

ಕೊಪ್ಪಳ: ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಮೊಹರಂ ಹಬ್ಬ ಆಚರಣೆಗೆ ನಿಷೇಧ ಹೇರಿ ತಹಸೀಲ್ದಾರ್ ಸಂಜಯ್ ಕಾಂಬ್ಳೆ ಆದೇಶಿಸಿದ್ದಾರೆ.
ಗ್ರಾಮದಲ್ಲಿ ಕಳೆದ ವರ್ಷ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಎರಡು ಸಾವು ಸಂಭವಿಸಿವೆ. ಎರಡೂ ಕಡೆ ಪ್ರಕರಣ ದಾಖಲಾಗಿದ್ದು, 84ಜನರನ್ನು ಬಂಧಿಸಿ ಸೆರೆಮನೆಗೆ ಕಳಿಸಲಾಗಿದೆ. ಈ ಪೈಕಿ 81 ಜನರು ಜಾಮೀನು ಪಡೆದು ಗ್ರಾಮಕ್ಕೆ ಮರಳಿದ್ದಾರೆ. ಇನ್ನು ಮೂವರು ನ್ಯಾಯಾಂಗ ವಶದಲ್ಲಿದ್ದಾರೆ. ಈಗಲೂ ಗ್ರಾಮದಲ್ಲಿ ಪರಿಸ್ಥಿತಿ ತಹಬದಿಗೆ ತರಲು ಪೊಲೀಸ್ ಕಾವಲು ನಿಯೋಜಿಸಲಾಗಿದೆ.
ಹೀಗಾಗಿ ಗ್ರಾಮದಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಜು.18ರ ಬೆಳಗ್ಗೆ 6ಗಂಟೆಯಿಂದ ಜು.29ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದು ಹಬ್ಬ ಆಚರಿಸದಂತೆ ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತ ಕ್ರಮ ಕೈಗೊಂಡಿರುವುದಾಗಿ ಆದೇಶದಲ್ಲಿ ತಿಳಿಸಿದ್ದಾರೆ.