ಹೂಗ್ಯಂನಲ್ಲಿ ಪವರ್ ಸ್ಟೇಷನ್ ಸ್ಥಾಪಿಸಿ

Published on

ಹನೂರು: ಜನರ ಸಮಸ್ಯೆಗಳಿಗೆ ಸ್ಪಂದಿಸದ ಸೆಸ್ಕ್ ಜೆಇ ಅವರನ್ನು ವರ್ಗಾವಣೆ ಮಾಡಿ. ಅವೈಜ್ಞಾನಿಕವಾಗಿ ಅಳವಡಿಸಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ. ಹೂಗ್ಯಂನಲ್ಲಿ ಪವರ್ ಸ್ಟೇಷನ್ ಸ್ಥಾಪಿಸಿ. ನಿವೇಶನಗಳ ಮೇಲೆ ಹಾದುಹೋಗಿರುವ ವಿದ್ಯುತ್ ತಂತಿ ತೆರವು ಮಾಡಿ...

ಇದು ಹನೂರಿನ ಸೆಸ್ಕ್ ಉಪ ವಿಭಾಗೀಯ ಕಚೇರಿ ಆವರಣದಲ್ಲಿ ಗುರುವಾರ ಕಾರ್ಯನಿರ್ವಾಹಕ ಇಂಜಿನಿಯರ್ ತಬಸ್ಸು ಅಸ್ಪಾಬಾನು ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಕೇಳಿ ಬಂದ ಪ್ರಮುಖ ಒತ್ತಾಯಗಳು. ಸಭೆಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್ ಮಾತನಾಡಿ, ವಿದ್ಯುತ್ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕರೆ ಮಾಡಿದರೆ ತಾಲೂಕಿನ ಕೌದಳ್ಳಿಯ ಜೆಇ ಅವರು ಫೋನ್ ಸ್ವೀಕರಿಸುವುದಿಲ್ಲ. ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಮಹಿಳೆಯೊಬ್ಬರಿಗೆ ನಿರಪೇಕ್ಷಣಾ ಪತ್ರ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಇದರಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಇನ್ನು ಗಡಿ ಭಾಗವಾದ ಹೂಗ್ಯಂನಲ್ಲಿ ಪವರ್ ಸ್ಟೇಷನ್ ಸ್ಥಾಪಿಸುವಂತೆ ಕಳೆದ ಸಭೆಯಲ್ಲಿ ಮನವಿ ಮಾಡಲಾಗಿತ್ತು. ಯಾವುದೇ ಕಾರ್ಯವಾಗಿಲ್ಲ. ಹಾಗಾಗಿ ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು. ಇದಕ್ಕೆ ಇಇ ಅವರು ಪ್ರತಿಕ್ರಿಯಿಸಿ, ಜೆಇ ಅವರ ಕಾರ್ಯವೈಖರಿ ಕುರಿತು ವಿಚಾರಿಸಲಾಗುವುದು. ಪವರ್ ಸ್ಟೇಷನ್ ಸ್ಥಾಪನೆ ಸಂಬಂಧ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಗುರುತಿಸುವ ಜಾಗವು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿರುವುದರಿಂದ ಅನುಮತಿ ಪಡೆದು ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಹನೂರಿನ ಪ್ರಭು ಮಾತನಾಡಿ, ಆರ್.ಎಸ್.ದೊಡ್ಡಿಯ ಆಶ್ರಯ ಬಡಾವಣೆ ನಿವೇಶನಗಳ ಮೇಲೆ ವಿದ್ಯುತ್ ತಂತಿ ಹಾದು ಹೋಗಿದೆ. ಆದ್ದರಿಂದ ಬೇರೆಡೆ ಅಳವಡಿಸುವಂತೆ ಮನವಿ ಮಾಡಿದರು. ಹಸಿರು ಸೇನೆ ತಾಲೂಕು ಅಧ್ಯಕ್ಷ ಚಂಗಡಿ ಕರಿಯಪ್ಪ ಮಾತನಾಡಿ, ಕೌದಳ್ಳಿ ಫೀಡರ್ ವ್ಯಾಪ್ತಿಯಲ್ಲಿ ಬೆಳಗ್ಗೆ ವೇಳೆ ಪಂಪ್‌ಸೆಟ್ ಲೈನ್ ನೀಡಿದರೆ ರೈತರಿಗೆ ಅನುಕೂಲವಾಗಲಿದೆ. ಈ ಬಗ್ಗೆ ಗಮನಹರಿಸಬೇಕು ಎಂದು ಮನವಿ ಮಾಡಿದರು.

ಎಂ.ಜಿ.ದೊಡ್ಡಿಯ ಚಿನ್ನಪ್ಪ ಆಲ್ಬರ್ಟ್ ಮಾತನಾಡಿ, ಅಕ್ರಮ-ಸಕ್ರಮ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಯಲ್ಲಿ ವಿದ್ಯುತ್ ಕಂಬಗಳನ್ನು ಕ್ರಿಯಾ ಯೋಜನೆಯಂತೆ ರಸ್ತೆ ಬದಿಯಲ್ಲಿ ಅಳವಡಿಸಬೇಕು. ಆದರೆ, ನಮ್ಮ ಜಮೀನಿನಲ್ಲಿ ಅವೈಜ್ಞಾನಿಕವಾಗಿ ಅಳವಡಿಸಿದ್ದಾರೆ. ಇದರಿಂದ ತುಂಬಾ ಸಮಸ್ಯೆಯಾಗಿದ್ದು ತೆರವುಗೊಳಿಸುವಂತೆ ಒತ್ತಾಯಿಸಿದರು. ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಇಇ ಅಧಿಕಾರಿಗಳಿಗೆ ಸೂಚಿಸಿದರು.

ಹೊಸ ಅಣಗಳ್ಳಿ ದೊಡ್ಡಿಯ ಕೆಂಪರಾಜು ಮಾತನಾಡಿ, ಚನ್ನಾಲಿಂಗನಹಳ್ಳಿ ಸರ್ವೇ ನಂ.259ರಲ್ಲಿ ದಾರಿ ಒತ್ತುವರಿಯಾಗಿದ್ದು ಮನೆ ನಿರ್ಮಿಸಲಾಗಿದೆ. ಒತ್ತುವರಿ ತೆರವುಗೊಳಿಸಬೇಕು ಎಂದರು. ಶಾಗ್ಯ ಗ್ರಾಮದ ಬಸವರಾಜು ಮಾತನಾಡಿ, ಅಕ್ರಮ-ಸಕ್ರಮ ಯೋಜನೆಯಡಿ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ನನ್ನ ಸಹೋದರ ಶುಲ್ಕ ಪಾವತಿಸಿ 5 ವರ್ಷವಾಗಿದೆ. ಇನ್ನೂ ಸಂಪರ್ಕ ಸಿಕ್ಕಿಲ್ಲ ಎಂದು ದೂರಿದರು. ಅಜ್ಜೀಪುರ ಗ್ರಾಮದ ರೈತರಿಬ್ಬರು ಶಿಥಿಲಗೊಂಡಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು. ಪಟ್ಟಣದ ವಿನಾಯಕ ನಗರದ ನಿವೃತ್ತ ಮುಖ್ಯ ಶಿಕ್ಷಕ ಅಮಲದಾಸ್ ಅವರು ಬಡಾವಣೆಗೆ ಪ್ರತ್ಯೇಕ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಅಳವಡಿಸುವಂತೆ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿದರು.

ಸಮಸ್ಯೆಗಳನ್ನು ಆಲಿಸಿದ ಇಇ ತಬಸ್ಸು ಅಸ್ಪಾಬಾನು ಮಾತನಾಡಿ, ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ ಅಗತ್ಯ ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರದಿಂದ ಈಗಾಗಲೇ ಅನುಮತಿ ದೊರೆತಿದ್ದು ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು. ಸೆಸ್ಕ್ ಎಇಇ ಶಂಕರ್, ಎಇ ರಂಗಸ್ವಾಮಿ, ಜೆಇಗಳಾದ ನವೀನ್, ಮಾದೇಶ್, ಆನಂದ್, ಮಹೇಶ್, ರಘು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net