

ಹುಲಿಯೂರುದುರ್ಗ: ಕುಣಿಗಲ್ ತಾಲೂಕು ಹಳೆವೂರು ಹುಲಿಯೂರಮ್ಮ ದೇವಾಲಯದಲ್ಲಿ ಪೂಜೆ ವಿಚಾರಕ್ಕೆ ಅರ್ಚಕರ ನಡುವೆ ಪದೇಪದೆ ಗಲಾಟೆ ನಡೆಯುತ್ತಿದ್ದು, ಪ್ರಕರಣ ಠಾಣೆ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಗುರುವಾರ ದೇಗುಲಕ್ಕೆ ಭೇಟಿ ನೀಡಿ ಮುಖಂಡರು ಹಾಗೂ ಅರ್ಚಕರ ಜತೆ ಚರ್ಚಿಸಿದರು.
ದೇವಾಲಯದ ಅಭಿವೃದ್ಧಿ ಕಾರ್ಯಗಳ ಬಗ್ಗೆಯೂ ಡಿಸಿ ಗ್ರಾಮದ ಮುಖಂಡರೊಂದಿಗೆ ಚರ್ಚಿಸಿ ಪರಿಶೀಲನೆ ನಡೆಸಿದರು.
ಪೂಜೆ ವಿಚಾರದಲ್ಲಿ ಕೆಲವು ಅರ್ಚಕರು ನ್ಯಾಯಲಯದ ಮೆಟ್ಟಿಲೇರಿದ್ದಾರೆ. ಪ್ರಕರಣ ವಿಚಾರಣೆ ನಡೆಯುತ್ತಿದೆ. ದೇವಾಲಯಕ್ಕೆ ಹಲವು ಮಂದಿ ಅರ್ಚಕರಿರುವ ಕಾರಣ ಜಗಳ ನಡೆಯುತ್ತಿದ್ದು, ಮುಂದಿನ ಆದೇಶದವರೆಗೆ ಈ ಹಿಂದಿನಂತೆ ಪೂಜೆ ಸಲ್ಲಿಸಿಕೊಂಡು ಹೋಗಲು ಅರ್ಚಕರಿಗೆ ಜಿಲ್ಲಾಧಿಕಾರಿ ನಿರ್ದೇಶನ ಮಾಡಿದರು.
ಹುಲಿಯೂರಮ್ಮ ದೇವಿಯ ದರ್ಶನ ಪಡೆದ ಡಿಸಿ ಪೂಜೆ ಸಲ್ಲಿಸಿದರು.
ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ತಹಸೀಲ್ದಾರ್ ತಿಪ್ಪೇಸ್ವಾಮಿ, ಹುಲಿಯೂರಮ್ಮ ದೇವಾಲಯದ ಕಾರ್ಯನಿರ್ವಹಣಾ ಅಧಿಕಾರಿ ರವೀಂದ್ರ, ಪಿಎಸ್‌ಐ ಚೇತನ್‌ಗೌಡ ಇತರರಿದ್ದರು.