

ಅರಕಲಗೂಡು: ತಾಲೂಕಿನ ಮಲ್ಲಿಪಟ್ಟಣ ಹೋಬಳಿ ಶಿರದನಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಂಕಿ ತಗುಲಿ ಎರಡು ಹುಲ್ಲಿನ ಮೆದೆಗಳು ಸುಟ್ಟು ಭಸ್ಮವಾಗಿವೆ.
ಗ್ರಾಮದ ಕುಮಾರ್ ಮತ್ತು ಪ್ರಕಾಶ್ ಎಂಬುವರಿಗೆ ಸೇರಿದ ಹುಲ್ಲಿನ ಮೆದೆಗಳಿಗೆ ಬೆಂಕಿ ತಗುಲಿದಾಗ ಗ್ರಾಮಸ್ಥರು ನಂದಿಸಲು ಪ್ರಯತ್ನ ನಡೆಸಿದರೂ ಸಾಧ್ಯವಾಗಲಿಲ್ಲ. ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವ ವೇಳೆಗೆ ಹುಲ್ಲು ಸುಟ್ಟು ಕರಕಲಾಗಿತ್ತು. ಹುಲ್ಲಿನ ಮೆದೆಗಳು ಸಂಪೂರ್ಣ ಸುಟ್ಟು ಹೋಗಿರುವುದರಿಂದ ವರ್ಷವಿಡೀ ಜಾನುವಾರು ಮೇವಿಗೆ ಸಂಕಷ್ಟ ಉಂಟಾಗಿದೆ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
ತೋಟಕ್ಕೆ ಬೆಂಕಿ: ತಾಲೂಕಿನ ಕೊಣನೂರು ಹೋಬಳಿ ಹಂಡ್ರಂಗಿ ಗ್ರಾಮದ ಕುಮಾರ್ ಎಂಬುವರ ತೋಟಕ್ಕೆ ಭಾನುವಾರ ಮಧ್ಯಾಹ್ನ ಬೆಂಕಿ ತಗುಲಿ ಅಡಕೆ ಮತ್ತು ತೆಂಗಿನ ಗಿಡಗಳಿಗೆ ಹಾನಿ ಸಂಭವಿಸಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದರು.