ಹೃದಯಗಳನ್ನು ಬೆಸೆಯಲಿದೆ ಸಂಗೀತ

Untitled design (17)
ಸಿಂಧನೂರಿನ ಪಂಚಾಕ್ಷರಿ ಸಂಗೀತ ಸಲಕರಣೆ ಕೇಂದ್ರದ ಆವರಣದಲ್ಲಿ ಶ್ರೀಗುರು ಪಂಚಾಕ್ಷರಿ ಪುಟ್ಟರಾಜ ಗವಾಯಿಗಳ ಸಂಗೀತ ಸೇವಾ ಸಮಿತಿಯಿಂದ 30ನೇ ವರ್ಷದ ಸಂಗೀತ ದೀಪೋತ್ಸವ ಕಾರ್ಯಕ್ರಮವನ್ನು ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಮನುಜಮತ ಬಳಗದ ಅಧ್ಯಕ್ಷ ಡಿ.ಎಚ್.ಕಂಬಳಿ, ಶರಣಯ್ಯಸ್ವಾಮಿ ಹಿರೇಮಠ ಬೇವಿನಾಳ, ಸೇವಾ ಸಮಿತಿ ಅಧ್ಯಕ್ಷ ಬಸವರಾಜ ಮೋತಿ, ಕಾಂಗ್ರೆಸ್ ಮುಖಂಡ ಎನ್.ಶಿವನಗೌಡ ಗೊರೇಬಾಳ ಇದ್ದರು.
Published on

ಸಿಂಧನೂರು: ಸಪ್ತಸ್ವರಗಳ ಮೂಲ ನೆಲೆಯನ್ನೇ ಅವಲಂಬಿಸಿ ಹುಟ್ಟಿಕೊಂಡಿರುವ ಸಂಗೀತಕ್ಕೆ ವಿಸ್ತೃತವಾದ ಬಹುಮುಖಿ ಶಕ್ತಿ ಇದೆ ಎಂದು ಕರಿಬಸವನಗರದ ರಂಭಾಪುರಿ ಖಾಸಾಶಾಖಾ ಮಠದ ಸೋಮನಾಥ ಶಿವಾಚಾರ್ಯ ಹೇಳಿದರು.

ನಗರದ ಸುಕಾಲಪೇಟೆ ರಸ್ತೆಯಲ್ಲಿರುವ ಪಂಚಾಕ್ಷರಿ ಸಂಗೀತ ಸಲಕರಣೆ ಕೇಂದ್ರದ ಆವರಣದಲ್ಲಿ ಶ್ರೀಗುರು ಪಂಚಾಕ್ಷರಿ ಪುಟ್ಟರಾಜ ಗವಾಯಿಗಳ ಸಂಗೀತ ಸೇವಾ ಸಮಿತಿಯಿಂದ ದೀಪಾವಳಿ ಹಬ್ಬ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ 30ನೇ ವರ್ಷದ ಸಂಗೀತ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಗೀತ ಮನಸ್ಸಿನ ನೋವುಗಳನ್ನು ಮರೆಸುತ್ತದೆ. ಪ್ರೀತಿಯ ನೆಲೆಯಲ್ಲಿ ಹೃದಯಗಳನ್ನು ಬೆಸೆಯುತ್ತದೆ. ಸಂಗೀತ ಕ್ಷೇತ್ರದ ದಿಗ್ಗಜರು ದೀಪ ರಾಗ ಹಾಡಿದರೆ ಜ್ಯೋತಿ ಪ್ರಜ್ವಲನಗೊಳ್ಳುತ್ತದೆ. ಭಾರತೀಯ ಸಂಗೀತ ಪರಂಪರೆಯಲ್ಲಿ ಹಿಂದೂಸ್ತಾನಿ ಮತ್ತು ಕರ್ನಾಟಕಿ ಎಂಬ ಎರಡು ಪ್ರಧಾನ ಪರಂಪರೆಗಳಿದ್ದು, ಈ ಎರಡೂ ಪರಂಪರೆಗಳಲ್ಲಿ ಉತ್ಕೃಷ್ಟ ಸಾಧನೆಯನ್ನು ಮಾಡಿ ಭಾರತದ ಕೀರ್ತಿಯನ್ನು ವಿಶ್ವತೋಮುಖಗೊಳಿಸಿದ ಶ್ರೇಷ್ಠ ಕಲಾವಿದರು ಭಾರತದಲ್ಲಿರುವುದು ನಮಗೆ ಹೆಮ್ಮೆಯ ವಿಷಯ ಎಂದರು.

ಮನುಜಮತ ಬಳಗದ ಅಧ್ಯಕ್ಷ ಡಿ.ಎಚ್.ಕಂಬಳಿ ಮಾತನಾಡಿ, ಸಂಗೀತ ಮನುಷ್ಯರಿಗಷ್ಟೇ ಅಲ್ಲ ಎಲ್ಲ ಜೀವರಾಶಿಗಳಿಗೂ ಅವಶ್ಯಕ. ಪಶು-ಪಕ್ಷಿಗಳು ನಿಸರ್ಗದಲ್ಲಿ ಹಾಡಿ ನಲಿಯುತ್ತವೆ ಎಂದು ಹೇಳಿದರು.

ಮಾಜಿ ಸೈನಿಕರಾದ ಸುರೇಶ ಎಂ, ರಾಜಾಸಾಬ ಅವರನ್ನು ಸನ್ಮಾನಿಸಲಾಯಿತು. ಶರಣಯ್ಯಸ್ವಾಮಿ ಹಿರೇಮಠ ಬೇವಿನಾಳ, ಸೇವಾ ಸಮಿತಿ ಅಧ್ಯಕ್ಷ ಬಸವರಾಜ ಮೋತಿ, ಕಾಂಗ್ರೆಸ್ ಮುಖಂಡ ಎನ್.ಶಿವನಗೌಡ ಗೊರೇಬಾಳ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ, ಮಲ್ಲಯ್ಯ ಸ್ವಾಮಿ ಮುಳ್ಳೂರು, ನಿವೃತ್ತ ಮುಖ್ಯಶಿಕ್ಷಕ ಬೀರಪ್ಪ ಶಂಭೋಜಿ, ಮುಖಂಡ ವೆಂಕಟೇಶ ಬಾದರ್ಲಿ, ಮಾಜಿ ಸೈನಿಕ ವೀರಭದ್ರಯ್ಯ ಎಸ್, ಅಕ್ಕನ ಬಳಗದ ಪಾರ್ವತೆಮ್ಮ ಬಿ.ಪಿ ಇತರರಿದ್ದರು. ರಾಜರಾಜೇಶ್ವರಿ ಎಣ್ಣೆ, ಪುಟ್ಟರಾಜ, ನಾರಾಯಣಪ್ಪ ಮಾಡಶಿರವಾರ, ಗೌಡಪ್ಪಗೌಡ ಮಾ.ಪಾ, ಮಲ್ಲಮ್ಮ ಮೋತಿ, ಚಿದಾನಂದಪ್ಪ ಗೊರೇಬಾಳ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net