ಹೃದಯ ಸಂಬಂಧಿ ಕಾಯಿಲೆಯಿಂದಲೇ ಶೇ.35ರಷ್ಟು ಸಾವು: ಡಾ.ಸಿ.ಎನ್. ಮಂಜುನಾಥ್ ಆತಂಕ

12
Published on

ಮೈಸೂರು: ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದರಿಂದಲೇ ಶೇ.35ರಷ್ಟು ಸಾವುಗಳು ಸಂಭವಿತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.
ನಗರದ ಜಯದೇವ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ ಕಾರ್ಯ ವೈಖರಿ ವೀಕ್ಷಿಸಿ, ರೋಗಿಗಳು ಹಾಗೂ ಸಂಬಂಧಿಕರೊಂದಿಗೆ ಮಾತನಾಡಿದ ಅವರು, ಆಸ್ಪತ್ರೆಯಲ್ಲಿನ ಗುಣಮಟ್ಟದ ಚಿಕಿತ್ಸೆ, ಸ್ವಚ್ಛತೆ, ವೈದ್ಯರು ಹಾಗೂ ಸಿಬ್ಬಂದಿ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದವರು.
ಬದಲಾದ ಜೀವನಶೈಲಿಯಿಂದ ಯುವಕರಲ್ಲಿ ಹೆಚ್ಚಾಗಿ ಹೃದಯಾಘಾತವಾಗುತ್ತಿದ್ದು, ಯುವಕರು ಒತ್ತಡ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಗುಣಮಟ್ಟದ ಆಹಾರ ಸೇವಿಸಬೇಕು. ಪ್ರತಿದಿನ 45 ನಿಮಿಷ ವ್ಯಾಯಮ ಮಾಡಬೇಕು. 35 ವರ್ಷ ಮೇಲ್ಪಟ್ಟ ಪುರುಷರು, 45 ವರ್ಷ ಮೇಲ್ಪಟ್ಟ ಮಹಿಳೆಯರು ಪ್ರತಿ ವರ್ಷ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಸ್ಪತ್ರೆಯ ಎಲ್ಲ ವಿಭಾಗಗಳು ಸಮರ್ಪಕವಾಗಿ ಕೆಲಸ ಮಾಡುತಿದ್ದು, ಪ್ರತಿದಿನ 700ಕ್ಕೂ ಹೆಚ್ಚು ಹೊರರೋಗಿಗಳು ಬರುತ್ತಿದ್ದಾರೆ. ಕುಟುಂಬಸ್ಥರಲ್ಲಿ ಹೃದಯ ಸಂಬಂಧಿ ಕಾಯಿಲೆ ಇರುವವರು ಎಚ್ಚರಿಕೆ ವಹಿಸಬೇಕು. ಹೆಚ್ಚಾಗಿ ಧೂಮಪಾನ ಮಾಡುವವರು, ಸಕ್ಕರೆ ಕಾಯಿಲೆ ಇರುವವರು ನಿರ್ಲಕ್ಷಿಸಬಾರದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕೆಲ ರೋಗಿಗಳ ಸಂಬಂಧಿಕರು ಚಿಕಿತ್ಸೆಗೆ ರಿಯಾಯಿತಿ ನೀಡುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಡಾ. ಸಿ.ಎನ್.ಮಂಜುನಾಥ್ ಅವರು, ಸ್ಥಳದಲ್ಲಿಯೇ ಆದೇಶ ನೀಡಿ ಚಿಕಿತ್ಸೆಗೆ ಸಹಕಾರ ನೀಡಿದರು.
ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್.ಸದಾನಂದ್, ವೈದ್ಯರಾದ ಡಾ.ಹರ್ಷ ಬಸಪ್ಪ, ಡಾ.ಸಂತೋಷ್, ಡಾ.ರಾಜೀತ್, ಡಾ.ದಿನೇಶ್, ಡಾ. ಹೇಮಾ ರವೀಶ್, ಡಾ. ಜಯಪ್ರಕಾಶ್, ಡಾ. ಭಾರತಿ, ಡಾ.ವೀಣಾನಂಜಪ್ಪ, ಡಾ. ರಶ್ಮಿ, ಡಾ. ಶೀತಲ್, ಡಾ. ನವೀಣ್, ಡಾ. ಶ್ರೀನಿದಿ ಹೆಗ್ಗಡೆ, ಡಾ. ಹರ್ಷ, ಡಾ.ಅಶ್ವಿನಿ, ಡಾ. ದೇವರಾಜ್, ಸೈಂಟಿಫಿಕ್ ಆಫಿಸರ್ ಪದ್ಮಾ, ಆರ್‌ಎಂಒ ಪಶುಪತಿ, ನರ್ಸಿಂಗ್ ಅಧೀಕ್ಷಕ ಹರೀಶ್‌ಕುಮಾರ್, ಪಿಆರ್‌ಒ ವಾಣಿಮೋಹನ್, ಚಂಪಕಮಾಲಾ, ಸೈಯದ್, ಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net