ಹೂಟಗಳ್ಳಿ ನಗರಸಭೆಗೆ ಬೇಕಿದೆ ಸೌಲಭ್ಯ

Published on

ಅಭಿವೃದ್ಧಿಗೆ ಅನುದಾನದ ಕೊರತೆ * ನನಸಾಗದ ಪ್ರಗತಿಯ ಕನಸು


ಅವಿನಾಶ್ ಜೈನಹಳ್ಳಿ ಮೈಸೂರು
ನೂತನವಾಗಿ ರಚನೆಯಾಗಿರುವ ಹೂಟಗಳ್ಳಿ ನಗರಸಭೆ ಅನುದಾನ, ಸಿಬ್ಬಂದಿ ಇನ್ನಿತರ ಕೊರತೆಗಳ ನಡುವೆ ಅಭಿವೃದ್ಧಿಯ ಕನಸು ಕಾಣುತ್ತಿದೆ.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೆಳವಾಡಿ, ಕೂರ್ಗಳ್ಳಿ, ಹೂಟಗಳ್ಳಿ, ಹಿನಕಲ್ ಗ್ರಾಮ ಪಂಚಾಯಿತಿಗಳನ್ನು ಒಟ್ಟುಗೂಡಿಸಿ ಹೂಟಗಳ್ಳಿ ನಗರಸಭೆ ರಚಿಸಲಾಗಿದೆ. ಕಳೆದ ಆಗಸ್ಟ್‌ನಿಂದ ಹೊಸ ಸಂಸ್ಥೆ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಹೂಟಗಳ್ಳಿ ನಗರಸಭೆ ವ್ಯಾಪ್ತಿಯಲ್ಲಿ 70 ಸಾವಿರ ಜನಸಂಖ್ಯೆ ಇದ್ದು, ಹಲವು ‘ಇಲ್ಲ’ಗಳ ನಡುವೆ ನಾಗರಿಕರಿಗೆ ಉತ್ತಮ ಸೇವೆ ಒದಗಿಸುವುದು ಬಹುದೊಡ್ಡ ಸವಾಲಾಗಿದೆ.


ನೂತನ ನಗರಸಭೆಯ ಬೆಳವಣಿಗೆ, ಅಭಿವೃದ್ಧಿ ಹಾಗೂ ಆಡಳಿತ ನಿರ್ವಹಣೆಗೆ ಬೇಕಾದ ಮೂಲಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿಕೊಟ್ಟಿಲ್ಲ. ಇದರಿಂದಾಗಿ ತ್ರಿಶಂಕು ಸ್ಥಿತಿಯಲ್ಲಿರುವ ನಗರಸಭೆ ವ್ಯಾಪ್ತಿಯ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ವ್ಯಾಪ್ತಿಯ ಎಲ್ಲ ದಾಖಲೆಗಳನ್ನು ನಗರಾಭಿವೃದ್ಧಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಗ್ರಾಮಠಾಣೆ ವ್ಯಾಪ್ತಿಯಲ್ಲಿರುವ ಆಸ್ತಿ, ಮನೆಗಳ ವಿವರ, ಕಟ್ಟಡಗಳು, ಲೆಕ್ಕಪತ್ರ, ಸಾರ್ವಜನಿಕ ಆಸ್ತಿ ಮಾಹಿತಿಗಳನ್ನು ನೀಡಲಾಗಿದೆ. ಎಲ್ಲ ದಾಖಲೆಗಳ ಹಸ್ತಾಂತರವಾಗಿ ನಗರಸಭೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ.


ಸಿಬ್ಬಂದಿ ಸಮಸ್ಯೆ:
ನೂತನ ನಗರಸಭೆಗೆ ಸಿಬ್ಬಂದಿಯದ್ದೇ ದೊಡ್ಡ ಕೊರತೆಯಾಗಿದೆ. ಅಗತ್ಯಕ್ಕೆ ತಕ್ಕಷ್ಟು ಸಿಬ್ಬಂದಿ ಇಲ್ಲವಾಗಿದೆ. ನಗರಸಭೆ ರಚನೆಗೊಂಡ ನಂತರ ಇದರ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಪಿಡಿಒ, ಕಾರ್ಯದರ್ಶಿಗಳನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಹಿಂಪಡೆದಿದೆ. ಆದರೆ, ಡೇಟಾ ಎಂಟ್ರಿ ಆಪರೇಟರ್, ವಾಟರ್‌ಮನ್, ಬಿಲ್ ಕಲೆಕ್ಟರ್ ಸೇರಿದಂತೆ 10 ನೌಕರರು, 70 ಪೌರಕಾರ್ಮಿಕರು ನಗರಸಭೆಯಲ್ಲಿ ಮುಂದುವರಿದಿದ್ದಾರೆ. ಇದರ ಜತಗೆ, ನಗರಾಭಿವೃದ್ಧಿ ಇಲಾಖೆಯಿಂದ ಪೌರಾಯುಕ್ತ, ಸಹಾಯಕ ಕಾರ್ಯಪಾಲ ಇಂಜಿನಿಯರ್, ಸಮುದಾಯ ಸಂಘಟಕ, ಸಹಾಯಕ ಕಾರ್ಯಪಾಲ ಇಂಜಿನಿಯರ್ (ಪರಿಸರ) ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ಮಾತ್ರ ನೀಡಲಾಗಿದೆ. ರೆವಿನ್ಯೂ ಇನ್ಸ್‌ಪೆಕ್ಟರ್, ಜೂನಿಯರ್ ಇಂಜಿನಿಯರ್, ಆರೋಗ್ಯಾಧಿಕಾರಿ ಸೇರಿದಂತೆ ಕೆಲವು ಪ್ರಮುಖ ಹುದ್ದೆಗಳು ಖಾಲಿ ಇವೆ. ನಗರಸಭೆಯ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿಯಾಗಿ 40 ಪೌರಕಾರ್ಮಿಕರು ಬೇಕಾಗಿದ್ದಾರೆ. ಡೇಟಾ ಎಂಟ್ರಿ ಆಪರೇಟರ್, ಬಿಲ್ ಕಲೆಕ್ಟರ್, ಡಿ ಗ್ರೂಪ್ ನೌಕರರು ಹಾಗೂ ಪ್ರಥಮ, ದ್ವಿತೀಯ ದರ್ಜೆ ಗುಮಾಸ್ತರು ಬೇಕಾಗಿದ್ದಾರೆ. ಆದಷ್ಟು ಬೇಗ ಅಗತ್ಯ ಸಿಬ್ಬಂದಿ ನೇಮಕಕ್ಕೆ ಸರ್ಕಾರ ಕ್ರಮ ವಹಿಸಬೇಕಾಗಿದೆ.


ಬಾಡಿಗೆ ಕಟ್ಟಡದಲ್ಲಿ ಕಚೇರಿ:
ಹೂಟಗಳ್ಳಿ ನಗರಸಭೆ ಕಚೇರಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೂಟಗಳ್ಳಿಯ ಕೆಎಚ್‌ಬಿ ಬಡಾವಣೆಯಲ್ಲಿ ಸ್ವಂತ ಹಾಗೂ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಒಂದು ಎಕರೆ ಜಾಗ ಗುರುತಿಸಲಾಗಿದೆ. ಈ ಜಾಗದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಡಿಪಿಆರ್ ತಯಾರಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. ನೆಲ ಮಹಡಿ, ಮೊದಲ ಮಹಡಿ ಹಾಗೂ ಎರಡನೇ ಮಹಡಿ ಒಳಗೊಂಡ ಕಟ್ಟಡ ನಿರ್ಮಿಸಲು ಪ್ಲಾನ್ ಮಾಡಲಾಗಿದೆ.
ಕೂರ್ಗಳ್ಳಿಯ ಎರಡು ಎಕರೆ ಜಾಗದಲ್ಲಿ ಸದ್ಯಕ್ಕೆ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ನಗರಸಭೆಯಲ್ಲಿ ಪ್ರಸ್ತುತ ಕಸ ಸಂಗ್ರಹಿಸುವ ಒಂದೇ ಒಂದು ವಾಹನ ಇಲ್ಲ. ಬದಲಿಗೆ ಎಲ್ಲ ವಾಹನಗಳನ್ನೂ ಬಾಡಿಗೆಗೆ ಪಡೆಯಲಾಗಿದೆ. ಹಾಗಾಗಿ, ಕಸ ಸಂಗ್ರಹಿಸುವ 20 ಆಟೋ ಟಿಪ್ಪರ್, 1 ಜೆಸಿಬಿ, 1 ಟ್ರಾೃಕ್ಟರ್, 1 ಜಟ್ಟಿಂಗ್ ಮಿಷನ್, ಯುಜಿಡಿ ಕ್ಲೀನ್ ಮಾಡುವ 1 ಮಿಷನ್‌ಗಳಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.


14 ಕೋಟಿ ರೂ.ತೆರಿಗೆ ಸಂಗ್ರಹ:
ನಗರಸಭೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹ ಆರಂಭಿಸಿದ್ದು, ಈಗಾಗಲೇ 14 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ. ಆಸ್ತಿ ತೆರಿಗೆ, ನೀರಿನ ತೆರಿಗೆ, ಟ್ರೇಡ್ ಲೈಸೆನ್ಸ್ ಸೇರಿದಂತೆ ವಿವಿಧ ಮೂಲಗಳಿಂದ ಅನುದಾನ ಕ್ರೋಡೀಕರಣವಾಗಲಿದೆ.
ಹೂಟಗಳ್ಳಿಯಲ್ಲಿ ಕೈಗಾರಿಕಾ ಪ್ರದೇಶ, ಹೆಬ್ಬಾಳ ಕೈಗಾರಿಕಾ ಪ್ರದೇಶ, ಬೆಳವಾಡಿ ಕೈಗಾರಿಕಾ ಪ್ರದೇಶ ಸೇರಿದಂತೆ ಸಾಕಷ್ಟು ವಾಣಿಜ್ಯ ಮಳಿಗೆಗಳು ಇದ್ದು, ಆದಾಯವೂ ಚೆನ್ನಾಗಿದೆ. 1112 ಕೈಗಾರಿಕೆಗಳಿದ್ದು, ಈ ಪೈಕಿ ಶೇ.90ರಷ್ಟು ಸಣ್ಣ ಕೈಗಾರಿಕೆಗಳಾಗಿವೆ. ಇನ್ಫೋಸಿಸ್, ಜೆ.ಕೆ.ಟೈರ್ಸ್‌, ಎಲ್ ಆ್ಯಂಡ್ ಟಿ ಸೇರಿದಂತೆ ಅನೇಕ ದೊಡ್ಡ ಸಂಸ್ಥೆಗಳು ನಗರಸಭೆ ವ್ಯಾಪ್ತಿಗೆ ಸೇರುತ್ತವೆ. ಬಹುತೇಕ ಮನೆಗಳಿಗೆ ಕಾವೇರಿ ನೀರು ನೀಡಲಾಗುತ್ತಿದೆ. ಕೆಲ ಮನೆಗಳಿಗೆ ಬೋರ್‌ವೆಲ್ ನೀರನ್ನೂ ಪೂರೈಕೆ ಮಾಡಲಾಗುತ್ತಿದೆ.
ಸದ್ಯ ನಗರಸಭೆಯಲ್ಲಿರುವ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ವ್ಯಾಪ್ತಿಯ ಸಿಬ್ಬಂದಿಗೆ ಆರು ತಿಂಗಳ ಸಂಬಳ ನೀಡಿರಲಿಲ್ಲ. ಹಾಗಾಗಿ, ಸಂಗ್ರಹವಾಗಿದ್ದ 14 ಕೋಟಿ ರೂ.ತೆರಿಗೆ ಹಣದಲ್ಲೇ 1.5 ಕೋಟಿ ರೂ.ಗಳನ್ನು ಸಂಬಳವಾಗಿ ನೀಡಲಾಗಿದೆ.


60 ಕೋಟಿ ರೂ.ವಿಶೇಷ ಅನುದಾನಕ್ಕೆ ಮನವಿ:

ನಗರಸಭೆ ಹೊಸದಾಗಿ ರಚನೆಯಾಗಿರುವ ಹಿನ್ನೆಲೆಯಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಲು ಹೆಚ್ಚಿನ ಅನುದಾನದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 60 ಕೋಟಿ ರೂ. ಅನುದಾನ ನೀಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಕೋಟ್..
ನೂತನ ಹೂಟಗಳ್ಳಿ ನಗರಸಭೆಯನ್ನು ಜಿಲ್ಲೆಯಲ್ಲೇ ಮಾದರಿಯಾಗಿ ಅಭಿವೃದ್ಧಿಪಡಿಸಲಾಗುವುದು. ಆದರೆ, ಸದ್ಯ ಅನುದಾನ, ಸಿಬ್ಬಂದಿ ಸೇರಿದಂತೆ ಅನೇಕ ಕೊರತೆಗಳಿವೆ. ಈ ನಿಟ್ಟಿನಲ್ಲಿ ಅಗತ್ಯ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಗತ್ಯ ಸಿಬ್ಬಂದಿ ನೇಮಕ ಮಾಡುವಂತೆಯೂ ಕೋರಲಾಗಿದೆ.

ಟಿ.ಎನ್.ನರಸಿಂಹಮೂರ್ತಿ, ಪೌರಾಯುಕ್ತ, ಹೂಟಗಳ್ಳಿ ನಗರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net