

ಶ್ರವಣಬೆಳಗೊಳ: ಇತ್ತೀಚಿನ ದಿನಗಳಲ್ಲಿ ಆಹಾರ ಕ್ರಮ ಸರಿಯಿಲ್ಲದೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ನಿಯಮಿತ ವ್ಯಾಯಾಮ ಹಾಗೂ ಮಿತ ಆಹಾರ ಸೇವನೆ ಮೂಲಕ ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಡಾ.ಬಿ.ಆರ್.ಯುವರಾಜ್ ಕಿವಿಮಾತು ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಹೃದಯ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗತ್ತಿನಲ್ಲಿ ಪ್ರಸ್ತುತ ಅತಿ ಹೆಚ್ಚು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಹೃದಯ ಸಂಬಂಧಿ ಕಾಯಿಲೆ ಅಗ್ರಸ್ಥಾನದಲ್ಲಿದೆ. ಆರೋಗ್ಯದ ಬಗೆಗಿನ ಕಾಳಜಿ ಇಲ್ಲದಿರುವುದು ಹೃದ್ರೋಗ ಕಾಯಿಲೆಗೆ ಪ್ರಮುಖ ಕಾರಣವಾಗಿದೆ ಎಂದರು.
ಹೃದ್ರೋಗದಿಂದ ಹೃದಯಾಘಾತ, ಪಾರ್ಶ್ವವಾಯು, ಮಿದುಳು ನಿಷ್ಕ್ರಿಯ ಸಮಸ್ಯೆಯಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಮಧುಮೇಹ, ಅಧಿಕ ರಕ್ತದ ಒತ್ತಡ ಹಾಗೂ ಗ್ಯಾಸ್ಟ್ರಿಕ್‌ನಿಂದ ಬರುವ ಎದೆನೋವನ್ನು ನಿರ್ಲಕ್ಷಿಸುವುದರಿಂದ ಹೃದಯ ಸಂಬಂಧಿ ರೋಗಗಳು ಹೆಚ್ಚಾಗುತ್ತಿವೆ. ಆದ್ದರಿಂದ ಸರ್ಕಾರ ಹಲವಾರು ಯೋಜನೆಗಳನ್ನು ತಂದು ಮನೆ ಮನೆಗೆ ತೆರಳಿ ಮಧುಮೇಹ, ರಕ್ತದ ಒತ್ತಡ, ಹೃದಯ ಸಂಬಂಧಿ ಪರೀಕ್ಷೆಗಳನ್ನು ಮಾಡಿಸುತ್ತಿದೆ ಎಂದು ಹೇಳಿದರು.
ವೈದ್ಯಾಧಿಕಾರಿಗಳಾದ ಡಾ.ಕಿರಣ್, ಡಾ.ನಿತ್ಯಾ, ಆಪ್ತ ಸಮಾಲೋಚಕರಾದ ಎಸ್.ಮಹದೇವ್, ರೇಣುಕಾ, ಜಾನಪದ ಕಲಾವಿದ ದಮ್ಮನಿಂಗಳ ಶಂಕರ್ ಮುಂತಾದವರಿದ್ದರು.