

ಕೆಂಭಾವಿ: ಪಟ್ಟಣದ ಸುರಪುರ-ಹುನಗುಂದ ಮುಖ್ಯ ರಸ್ತೆಯ ಕೃಷ್ಣಾ ಕಾಲುವೆ ಬ್ರಿಜ್ ಸಂಪೂರ್ಣ ಹದಗೆಟ್ಟು ವರ್ಷಗಳೇ ಗತಿಸಿದ್ದು ಒಂದು ವಾರದಲ್ಲಿ ದುರಸ್ತಿಗೊಳಿಸುವುದಾಗಿ ಕೃಷ್ಣಾ ಭಾಗ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಮೋಹನರಾಜ ಅವರು ನೀಡಿದ್ದ ಭರವಸೆ ಹುಸಿಯಾಗಿದೆ.
ಪ್ರತಿದಿನ ಇದೇ ಬ್ರಿಜ್ ಮೇಲೆ ನೂರಾರು ವಾಹನ, ಸಾವಿರಾರು ಜನರು ಸಂಚರಿಸುತ್ತಿದ್ದರೂ ಕಾಲುವೆ ಮೇಲಿರುವ ಬ್ರಿಜ್ ಬೃಹತ್ ಗಾತ್ರದ ತಗ್ಗುಗಳಿಂದ ಕೂಡಿದ್ದು, ಪ್ರಯಾಣಿಕರು ತಮ್ಮ ಜೀವ ಕೈಯ್ಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ಎದುರಾಗಿದೆ.
ಕಳೆದ ಹದಿನೈದು ದಿನಗಳ ಹಿಂದೆ ಇಂಡಿ ಏತ ಏತ ನೀರಾವರಿ ಪ್ರದೇಶದ ವೀಕ್ಷಣೆಗೆ ಆಗಮಿಸಿದ್ದ ಕೆಬಿಜೆಎನ್‌ಎಲ್ ಎಂ.ಡಿ. ಮೋಹನರಾಜ ಅವರು ಒಂದು ವಾರದಲ್ಲಿ ಈ ಬ್ರಿಜ್ ದುರಸ್ತಿಗೊಳಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದ್ದರು. ಆದರೆ ಅದು ಕೂಡ ಇನ್ನೂ ಕಾರ್ಯರೂಪಕ್ಕೆ ಬಾರದಿದ್ದರಿಂದ ಜನರು ಆಕ್ರೋಶಗೊಂಡಿದ್ದಾರೆ.
ಈ ದುರಸ್ತಿ ಬಗ್ಗೆ ಕೆಬಿಜೆಎನ್‌ಎಲ್ ಅಧಿಕಾರಿಗಳನ್ನು ವಿಚಾರಿಸಿದಾಗ ಈ ಬ್ರಿಜ್ ನಮ್ಮ ಇಲಾಖೆ ವ್ಯಾಪ್ತಿಗೆ ಬಾರದೆ ಲೋಕೋಪಯೋಗಿ ವ್ಯಾಪ್ತಿಗೆ ಒಳಪಡುತ್ತದೆ. ಈ ಬಗ್ಗೆ ಎಲ್ಲ ಕಡತಗಳನ್ನು ಈಗಾಗಲೇ ಲೋಕೋಪಯೋಗಿ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ಹೇಳಿದರು.
ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಲ್ಲಿ ವಿಚಾರಿಸಿದಾಗ ಕೇವಲ ಮುಖ್ಯ ರಸ್ತೆಗಳನ್ನು ಮಾತ್ರ ಕೆಬಿಜೆಎನ್‌ಎಲ್ ಇಲಾಖೆ ನಮ್ಮ ಇಲಾಖೆಗೆ ಹಸ್ತಾಂತರಿಸಿದ್ದು ಕಾಲುವೆ ಬ್ರಿಜ್‌ಗಳು ನಮ್ಮ ವ್ಯಾಪ್ತಿಗೆ ಬಾರದೆ ಎಲ್ಲ ಬ್ರಿಜ್‌ಗಳನ್ನು ಅವರೆ (ನಿಗಮ) ನಿರ್ವಹಿಸುತ್ತಾರೆ ಎಂದು ಹೇಳಿದರು.
ಒಟ್ಟಾರೆ ತಂದೆ-ತಾಯಿ ಜಗಳದಲ್ಲಿ ಕೂಸು ಬಡವಾಯಿತು ಎಂಬAತೆ ಎರಡು ಇಲಾಖೆಗಳ ತಿಕ್ಕಾಟದಿಂದ ಇಲ್ಲಿನ ಜನತೆ ಹೈರಾಣುತ್ತಿರುವುದು ನಿಜ. ನಿತ್ಯ ಸಂಚರಿಸುವ ನೂರಾರು ವಾಹಗಳ ಸವಾರರು, ಶಾಲಾ ವಿದ್ಯಾರ್ಥಿಗಳು ಇಲಾಖೆಗೆ ಹಿಡಿಶಾಪ ಹಾಕುವುದಂತು ಖರೆ.