

ಯಾದಗಿರಿ: ಶ್ರೀಸಾಮಾನ್ಯನ ನೋವಿಗೆ ತಕ್ಷಣ ಸ್ಪಂದಿಸುವಾತ ನಿಜವಾದ ನಾಯಕನಾಗಬಲ್ಲ ಎಂದು ಎಂದು ಅಬ್ಬೆ ತುಮಕೂರಿನ ಪೀಠಾಪತಿ ಡಾ.ಗಂಗಾಧರ ಮಹಾಸ್ವಾಮಿಗಳು ನುಡಿದರು.
ನಗರದ ಆರಬೋಳ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಶಾಸಕ ಶರಣಬಸಪ್ಪ ದರ್ಶನಾಪುರ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಕಾಯಕದ ನಿಜನಾಯಕ ಅಭಿನಂದನಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಆಶಿರ್ವಚನ ನೀಡಿ, ನಾಗರಿಕ ಸಮಾಜದಲ್ಲಿ ಜೀವಿಸುವ ಪ್ರತಿಯೊಬ್ಬರೂ ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.
ಮನುಷ್ಯ ತಲೆಯಿಂದ ಬದುಕುವುದಕ್ಕಿಂತ ಹೃದಯದಿಂದ ಬದುಕಬೇಕು. ವಿಚಾರಗಳು ಹೆಚ್ಚಾದರೆ ಗಂಭೀರನಾಗುತ್ತಾನೆ. ಆದರೆ ಹೃದಯ ಅರಳಿದರೆ ಎಲ್ಲರಲ್ಲೂ ಒಬ್ಬರಾಗಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸುತ್ತಾರೆ. ದರ್ಶನಾಪುರ ಕುಟುಂಬ ನೊಂದವರ ಬಾಳಿನ ಬೆಳಕಾಗಿ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುತ್ತ ಬಂದಿದೆ. ಸಗರ ನಾಡಿನ ಅಭಿವೃದ್ಧಿಯಲ್ಲಿ ಈ ಮನೆತನದ ಶ್ರಮ ಅಪಾರವಾದದು ಎಂದು ಕೊಂಡಾಡಿದರು.
ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಟೀಕೆ, ಟಿಪ್ಪಣಿಗಳು ಸಹಜ. ಅವುಗಳನ್ನು ಉಪೇಕ್ಷಿಸಿ ಸಾಧನೆಯ ಮೇಲಷ್ಟೇ ಗಮನ ಕೇಂದ್ರೀಕರಣ ಮಾಡುವ ಮೂಲಕ ಪರೋಪರೂಪಕಾರಿಯಾಗಿ ಜೀವಿಸಬೇಕು. ಶಾಸಕ ಶರಣಬಸಪ್ಪ ದರ್ಶನಾಪುರ ಅಕಾರದಲ್ಲಿ ಸಾಕಷ್ಟು ಎತ್ತರಕ್ಕೆ ಬೆಳೆದರೂ ಅವರಲ್ಲಿನ ಸರಳತೆಯಿಂದ ಜನಸಾಮಾನ್ಯರಿಗೆ ಹತ್ತಿರವಾಗಿದ್ದಾರೆ. ನೊಂದವರ ಬದುಕಿನ ಬಾಳಲ್ಲಿ ಬೆಳಕಾಗಿರುವ ಕಾಯಕಯೋಗಿಗೆ ಗೌರವ ಸಮರ್ಪಣೆ ಸಲ್ಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದರು.
ಏಕದಂಡಗಿ ಮಠದ ಅಜೇಂದ್ರ ಮಹಾಸ್ವಾಮಿಗಳು ವಿಶೇಷ ಉಪನ್ಯಾಸ ನೀಡಿ, ಅಕಾರ ಇದ್ದಾಗ ಹಿಗ್ಗುವ, ಇಲ್ಲದಾಗ ಕುಗ್ಗುವ, ಅಹಂಕಾರ ತೋರುವ ಜಾಯಮಾನ ದರ್ಶನಾಪುರದವರದ್ದಲ್ಲ. ಅವರದ್ದು ಸಮಚಿತ್ತ ಭಾವ, ಶಾಂತ ಸ್ವಭಾವ. ತಮಗಿರುವ ಅಕಾರದ ಇತಿಮಿತಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸದಾ ಮುಂದಿದ್ದಾರೆ ಎಂದು ಹೇಳಿದರು.
ಶಾಸಕ ದರ್ಶನಾಪುರ ಮಾತನಾಡಿ, ಕ್ಷೇತ್ರದ ಜನರ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿರುವುದು ಪೂರ್ವಜನ್ಮದ ಪುಣ್ಯ ಎಂದು ಭಾವಿಸಿದ್ದೇನೆ. ಜನತೆ ನನ್ನ ಮೇಲಿಟ್ಟಿರುವ ಈ ಪ್ರೀತಿ, ವಿಶ್ವಾಸಕ್ಕೆ ಋಣಿಯಾಗಿದ್ದೇನೆ ಎಂದು ಹೇಳಿದರು.