

ಚಿತ್ರದುರ್ಗ: ಗ್ಯಾಸ್ಟ್ರಿಕ್ ಸಮಸ್ಯೆಯೆಂದು ಹೃದಯ ಸಂಬಂಧಿ ಕಾಯಿಲೆಗಳನ್ನು ಉದಾಸೀನ ಮಾಡಬೇಡಿ. ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆದುಕೊಳ್ಳಿ ಎಂದು ದಾವಣಗೆರೆಯ ಎಸ್.ಎಸ್.ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ.ಬಿ.ಗುರುರಾಜ್ ಸಲಹೆ ನೀಡಿದರು.
ಜಿಲ್ಲಾ ಸ್ವಾತಂತ್ರ್ಯ ಯೋಧರ ಸ್ಮಾರಕ ಸೇವಾ ಟ್ರಸ್ಟ್, ನೂತನ್ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸೊಸೈಟಿಯಿಂದ ತಾಲೂಕಿನ ಸಿದ್ಧಾಪುರ ಗ್ರಾಮದ ನೂತನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ರಕ್ತದೊತ್ತಡದಿಂದ ಹೃದಯ ಕಾಯಿಲೆಗಳು ಬರುತ್ತವೆ. ಅಧಿಕ ಕೊಬ್ಬಿನಾಂಶ ಸೇವನೆ ಒಳ್ಳೆಯದಲ್ಲ. ಧೂಮಪಾನ, ಮದ್ಯಪಾನದಿಂದ ದೂರವಿರಿ. ವ್ಯಾಯಾಮ, ನಡಿಗೆಯಿಂದ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ನಿಯಂತ್ರಿಸಬಹುದು ಎಂದು ಕಿವಿಮಾತು ಹೇಳಿದರು.
ನೂತನ್ ಶಾಲೆಯ ಸಂಸ್ಥಾಪಕ ಡಾ.ಜಿ.ರಾಘವೇಂದ್ರ ಮಾತನಾಡಿ, ಉಚಿತ ಆರೋಗ್ಯ ಶಿಬಿರಗಳಲ್ಲಿ ಪಾಲ್ಗೊಂಡು ತಪಾಸಣೆಗೆ ಒಳಗಾಗಿ ಆರೋಗ್ಯ ರಕ್ಷಣೆಗೆ ಸಾರ್ವಜನಿಕರು ಮುಂದಾಗಬೇಕು ಎಂದು ಸಲಹೆ ನೀಡಿದರು.
ಡಿಜಿಟಲ್ ವರ್ಲ್ಡ್‌ನ ದಾದಾಪೀರ್, ಅನಂತಮೂರ್ತಿ ನಾಯ್ಕ ಇತರರಿದ್ದರು.