ಹೃದಯ ಜ್ಯೋತಿ ರಾಜ್ಯಾದ್ಯಂತ ವಿಸ್ತರಣೆ

2
Published on

ಈಗಾಗಲೇ 80 ತಾಲೂಕು ಆಸ್ಪತ್ರೆಗಳಲ್ಲಿ ಜಾರಿ, ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಹೇಳಿಕೆ

ತುಮಕೂರು: "ಪುನೀತ್​ ರಾಜ್​ಕುಮಾರ್​ ಹೃದಯ ಜ್ಯೋತಿ' ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಹೇಳಿದರು.

ನಗರದ ಶ್ರೀದೇವಿ ವೈದ್ಯಕಿಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಆಸ್ಪತ್ರೆಯ ಹೃದ್ರೋಗ ವಿಭಾಗದಲ್ಲಿ ಸ್ಥಾಪಿಸಿರುವ 2ನೇ ಕ್ಯಾಥ್​ ಲ್ಯಾಬ್​ ಅನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ 80 ತಾಲೂಕು ಆಸ್ಪತ್ರೆಗಳಲ್ಲಿ ಹೃದಯ ಜ್ಯೋತಿ ಯೋಜನೆ ಇದ್ದು, ಈ ಸೌಲಭ್ಯದಿಂದ ಈವರೆಗೆ ಸುಮಾರು 250ಕ್ಕೂ ಹೆಚ್ಚು ಜನರ ಜೀವ ಕಾಪಾಡಲಾಗಿದೆ ಎಂದು ತಿಳಿಸಿದರು.

ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಡೆ-ಕೇರ್​ ಮತ್ತು ಕಿಮೋಥೊರಫಿ ಸೌಲಭ್ಯ ಆರಂಭಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು, ಸದ್ಯದಲ್ಲಿಯೇ ಈ ಯೋಜನೆಗೆ ಚಾಲನೆ ನೀಡಲಾಗುವುದು. ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ಜತೆಗೂಡಿ ಜನರಿಗೆ ಗುಣಮಟ್ಟದ ವೈದ್ಯಕಿಯ ಸೌಲಭ್ಯ ಒದಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ತುಮಕೂರಿನ ಶ್ರೀದೇವಿ ಆಸ್ಪತ್ರೆ ಮತ್ತು ಸಿದ್ಧಾರ್ಥ ವೈದ್ಯಕಿಯ ಸಂಸ್ಥೆಗಳಿಗೆ ಡೆ-ಕೇರ್​ ಮತ್ತು ಕಿಮೋಥೆರಫಿ ಚಿಕಿತ್ಸಾ ನಿರ್ವಹಣೆಯನ್ನು ವಹಿಸಿಕೊಡುವುದಾಗಿ ಸಚಿವರು ಪ್ರಕಟಿಸಿದರು.

ಸರ್ಕಾರಿ ಆಸ್ಪತ್ರೆಗಳ ಸೇವೆಯ ಬಗ್ಗೆ ಜನರಲ್ಲಿ ನಂಬಿಕೆ, ವಿಶ್ವಾಸ ಹೆಚ್ಚಾಗುವಂತೆ ಮಾಡಿದ್ದಾರೆ. ಅನ್ನಭಾಗ್ಯ ಮತ್ತು ಯಶಸ್ವಿನಿ ಯೋಜನೆ ಜಾರಿಗೊಳಿಸುವಲ್ಲಿ ಸಚಿವರ ಪಾತ್ರ ಬಹಳ ಮುಖ್ಯವಾಗಿತ್ತು. ಈಗಿನ ಕಾಲಘಟ್ಟ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯಲ್ಲಿ ಕೆಲವು ಮಾರ್ಪಾಡು ಮಾಡಬೇಕು ಎಂದು ಎಂದು ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ ಡಾ.ಎಂ.ಆರ್​. ಹುಲಿನಾಯ್ಕರ್​ ಸಚಿವರಿಗೆ ಮನವಿ ಮಾಡಿದರು. 2ನೇ ಕ್ಯಾಥ್​ ಲ್ಯಾಬ್​ ಆರಂಭದಿಂದ ಈ ಭಾಗದ ಜನರಿಗೆ ಇನ್ನೂ ಹೆಚ್ಚಿನ ಆರೋಗ್ಯ ಸೇವೆ ಒದಗಿಸಲು ಸಹಕಾರಿಯಾಗಲಿದೆ ಎಂದರು.

ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್​ಬಾಬು, ಜಪಾನಿನ ಸಿಮಾಂಜೋ ಕಂಪನಿಯ ಭಾರತೀಯ ವ್ಯಾಪಾರ ಅಭಿವೃದ್ಧಿಯ ವ್ಯವಸ್ಥಾಪಕ ಉಯಾಮಾ ಡೈಕಿ, ಭಾರತೀಯ ಗವರ್ನಲ್​ ಮ್ಯಾನೇಜರ್​ (ಸೇಲ್ಸ್​) ರಾಜೀವ್​ ಝಾ, ಶ್ರೀದೇವಿ ವೈದ್ಯಕಿಯ ನಿರ್ದೇಶಕ ಡಾ.ರಮಣ್​ ಎಂ ಹುಲಿನಾಯ್ಕರ್​, ಶ್ರೀದೇವಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕ ಎಂ.ಎಸ್​.ಪಾಟೀಲ್​, ಶ್ರೀದೇವಿ ವೈದ್ಯಕಿಯ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಲ್​.ಹರೇಂದ್ರಕುಮಾರ್​, ಶ್ರೀದೇವಿ ಆಸ್ಪತ್ರೆ ಹೃದಯ ರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥ

ಡಾ.ಎಸ್​,ಸುರೇಶ್​, ಡಿಎಚ್​ಒ ಡಾ.ಚಂದ್ರಶೇಖರ್​, ಜಿಲ್ಲಾ ಸರ್ಜನ್​ ಡಾ.ಅಸ್ಗರ್​ಬೇಗ್​, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ ಮತ್ತಿತರರು ಉಪಸ್ಥಿತರಿದ್ದರು.

ವೃತ್ತಿ ಧರ್ಮ ಕಾಪಾಡಿ

ವೈದ್ಯಕಿಯ ಲೋಕದಲ್ಲಿ ಪ್ರತಿನಿತ್ಯ ಹೊಸ-ಹೊಸ ಬದಲಾವಣೆಗಳಾಗುತ್ತವೆ. ಮುಂದಿನ ದಿನಗಳಲ್ಲ್ಲಿ ಕ್ಯಾನ್ಸರ್​ನಂತಹ ಮಾರಕ ಕಾಯಿಲೆಗಳಿಗೂ ಪರಿಹಾರ ದೊರಕಲಿದೆ. ಭವಿಷ್ಯದಲ್ಲಿ ಮನುಷ್ಯನ ಆಯಸ್ಸು 120 ವರ್ಷದವರೆಗೆ ಹೋದರೂ ಅಚ್ಚರಿಪಡಬೇಕಿಲ್ಲ. ರೋಗಗಳಿಂದಾಗಿ ಮನುಷ್ಯನ ಜೀವ ಅಪಾಯಕ್ಕೆ ಸಿಲುಕಿದ ಸಂದರ್ಭದಲ್ಲಿ ವೈದ್ಯರಿಗೆ ಮತ್ತು ದಾದಿಯರಿಗೆ ಜೀವ ಉಳಿಸುವಂತಹ ಶಕ್ತಿಯಿರುತ್ತದೆ. ದೇವರಿಗೆ ಬಿಟ್ಟರೇ ಇಂತಹ ಅದ್ಭುತ ಶಕ್ತಿಯಿರುವುದು ವೈದ್ಯಕಿಯ ಸಮುದಾಯಕ್ಕೆ ಮಾತ್ರ. ಹೀಗಾಗಿ ವೈದ್ಯರು ವೃತ್ತಿ ಧರ್ಮ ಕಾಪಾಡಬೇಕು ಎಂದು ದಿನೇಶ್​ ಗುಂಡೂರಾವ್​ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net