

ಸೋಮವಾರಪೇಟೆ: ಕಾವ್ಯ ಸಾರ್ಥಕವಾಗಬೇಕಾದರೆ ಅದು ಓದುಗರ ಹೃದಯ ತಟ್ಟಬೇಕು ಎಂದು ಜಾನಪದ ವಿದ್ವಾಂಸ ಡಾ. ಮೋಹನ್ ಪಾಳೇಗಾರ್ ಹೇಳಿದರು.
ಮಹಿಳಾ ಸಮಾಜದಲ್ಲಿ ಭಾನುವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಕವಯತ್ರಿ ಜಲಜಾ ಶೇಖರ್ ಅವರ ‘ನೆಲ ಮುಗಿಲು’ ಕವನ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದರು. ಕಾವ್ಯ ಎಂಬುದು ಇತರ ಕಲೆಗಳಿಗಿಂತ ಭಿನ್ನವಾಗಿದೆ. ತನ್ನದೇ ಆದ ವಿಶೇಷತೆ ಹೊಂದಿದೆ ಎಂದು ಅವರು ಹೇಳಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಬಾಹ್ಯ ವಸ್ತುಗಳು ಕವಿಗೆ ಮುಖ್ಯವಲ್ಲ. ಅವುಗಳು ನಿಮಿತ್ತ ಮಾತ್ರ. ಕವಿ ಅನುಭವಕ್ಕೆ ತಕ್ಕಂತೆ ಕಾವ್ಯ ಅರಳುತ್ತದೆ ಎಂದರು. ಜಿಲ್ಲಾ ಕಸಾಪ ಅಧ್ಯಕ್ಷ ಕೇಶವ ಕಾಮತ್, ತಾಲೂಕು ಅಧ್ಯಕ್ಷ ವಿಜೇತ್, ಸಾಹಿತಿ ಜಲಕಾಳಪ್ಪ ಇತರರು ಇದ್ದರು.