕಚೇರಿಗಳಲ್ಲಿ ಬಸವಣ್ಣನ ಭಾವಚಿತ್ರ ಹಾಕಲಾಗಿದೆ. ಆದರೆ ನಿಜವಾಗಿಯೂ ನಮ್ಮೆಲ್ಲರ ಹೃದಯದಲ್ಲಿ ಬಸವೇಶ್ವರರು ಅನಾವರಣಗೊಳ್ಳಬೇಕಿದ್ದು, ಆಗ ಮಾತ್ರ ಅವರ ತತ್ವಗಳನ್ನು ರೂಢಿಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸಲು ಸಾಧ್ಯವಾಗಲಿದೆ ಎಂದರು.
ದುಡಿಮೆ ಹಾಗೂ ದಾಸೋಹ ಎಂಬ ಮಹತ್ವದ ತತ್ವಗಳನ್ನು ಬಸವೇಶ್ವರರು ನಾಡಿಗೆ ಪರಿಚಯಿಸಿದ್ದಾರೆ. ಎಲ್ಲ ಜಾತಿಯ ಮಹನೀಯರು ಅನುಭವ ಮಂಟಪದ ಸದಸ್ಯರಾಗಿದ್ದರು. ಆದಾಯವನ್ನು ದಾಸೋಹಕ್ಕೆ ಬಳಸಿಕೊಳ್ಳುತ್ತಿದ್ದರು. ಆದರೆ, ಇಂದು ಸ್ವಾರ್ಥ ಹೆಚ್ಚಾಗಿದೆ. ಸಂಪತ್ತನ್ನು ಕೂಡಿಡುವ ಪ್ರವೃತ್ತಿ ಬೆಳೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಗೃಹಿಣಿಯಾಗಿ ಮಹಾಸಾಧ್ವಿಯಾದವರು. ಅವಳ ಭಕ್ತಿ ಹಾಗೂ ಉದಾರ ಗುಣ ನಮ್ಮೆಲ್ಲರಿಗೂ ಮಾದರಿಯಾಗಬೇಕು ಎಂದರು.
ವೀರಶೈವ ಸಮಾಜದ ಅಧ್ಯಕ್ಷ ಎಚ್.ಎನ್.ತಿಪ್ಪೇಸ್ವಾಮಿ ಮಾತನಾಡಿ, ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿದ, ಜಾತಿ ವ್ಯವಸ್ಥೆ ತೊಡೆದು ಹಾಕಲು ಶ್ರಮಿಸಿದ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ರಾಜ್ಯ ಸರ್ಕಾರ ನಡೆ ಸ್ವಾಗತಾರ್ಹ ಎಂದು ಹೇಳಿದರು.
ಡಿಸಿ ಕಚೇರಿ ಬಳಿ ಬಸವ ಪುತ್ಥಳಿ ನಿರ್ಮಿಸಬೇಕೆಂದು ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ ಮನವಿ ಮಾಡಿದರು.
ಹೇಮರಡ್ಡಿ ಮಲ್ಲಮ್ಮ ಸಮಾಜದ ಅಧ್ಯಕ್ಷ ಚಿದಾನಂದಪ್ಪ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿದರು. ಕೆಪಿಎಂ ಗಣೇಶಯ್ಯ ನಿರೂಪಿಸಿದರು.
ತಹಸೀಲ್ದಾರ್ ಡಾ.ನಾಗವೇಣಿ, ಆರ್‌ಟಿಒ ಭರತ್ ಎಂ.ಕಾಳಿಸಿಂಗೆ, ಎಸ್.ಕೆ.ಮಲ್ಲಿಕಾರ್ಜುನ್, ವೀರೇಂದ್ರಕುಮಾರ್, ಜಿತೇಂದ್ರ ಹುಲಿಕುಂಟೆ, ಜಿ.ಎನ್.ಮಹೇಶ್, ದಿವಾಕರ್, ನಿರ್ಮಲಾ ಬಸವರಾಜ್, ರೀನಾ ವೀರಭದ್ರಪ್ಪ, ಮೋಕ್ಷಾ ರುದ್ರಸ್ವಾಮಿ, ರುದ್ರೇಶ್ ಐಗಾಳ್, ಡಿ.ಟಿ.ಶಿವಾನಂದಪ್ಪ, ನಾಗರಾಜ್ ಸಂಗಮ್, ಕೆ.ಪಿ.ಬಸವರಾಜ್, ದಯಾನಂದ ಪಾಟೀಲ್, ಜಯದೇವಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net