

ವಿಜಯವಾಣಿ ಸುದ್ದಿಜಾಲ ಆನೇಕಲ್
ಹುಸ್ಕೂರಿನಿಂದ ಮುತ್ತಾನಲ್ಲೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಗುಂಡಿ ಮಯವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಈ ರಸ್ತೆಯಲ್ಲಿ ಸಾಕಷ್ಟು ಅಪಾರ್ಟ್‌ಮೆಂಟ್‌ಗಳು ಹಾಗೂ ಶಾಲಾ ಕಾಲೇಜುಗಳು ಇದ್ದು, ಪ್ರತಿದಿನ ಶಾಲೆಗೆ ಹೋಗುವ ಬಸ್‌ಗಳು ಕಷ್ಟಪಟ್ಟು ಸಾಗಬೇಕಿದೆ. ಹುಸ್ಕೂರು ಮದ್ದೂರಮ್ಮ ದೇವಾಲಯಕ್ಕೆ, ಹುಸ್ಕೂರು ಹಣ್ಣಿನ ಮಾರುಕಟ್ಟೆಗೆ ಹೋಗಬೇಕಾದವರು ಇದೇ ರಸ್ತೆಯಲ್ಲಿ ಸರ್ಜಾಪುರ ದೊಮ್ಮಸಂದ್ರ ಭಾಗದಿಂದ ಬರುತ್ತಾರೆ, ಆದರೆ ರಸ್ತೆ ನೋಡಿ ಸರ್ಕಸ್ ಮಾಡಿಕೊಂಡೇ ತೆರಳುತ್ತಾರೆ. ಅದರಲ್ಲೂ ವಾರದಿಂದ ನಿರಂತರವಾಗಿ ಮಳೆ ಆಗುತ್ತಿದ್ದು, ರಸ್ತೆಯಲ್ಲಿ ನೀರು ನಿಂತು ಸಂಚಾರ ದುಸ್ತರವಾಗಿದೆ. ರಸ್ತೆಯಲ್ಲಿ ಬಿದ್ದಿರುವ ಒಂದೊಂದು ಗುಂಡಿಯೂ ಒಂದಕ್ಕೊಂದನ್ನು ಮೀರಿಸುವಷ್ಟು ದೊಡ್ಡದಾಗಿದ್ದು, ಬೈಕ್ ಸವಾರರು ಜಾರಿ ಬೀಳುವುದು ಸಾಮಾನ್ಯವಾಗಿದೆ.
ಅಪಾಯಕ್ಕೆ ಆಹ್ವಾನ: ಪ್ರತಿನಿತ್ಯ ಈ ರಸ್ತೆಗಳಲ್ಲಿ ಸಾವಿರಾರು ಜನರು ಓಡಾಡುತ್ತಾರೆ. ಪ್ರಮುಖವಾಗಿ ಮಹಿಳೆಯರು, ಹಿರಿಯ ನಾಗರಿಕರು, ಕಾಲೇಜು ವಿದ್ಯಾರ್ಥಿಗಳು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಾರೆ. ರಸ್ತೆ ಗುಂಡಿ, ಹಳ್ಳ, ದಿಣ್ಣೆಯಿಂದ ಕೂಡಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಮಳೆ ಸುರಿದ ಪರಿಣಾಮ ರಸ್ತೆ ಗುಂಡಿಗಳಲ್ಲಿ ನೀರು ತುಂಬಿ ತಗ್ಗು-ದಿಣ್ಣೆ ಕಾಣದೆ ವಾಹನ ಸವಾರರು ಬೀಳುವಂತಾಗಿದೆ.
ಕ್ರಮ ಕೈಗೊಳ್ಳದ ಆರ್‌ಟಿಒ: 2017ರಲ್ಲಿ ರಸ್ತೆಯನ್ನು ಡಾಂಬರೀಕರಣ ಮಾಡಲಾಗಿತ್ತು, ಮುತ್ತಾನಲ್ಲೂರು ಸರ್ಕಲ್ನಿಂದ ಹುಸ್ಕೂರು ಮಾರ್ಗವಾಗಿ ಸಾಗುವ ರಸ್ತೆಯಲ್ಲಿ ಸಾಕಷ್ಟು ಬಡಾವಣೆ ಹಾಗೂ ಅಪಾರ್ಟ್‌ಮೆಂಟ್‌ಗಳು ನಿರ್ಮಾಣ ಆಗುತ್ತಿದ್ದು, ಹೆಚ್ಚು ಭಾರ ಇರುವ ಲಾರಿಗಳು ಈ ರಸ್ತೆಯಲ್ಲಿ ಸಂಚಾರ ಮಾಡಿದ ಪರಿಣಾಮ ಒಂದೆರಡು ವರ್ಷದಲ್ಲೇ ರಸ್ತೆ ಸಂಪೂರ್ಣವಾಗಿ ಕಿತ್ತುಬಂದು ಸಂಪೂರ್ಣ ಗುಂಡಿಮಯ ಆಗಿದೆ. ಗ್ರಾಮೀಣ ಭಾಗದ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಬಾರಿ ಗಾತ್ರದ ವಾಹನಗಳು ಸಂಚಾರ ಮಾಡಿದಾಗ ಆರ್‌ಟಿಒ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಆದರೆ ಪ್ರತಿದಿನ ನೂರಾರು ಟನ್ ಗಾತ್ರದ ಲಾರಿಗಳು ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದರೂ ಕ್ರಮ ಕೈಗೊಂಡಿಲ್ಲ.
ನಿರಂತರವಾಗಿ ಮಳೆ ಆಗುತ್ತಿರುವುದರಿಂದ ಪ್ರಕೃತಿ ವಿಕೋಪದಿಂದ ರಸ್ತೆಗಳಲ್ಲಿ ಗುಂಡಿ ಆಗುತ್ತಿದೆ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮಳೆ ಸ್ವಲ್ಪ ಕಡಿಮೆ ಆಗುತ್ತಿದ್ದಂತೆ ಗುಂಡಿ ಮುಚ್ಚಲು ಸೂಚನೆ ನೀಡಲಾಗಿದೆ, ಮುಂದಿನ ದಿನಗಳಲ್ಲಿ ತೊಂದರೆ ಇರುವ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗುವುದು. ಬಿ.ಶಿವಣ್ಣ ಶಾಸಕ ಆನೇಕಲ್ ತಾಲೂಕಿನಲ್ಲಿ ಬಹುತೇಕ ರಸ್ತೆಗಳು ಗುಂಡಿಮಯ ಆಗಿದ್ದು ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣ ಆಗಿದೆ. ಶಾಸಕರು ಸರ್ಕಾರದಿಂದ ಅನುದಾನ ತಂದು ತಾತ್ಕಾಲಿಕ ಗುಂಡಿ ಮುಚ್ಚುವ ಕೆಲಸ ಆದರೂ ತುರ್ತಾಗಿ ಆಗಬೇಕಿದೆ. ಡಾ.ವೈ.ಚಿನ್ನಪ್ಪ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರು