ಹೂಡಿಕೆದಾರರ ಸ್ವಾಗತಕ್ಕೆ ಸಜ್ಜಾಗಿದೆ ಹುಬ್ಬಳ್ಳಿ

h13-Invest Karnataka 8
Published on

ಹುಬ್ಬಳ್ಳಿ: ಬಹು ನಿರೀಕ್ಷೆ ಇಟ್ಟುಕೊಳ್ಳಲಾದ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶಕ್ಕೆ ನಗರದ ಡೆನಿಸನ್ಸ್ ಹೋಟೆಲ್ ಸರ್ವ ರೀತಿಯಿಂದಲೂ ಸಜ್ಜಾಗಿದೆ.

ಶುಕ್ರವಾರ ಬೆಳಗ್ಗೆಯಿಂದ ಸಂಜೆಯವರೆಗೂ ಬಂಡವಾಳ ಹೂಡಿಕೆದಾರರು, ಹೆಸರಾಂತ ಉದ್ಯಮಿಗಳು ಹಾಗೂ ಸರ್ಕಾರದ ಮಧ್ಯೆ ವಿಸõತ ಚರ್ಚೆ, ಒಡಂಬಡಿಕೆಗಳು ನಡೆಯಲಿವೆ.

ಇದುವರೆಗೆ ಬೆಂಗಳೂರಿನಲ್ಲಿ ಮಾತ್ರ ಹೂಡಿಕೆದಾರರ ಸಮಾವೇಶ ನಡೆಯುತ್ತಿತ್ತು. ಉತ್ತರ ಕರ್ನಾಟಕವನ್ನು ಕಡೆಗಣಿಸಲಾಗುತ್ತಿದೆ ಎಂಬ ಅಸಮಾಧಾನದ ಮಾತು ಈ ಭಾಗದಲ್ಲಿ ಸಾಮಾನ್ಯ. ಇಂಥ ಸಂದರ್ಭದಲ್ಲಿ, ಉ.ಕ.ವನ್ನೇ ಕೇಂದ್ರೀಕೃತವಾಗಿಸಿಕೊಂಡು ಸಮಾವೇಶ ಹಮ್ಮಿಕೊಂಡಿರುವುದು, ರಾಜ್ಯದ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ. ಜತೆಗೆ, ಈ ಭಾಗದಲ್ಲಿ ದೊಡ್ಡ ಕೈಗಾರಿಕೆ ಸ್ಥಾಪನೆಯಾಗಬೇಕು ಎಂಬ ಬೇಡಿಕೆಗೆ ಇಂಬು ನೀಡುವ ನಿರೀಕ್ಷೆ ಇದೆ.

ಉತ್ತರ ಕರ್ನಾಟಕ ಜಿಲ್ಲೆಗಳು ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶಗಳ ಸರ್ವಾಂಗೀಣ ಅಭಿವೃದಿಟಛಿಗೆ ಬಿ.ಎಸ್. ಯಡಿಯೂರಪ್ಪ ಸರ್ಕಾರ ಸದಾ ಸಿದಟಛಿ ಎಂಬುದನ್ನು ಸಾಬೀತುಪಡಿಸಲು ಇದೊಂದು ಪ್ರಮುಖ ವೇದಿಕೆಯಾಗಿ ಮಾರ್ಪಡಲಿದ್ದು, ಅದಕ್ಕಾಗಿ ರಾಜ್ಯದ ಆಡಳಿತ ಸಂಪೂರ್ಣವಾಗಿ ತೊಡಗಿಸಿಕೊಂಡಿದೆ.

ಹುಬ್ಬಳ್ಳಿ ಸಮಾವೇಶದ ಮೂಲಕ ಬೆಂಗಳೂರು ನಂತರ ರಾಜ್ಯದ ದ್ವಿತೀಯ ಸ್ತರದ ನಗರಗಳನ್ನು ಅಭಿವೃದಿಟಛಿ ಪಡಿಸಲು ಹಾಗೂ ಇಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಇನ್ವೆಸ್ಟ್ ಕರ್ನಾಟಕ ವರದಾನವಾಗಿ ಬಂದಿದೆ. ದೇಶ- ವಿದೇಶದ ನೂರಾರು ಉದ್ಯಮಪತಿಗಳು ಪಾಲ್ಗೊಳ್ಳುವುದು ಖಚಿತವಾಗಿದ್ದು, ಸಮಾವೇಶ ಯಶಸ್ವಿಯಾಗುವ ವಿಶ್ವಾಸ ಆಯೋಜಕರಲ್ಲಿ ಮೂಡಿದೆ.

2006ರಲ್ಲಿ ಹುಬ್ಬಳ್ಳಿಯಲ್ಲಿ ಜಿಮ್ (ಗ್ಲೋಬಲ್ ಇನ್ವೆಸ್ಟರ್ಸ್ ಮೀಟ್) ಮಾಡಲಾಗಿತ್ತು. ಆದರೆ, ಅಂದಿನ ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದಾಗಿ ನಿರೀಕ್ಷಿತ ಯಶ ಕಾಣಲಿಲ್ಲ. ಸಂಕಲ್ಪ ಸೆಮಿ ಕಂಡಕ್ಟರ್ ಕಂಪನಿ ಸೇರಿ ಕೆಲವೇ ಕಂಪನಿಗಳು ಉದ್ಯಮ ಆರಂಭಿಸಿದವು.

ಜಗದೀಶ ಶೆಟ್ಟರ್ ಅವರೇ ಕೈಗಾರಿಕೆ ಮಂತ್ರಿಯಾಗಿದ್ದರಿಂದ ಈ ಭಾಗದ ಸರ್ವತೋಮುಖ ಅಭಿವೃದಿಟಛಿಗೆ ವಿಶೇಷ ಕಾಳಜಿಯಿಂದ ಕಾರ್ಯೋನ್ಮುಖರಾಗಿದ್ದಾರೆ. ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಜೋಶಿ ಅವರು ಕೂಡ ರಾಷ್ಟ್ರ ಮಟ್ಟದಲ್ಲಿ ಪ್ರಯತ್ನ ಮಾಡಿ ದೊಡ್ಡ ದೊಡ್ಡ ಉದ್ಯಮಿಗಳ ಮನವೊಲಿಸಿ ಇದರಲ್ಲಿ ಭಾಗವಹಿಸುವಂತೆ ಶ್ರಮಿಸಿದ್ದಾರೆ. ಮುಂಬೈ, ಹೈದರಾಬಾದ್ ಮುಂತಾದೆಡೆ ರೋಡ್ ಶೋ ನಡೆಸಿ ಉದ್ಯಮಿಗಳಿಗೆ ಆಹ್ವಾನ ನೀಡಿ ಬರಲಾಗಿದೆ. ಈ ಭಾಗದ ಸಣ್ಣ ಹಾಗೂ ದೊಡ್ಡ ಕೈಗಾರಿಕೋದ್ಯಮಿಗಳು ಸಹ ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶವನ್ನು ಎದುರು ನೋಡುತ್ತಿದ್ದಾರೆ.

ಈ ಎಲ್ಲದರ ನಡುವೆ ಶೈಕ್ಷಣಿಕ ತಜ್ಞರು, ಉದ್ಯಮಿಗಳು, ಐಟಿ ಬಿಟಿ ಪರಿಣಿತರು ಇನ್ವೆಸ್ಟ್ ಕರ್ನಾಟಕ ಯಶಸ್ವಿಗೊಳಿಸಲು ಅಗತ್ಯ ಸಲಹೆ ಸೂಚನೆಗಳನ್ನು ನೀಡುತ್ತ ಬಂದಿದ್ದಾರೆ. ಅವುಗಳನ್ನೆಲ್ಲ ಗಮನದಲ್ಲಿಟ್ಟುಕೊಂಡು ಮುಂದಡಿ ಇಡಲಾಗಿದ್ದು, ಹೂಡಿಕೆದಾರರ ಸಮಾವೇಶ ಉತ್ತರ ಕರ್ನಾಟ ಭಾಗಕ್ಕೆ ಒಳ್ಳೆಯ ಕೊಡುಗೆ ನೀಡುವ ಭರವಸೆ ಬಂದಿದೆ.

ಸಮಾವೇಶದಲ್ಲಿ ನೈಋತ್ಯ ರೈಲ್ವೆ ವಲಯ ಭಾಗಿ

ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶದಲ್ಲಿ ನೈಋತ್ಯ ರೈಲ್ವೆ ವಲಯ ಭಾಗವಹಿಸುತ್ತಿದೆ. ಭಾರತೀಯ ರೈಲ್ವೆಗೆ ವಿವಿಧ ಸಾಮಗ್ರಿಗಳನ್ನು ಪೂರೈಸುವ ಅಂದಾಜು 20 ಉದ್ದಿಮೆಯವರು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.

ನೈಋತ್ಯ ರೈಲ್ವೆ ವಲಯ ಹಾಕಿರುವ ಮಳಿಗೆಯಲ್ಲಿ ಎಮರ್ಜೆನ್ಸಿ ಬ್ರೇಕ್ ಎಕ್ಸಿಲೇಟರ್, ಸ್ಪೀಡ್ ಸೆನ್ಸಾರ್ ಜಿ. 16, ಬ್ರೇಕ್ ಸಿಲಿಂಡರ್, ವಿಎಚ್​ಎಫ್ ಟ್ರಾನ್ಸ್​ಮೀಟರ್, ಸರ್ಜ್ ಪ್ರೊಟೆಕ್ಷನ್ ಡಿವೈಸ್ ಮತ್ತಿತರ ಉತ್ಪನ್ನಗಳನ್ನು ಪ್ರದರ್ಶಿಸಲಾಗುತ್ತಿದೆ.

ಪ್ರಧಾನಿಯವರ ಮೇಕ್ ಇನ್ ಇಂಡಿಯಾ ಯೋಜನೆಯಡಿ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಈ ಸಮ್ಮೇಳನದ ಬಗ್ಗೆ ಆಸಕ್ತಿ ವಹಿಸಿದ್ದು, ಭಾಗವಹಿಸುವಂತೆ ರೈಲ್ವೆ ಅಧಿಕಾರಿಗಳಿಗೂ ಸೂಚಿಸಿದ್ದಾರೆ. ಧಾರವಾಡ-ಬೆಳಗಾವಿ ನಡುವಿನ ಕಿತ್ತೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ರೈಲುಗಳ ವಿಶೇಷ ಬಿಡಿಭಾಗಗಳ ತಯಾರಿಕೆ ಕೇಂದ್ರಕ್ಕೂ ಈ ಸಮಾವೇಶ ಸಹಾಯಕವಾಗಲಿದೆ ಎಂದು ನೈಋತ್ಯ ರೈಲ್ವೆ ನಿರೀಕ್ಷೆ ಇಟ್ಟುಕೊಂಡಿದೆ.

ಸ್ಥಳೀಯವಾಗಿ ಖರೀದಿಯಲ್ಲಿ ಭಾರತೀಯ ರೈಲು ದೇಶದ ದೊಡ್ಡ ಗ್ರಾಹಕವಾಗಿದೆ. 2018-19ರಲ್ಲಿ 72,362 ಕೋಟಿ ರೂ. ಮೌಲ್ಯದ ವಸ್ತುಗಳ ಖರೀದಿ ಪ್ರಕ್ರಿಯೆ ನಡೆದಿದ್ದು, ಇದರಲ್ಲಿ ಶೇ. 98ರಷ್ಟು ವಸ್ತುಗಳು ದೇಶೀಯ ಉತ್ಪಾದನೆಯಾಗಿದೆ. ಅಗತ್ಯ ಎಲ್ಲ ವಸ್ತುಗಳ ಖರೀದಿಯನ್ನು ಡಿಜಿಟಲೀಕರಣಗೊಳಿಸಲಾಗಿದೆ.

ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ 3 ಸಾವಿರಕ್ಕೂ ಹೆಚ್ಚು ಬಗೆಯ ವಸ್ತುಗಳನ್ನು ಸಂಗ್ರಹಿಸುವ 6 ಗೋದಾಮುಗಳಿವೆ. ಪ್ರತಿ ವರ್ಷ ಅಂದಾಜು 2 ಸಾವಿರ ಕೋಟಿ ರೂ. ಮೌಲ್ಯದ ವಸ್ತುಗಳನ್ನು ಸಂಗ್ರಹಿಸಲಾಗುತ್ತದೆ. ಅಧಿಕೃತ ಮಾರಾಟಗಾರರಿಂದ ಅಗತ್ಯ ವಸ್ತುಗಳ ಖರೀದಿ ಪ್ರಕ್ರಿಯೆಯನ್ನು ಜರುಗಿಸಲಾಗುತ್ತದೆ.

ಖರೀದಿ ಪ್ರಕ್ರಿಯೆಯಲ್ಲಿ ಸೂಕ್ಷ್ಮಮತ್ತು ಸಣ್ಣ ಉದ್ದಿಮೆಗಳು (ಎಂಎಸ್​ಇ), ನವೋದ್ಯಮಿಗಳು ಹಾಗೂ ಸ್ಥಳೀಯ ಮಾರಾಟಗಾರರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಸ್ಟಾರ್ಟಪ್​ಗಳಿಗೆ ಬೆಂಬಲ

ಸ್ಟಾರ್ಟಪ್ ಇಂಡಿಯಾ ಘೊಷಣೆಯನ್ವಯ ಸಣ್ಣ ಮತ್ತು ಅತಿಸಣ್ಣ ಉದ್ಯಮ ಕ್ಷೇತ್ರದಲ್ಲಿ ಹೊಸಬರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಇದುವರೆಗೆ ನಿಗದಿತ ವಹಿವಾಟು ನಡೆಸಿರಬೇಕು ಮತ್ತು ನಿಗದಿತ ಅನುಭವ ಹೊಂದಿರಬೇಕು ಎಂಬ ಷರತ್ತನ್ನು ರೈಲ್ವೆ ಇಲಾಖೆಯಲ್ಲಿ ತೆಗೆದುಹಾಕಲಾಗಿದೆ. ನಿಗದಿತ ಗುಣಮಟ್ಟ ಮತ್ತು ತಾಂತ್ರಿಕ ನೈಪುಣ್ಯದಿಂದ ಕೂಡಿದ್ದರೆ ಸರಬರಾಜಿನ ಟೆಂಡರ್​ನಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ.

ಕಾರ್ಯಕ್ರಮಗಳ ವಿವರ

ಬೆಳಗ್ಗೆ 10 ಗಂಟೆಗೆ ಉತ್ತರ ಕರ್ನಾಟಕ ವಲಯದ ಸಾಮರ್ಥ್ಯ ಹಾಗೂ ಬಲವರ್ಧನೆ ಕೈಗಾರಿಕಾ ನುಡಿ, ಮಧ್ಯಾಹ್ನ 12ಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಮಾವೇಶ ಉದ್ಘಾಟನೆ ಮಾಡುವರು. ಸಚಿವ ಜಗದೀಶ ಶೆಟ್ಟರ್ ಅಧ್ಯಕ್ಷತೆ ವಹಿಸುವರು. ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಸದಾನಂದ ಗೌಡ, ಸುರೇಶ ಅಂಗಡಿ ಹಾಗೂ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಅತಿಥಿಗಳಾಗಿ ಭಾಗವಹಿಸುವರು.

ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ, ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ, ಮೊದಲಾದವರು ಗೌರವ ಅತಿಥಿಗಳಾಗಿ ಪಾಲ್ಗೊಳ್ಳುವರು. ಮಧ್ಯಾಹ್ನ 2.30ಕ್ಕೆ ಎಫ್​ಎಂಸಿಜಿ (ಫಾಸ್ಟ್ ಮೂವಿಂಗ್ ಕಂಜುಮರ್ ಗೂಡ್ಸ್) ಅಧಿವೇಶನ ನಡೆಯಲಿದೆ. 3.30ಕ್ಕೆ ಸಮಾರೋಪ ನಡೆಯಲಿದ್ದು, ವಿವಿಧ ಕಂಪನಿಗಳು ಒಡಂಬಡಿಕೆಗೆ ಸಹಿ ಹಾಕಲಿವೆ.

ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ. ಅಶ್ವತ್ಥ ನಾರಾಯಣ, ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಅತಿಥಿಗಳಾಗಿ ಪಾಲ್ಗೊಳ್ಳುವರು.

ಉತ್ತರ ಕರ್ನಾಟಕ ವಿಕಾಸಕ್ಕೆ ಮಹತ್ವದ ಹೆಜ್ಜೆ

ಹುಬ್ಬಳ್ಳಿ: ದೇಶ ವಿದೇಶಗಳಿಂದ ಹೂಡಿಕೆದಾರರನ್ನು ಸೆಳೆಯುವ ಉದ್ದೇಶದಿಂದ ಇಲ್ಲಿಯ ಡೆನಿಸನ್ಸ್ ಹೋಟೆಲ್​ನಲ್ಲಿ ಶುಕ್ರವಾರ ಆಯೋಜಿಸಿರುವ ‘ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ’ ಸಮಾವೇಶಕ್ಕೆ ಸಕಲ ಸಿದಟಛಿತೆಗಳು ಪೂರ್ಣಗೊಂಡಿವೆ.

ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಅರವಿಂದ ಬೆಲ್ಲದ, ಜಿಲ್ಲಾಧಿಕಾರಿ ದೀಪಾ ಚೋಳನ್, ಇತರರು ಗುರುವಾರ ಸಂಜೆ ಸಮಾವೇಶದ ಸಿದಟಛಿತೆಗಳನ್ನು ಪರಿಶೀಲಿಸಿದರು.

700ಕ್ಕೂ ಅಧಿಕ ಹೂಡಿಕೆದಾರರು: ಸಮಾವೇಶದಲ್ಲಿ ದೇಶದ ವಿವಿಧ ಭಾಗಗಳಿಂದ 700ಕ್ಕೂ ಅಧಿಕ ಹೂಡಿಕೆದಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಸಚಿವ ಜಗದೀಶ ಶೆಟ್ಟರ್ ಸುದ್ದಿಗಾರರಿಗೆ ತಿಳಿಸಿದರು. ಸಮಾವೇಶದಲ್ಲಿ ಭಾಗವಹಿಸು ವುದಾಗಿ ಈಗಾಗಲೇ 650ಕ್ಕೂ ಹೆಚ್ಚು ಉದ್ಯಮಿಗಳು ಖಚಿತ ಪಡಿಸಿದ್ದಾರೆ. ಇನ್ನೂ ಕೆಲವರು ದೂರವಾಣಿ ಮೂಲಕ ಸಂಪರ್ಕ ಮಾಡುತ್ತಿದ್ದಾರೆ. 700 ಉದ್ಯಮಿಗಳು ಬರಬಹುದು. 100ಕ್ಕೂ ಹೆಚ್ಚು ಆಹ್ವಾನಿತರು, ಹೈದರಾಬಾದ್, ಮುಂಬೈ, ಗೌಹಾತಿ ಸೇರಿ ಹಲವೆಡೆಯಿಂದ ಹೂಡಿಕೆದಾರರು ಬರಲಿದ್ದಾರೆ ಎಂದರು.

ಸಮಾವೇಶ ಆರಂಭದಲ್ಲಿ ಉತ್ತರ ಕರ್ನಾಟಕದ ಪರಿಚಯ ಮಾಡಿಕೊಟ್ಟು, ಇಲ್ಲಿ ಹೂಡಿಕೆ ಮತ್ತು ಕೈಗಾರಿಕೆ ಸ್ಥಾಪನೆಯ ಅವಕಾಶ, ಸಾಧ್ಯತೆಗಳ ವಿವರವಾದ ಮಾಹಿತಿ ನೀಡಲಾಗುವುದು. ಮಧ್ಯಾಹ್ನ ಭೋಜನ ವಿರಾಮದ ನಂತರ ಆಸಕ್ತ ಉದ್ಯಮಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು. ನಂತರ ಹೂಡಿಕೆಯ ವಿವರ ಒದಗಿಸಲಾಗುವುದು ಎಂದರು.

ಪ್ರತಿಷ್ಠಿತ ಕಂಪನಿಗಳಿಗೆ ಆಹ್ವಾನ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ದೇಶದ ಇತಿಹಾಸದಲ್ಲಿ ಮೊದಲ ಬಾರಿ ದ್ವಿತೀಯ ಸ್ತರದ ನಗರಗಳಲ್ಲಿ ನಡೆಯುತ್ತಿರುವ ಹೂಡಿಕೆದಾರರ ಸಮಾವೇಶಕ್ಕೆ ಎಲ್ಲ ಸಿದಟಛಿತೆಗಳಾಗಿವೆ. ಭಾರತ ಹಾಗೂ ಕರ್ನಾಟಕ ಸರ್ಕಾರ ಎರಡೂ ಕಡೆ ಯಿಂದ ಉದ್ಯಮಿಗಳು, ಪ್ರತಿಷ್ಠಿತ ಕಂಪನಿಗಳನ್ನು ಆಮಂತ್ರಿಸ ಲಾಗಿದೆ. ಗೋದ್ರೆಜ್, ಅದಾನಿ, ಟಾಟಾ, ಹಿಂದೂಜಾ, ಎಲ್ ಆಂಡ್ ಟಿ ಸೇರಿ ಹಲವು ಕಂಪನಿಗಳು ತಮ್ಮ ಪ್ರತಿನಿಧಿಗಳನ್ನು ಕಳುಹಿಸುವುದಾಗಿ ತಿಳಿಸಿದ್ದಾರೆ ಎಂದರು.

ಈ ಭಾಗದಲ್ಲಿ ಹೂಡಿಕೆ ಮಾಡಲು ಮುಂದೆ ಬರುವ ಉದ್ಯಮಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಭೂಮಿ, ಇತರ ಮೂಲ ಸೌಕರ್ಯಗಳನ್ನು ನೀಡಲಾಗುವುದು ಎಂದರು. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತಾ, ಕೈಗಾರಿಕಾ ಅಭಿವೃದಿಟಛಿ ಆಯುಕ್ತೆ ಗುಂಜನ್ ಕೃಷ್ಣ, ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮೋಹನ ಭರಮಕ್ಕನವರ, ಇತರರು ಇದ್ದರು.

ಹೂಡಿಕೆಗೆ ಮುಂದೆ ಬರುವವರ ಬೆಂಬಲಕ್ಕೆ ಸಿದ್ಧ

ಹುಬ್ಬಳ್ಳಿ: ಇಲ್ಲಿಯ ಬಸವ ಆರ್ಟ್, ಟೆಕ್ನಿಕಲ್ ಆಂಡ್ ರಿಸೈಕ್ಲಿಂಗ್ ಮ್ಯೂಜಿಯಂ ವತಿಯಿಂದ ಗುರುವಾರ ‘ಇನ್ವೆಸ್ಟ್ ರಿಸೈಕಲ್’ ಕಾರ್ಯಕ್ರಮ ನಡೆಯಿತು.

ಉದ್ಘಾಟನೆ ನೆರವೇರಿಸಿದ ಪ್ರಭು ಹೊನ್ನವಾಡ ಮಾತನಾಡಿ ಪೇಪರ್, ಪ್ಲಾಸ್ಟಿಕ್, ಕಬ್ಬಿಣ ಮತ್ತು ಇತರ ಲೋಹ ತ್ಯಾಜ್ಯಗಳನ್ನು ಸುಡುವ/ ಚೆಲ್ಲುವ ಬದಲಾಗಿ ಕಚ್ಚಾ ವಸ್ತುಗಳನ್ನಾಗಿ ಪರಿಗಣಿಸಿ ಹೊಸ ವಸ್ತುಗಳನ್ನು ಉತ್ಪಾದಿಸಿ ಮರುಬಳಕೆ ಮಾಡುವುದು ಇಂದಿನ ಅಗತ್ಯ. ಈ ಕ್ಷೇತ್ರದಲ್ಲಿ ಹೂಡಿಕೆಗೆ ಉತ್ತಮ ಅವಕಾಶವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮ್ಯೂಜಿಯಂನ ವೀರಪ್ಪ ಅರಕೇರಿ ಮಾತನಾಡಿ, ಹುಬ್ಬಳ್ಳಿ-ಧಾರವಾಡದಲ್ಲಿ ನಾವು ಈಗಾಗಲೇ ಹವಾಮಾನ ಬದಲಾವಣೆಯ ತುರ್ತು ಸ್ಥಿತಿ ಘೊಷಿಸಿದ್ದೇವೆ. ಮಾಲಿನ್ಯ ಪ್ರಮಾಣ ತಗ್ಗಿಸಲು ಕೂಡಲೆ ಗಮನ ಹರಿಸದಿದ್ದರೆ ಪರಿಸ್ಥಿತಿ ಬಿಗಡಾಯಿಸಲಿದೆ. ಆದ್ದರಿಂದ ತ್ಯಾಜ್ಯಗಳ ಮರುಬಳಕೆಗೆ ಆದ್ಯತೆ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ, ರಿ ಸೈಕ್ಲಿಂಗ್ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಯಾರಾದರೂ ಮುಂದೆ ಬಂದರೆ ಅವರಿಗೆ ಲೈಸನ್ಸ್ ಪಡೆಯುವಲ್ಲಿಂದ ಹಿಡಿದು ಯಂತ್ರೋಪಕರಣ, ನುರಿತ ಕಾರ್ವಿುಕರು, ತಂತ್ರಜ್ಞಾನ ಸೇರಿ ಎಲ್ಲ ರೀತಿಯ ಬೆಂಬಲ ನೀಡಲು ಸಿದಟಛಿ ಎಂದರು. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆ ಪ್ರತಿನಿಧಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net