ಹೃದಯಘಾತದಿಂದ ಯೋಧ ಸಾವು

Madhav
Published on

ಬೀದರ್: ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಸ್ಎಫ್ ಯೋಧ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಮಲನಗರ ತಾಲೂಕಿನ ಮುರ್ಗ(ಕೆ) ಗ್ರಾಮದ ಮಾಧವ್ ಜಟಿಂಗರಾವ ಕಾಲೇಕರ್ (58) ಮೃತ ಯೋಧ. 25 ವರ್ಷಗಳಿಂದ ಬಿಎಸ್ಎಫ್ ಪೇದೆಯಾಗಿದ್ದ ಮಾಧವ್ ಅವರು ಜಮ್ಮು ಕಾಶ್ಮೀರದಲ್ಲಿ ಸೇವೆ ಬಳಿಕ ಇತ್ತೀಚೆಗೆ ಪಶ್ಚಿಮ ಬಂಗಾಳಕ್ಕೆ ವರ್ಗವಾಗಿದ್ದರು. ಸೇವೆಗೆ ಹಾಜರಾಗಲು ಸಿಲಿಗುರಿಗೆ ತೆರಳಿದ್ದ ಅವರು ಭಾನುವಾರ ಬೆಳಗ್ಗೆ ರೈಲು ನಿಲ್ದಾಣದಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣ ಸಮೀಪದ ಆಸ್ಪತ್ರೆಗೆ ಸಾಗಿಸಿದರೂ ತೀವ್ರ ಹೃದಯಾಘಾತವಾಗಿದ್ದರಿಂದ ಕೊನೆಯುಸಿರೆಳೆದಿದ್ದಾರೆ. ಬಿಎಸ್ಎಫ್ ಹಿರಿಯ ಅಧಿಕಾರಿಗಳು ಸಾವಿನ ಬಗ್ಗೆ ಕುಟುಂಬಸ್ಥರಿಗೆ ಖಚಿತಪಡಿಸಿದ್ದಾರೆ. ಪತ್ನಿ, ಇಬ್ಬರು ಮಕ್ಕಳನ್ನು ಅಗಲಿರುವ ಯೋಧರ ಪಾರ್ಥಿವ ಶರೀರ ವಿಶೇಷ ವಿಮಾನದ ಹೈದರಾಬಾದ್ ಗೆ ಆಗಮಿಸಿದ್ದು, ರಸ್ತೆ ಮಾರ್ಗವಾಗಿ ತಡರಾತ್ರಿ ಸ್ವಗ್ರಾಮಕ್ಕೆ ಬರಲಿದೆ. ಸೋಮವಾರ ಬೆಳಗ್ಗೆ 10ಕ್ಕೆ ಅಂತ್ಯಕ್ರಿಯೆ ನಡೆಯಲಿದೆ. ಯೋಧನ ನಿಧನದಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net