

ಮೈಸೂರು: ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ರಾಷ್ಟ್ರಪತಿ ಭವನ ಹಾಗೂ ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್ ಪ್ರತಿಕೃತಿಗಳು ಬಣ್ಣ ಬಣ್ಣದ ಪುಷ್ಪಗಳಲ್ಲಿ ಅರಳಲಿವೆ.
ನಗರದ ಕುಪ್ಪಣ್ಣ ಉದ್ಯಾನದಲ್ಲಿ ಸೆ.26ರಿಂದ ಅ.5ರವರೆಗೆ ದಸರಾ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ಇದೇ ಮೊದಲ ಬಾರಿಗೆ ರಾಷ್ಟ್ರಪತಿಗಳು ದಸರಾ ಕಾರ್ಯಕ್ರಮ ಉದ್ಘಾಟಿಸಲಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನ ಪ್ರತಿಕೃತಿ ಮೈದಳೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಬಿ.ಆರ್.ಪೂರ್ಣಿಮಾ ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಕುಪ್ಪಣ್ಣ ಉದ್ಯಾನದ ಒಳಭಾಗದಲ್ಲಿರುವ ಗಾಜಿನ ಮನೆ ಆವರಣದಲ್ಲಿ 20 ಅಡಿ ಎತ್ತರದ ದೆಹಲಿಯ ರಾಷ್ಟ್ರಪತಿ ಭವನದ ಪ್ರತಿಕೃತಿ ನಿರ್ಮಿಸಿ, ಕೆಂಪು, ಬಿಳಿ ಗುಲಾಬಿ, ಸೇವಂತಿಗೆ ಹೂವುಗಳಿಂದ ಅಲಂಕಾರ ಮಾಡಲಾಗುವುದು ಎಂದು ಹೇಳಿದರು.
ಅಪ್ಪುವಿಗೆ ನಮನ:
ನಾಯಕ ನಟ ದಿವಂಗತ ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಅವರ ವಿವಿಧ ಭಂಗಿಯ ಸುಮಾರು ಐದು ಪುತ್ಥಳಿಗಳನ್ನು ಸ್ಥಾಪಿಸಲಾಗುವುದು. ಅವುಗಳನ್ನು ಹೂವುಗಳಿಂದ ವಿಶೇಷವಾಗಿ ಸಿಂಗರಿಸಲಾಗುತ್ತಿದೆ. ತಮ್ಮ ನೆಚ್ಚಿನ ನಟನ ಪುತ್ಥಳಿ ಜತೆಗೆ ಫೋಟೋ ತೆಗೆಸಿಕೊಳ್ಳಲು ಸೆಲ್ಫಿ ಪಾಯಿಂಟ್ ಸಹ ನಿರ್ಮಿಸಲಾಗಿದೆ. ವರನಟ ಡಾ.ರಾಜ್‌ಕುಮಾರ್ ಅವರ ಗಾಜನೂರಿನ ಮನೆ, ಚಾಮುಂಡಿಬೆಟ್ಟ, ನಂದಿವಿಗ್ರಹ ಮಾದರಿಗಳು ತಲೆ ಎತ್ತಲಿವೆ ಎಂದು ಹೇಳಿದರು.
ಪುಣೆಯಿಂದ ವಿಶೇಷ ಅಲಂಕಾರಿಕ ಗಿಡ:
ಮಕ್ಕಳನ್ನು ಸೆಳೆಯಲು ವಿವಿಧ ಪ್ರಾಣಿ, ಪಕ್ಷಿಗಳ ಗೊಂಬೆಗಳನ್ನು ಸಹ ಹೂವುಗಳಿಂದ ನಿರ್ಮಿಸಲಾಗುತ್ತದೆ. 7 ಅಡಿ ಉದ್ದದ ಜೇನುಹುಳು, 12 ಅಡಿ ಉದ್ದದ ಜಿರಾಫೆ, 7 ಅಡಿಯ ದಪ್ಪಮೆಣಸಿನ ಕಾಯಿಯಿಂದ ಒಂದು ಮನೆಯನ್ನು ನಿರ್ಮಿಸಲಾಗುತ್ತದೆ. ಇಡೀ ಕುಪ್ಪಣ್ಣ ಉದ್ಯಾನವನ್ನು ಹೂವುಗಳಿಂದ ಅಲಂಕರಿಸಲಾಗುತ್ತಿದೆ. ತೋಟಗಾರಿಕೆ ಇಲಾಖೆಯಿಂದ 50 ಸಾವಿರಕ್ಕೂ ಹೆಚ್ಚು ಹೂವಿನ ಗಿಡಗಳನ್ನು ಬೆಳೆಸಿದ್ದು, ಮುಖ್ಯವಾಗಿ ಮಾರಿಗೋಲ್ಡ್, ಫ್ರೆಂಚ್ ಮಾರಿಗೋಲ್ಡ್, ಜಿನಿಯಾ, ಡಾಲಿಯಾ ಸೇರಿದಂತೆ ಹಲವು ಪ್ರಭೇದದ ಹೂವಿನ ಗಿಡಗಳಿವೆ. ಪುಣೆಯಿಂದ ವಿಶೇಷ ಅಲಂಕಾರಿಕ ಗಿಡಗಳನ್ನು ತರಲಾಗುತ್ತಿದೆ ಎಂದು ಹೇಳಿದರು.
ಮೈಸೂರು ಮಹಾರಾಜರ ಆಳ್ವಿಕೆಯಲ್ಲಿ ಪ್ರಯಾಣಿಕರ ನಡಿಗೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ತಂಡೀ ಸಡಕ್(ವಿಶಾಲವಾದ ರಸ್ತೆ ) ನಿರ್ಮಿಸುತ್ತಿದ್ದರು. ಅದರ ಪ್ರತಿರೂಪವನ್ನು ಗಾಜಿನ ಮನೆ ಮುಂದೆ ನಿರ್ಮಿಸಲಾಗುತ್ತಿದೆ ಎಂದರು.
ಇಲಾಖೆಗೆ ಸಂಬಂಧಿಸಿದ ಮಳಿಗೆಗಳು, ಕೃಷಿಗೆ ಸಂಬಂಧಿಸಿದ 20 ಅಧಿಕ ಮಳಿಗೆಗಳು ಇರಲಿವೆ. ಸರ್ಕಾರದ ವಿವಿಧ ಸೌಲಭ್ಯಗಳ ಕುರಿತು ರೈತರಿಗೆ ಮಾಹಿತಿ ದೊರೆಯಲಿದೆ. ಸಂಜೆ ವೇಳೆ ಅನೇಕ ಮನರಂಜನಾತ್ಮಕ ಕಾರ್ಯಕ್ರಮವೂ ಇರಲಿದೆ ಎಂದು ಹೇಳಿದರು. ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ರುದ್ರೇಶ್, ಇಲಾಖೆಯ ವಿವಿಧ ಅಧಿಕಾರಿಗಳು ಇದ್ದರು.