

ಚಿತ್ರದುರ್ಗ: ಐತಿಹಾಸಿಕ ಚಂದ್ರವಳ್ಳಿಯಲ್ಲಿ ಇರುವ ಹುಲಿಗುಂದಿ ಸಿದ್ಧೇಶ್ವರ ಸ್ವಾಮಿಗೆ ಶ್ರಾವಣ ಮಾಸದ ಅಂಗವಾಗಿ ವಾಯುವಿಹಾರಿ ಬಳಗದಿಂದ ನಡೆದ 24ನೇ ವರ್ಷದ ವಿಶೇಷ ಪೂಜೆಗೆ ಭಾನುವಾರ ಸಾವಿರಾರು ಭಕ್ತರು ಸಾಕ್ಷಿಯಾದರು.
ಸ್ವಾಮಿಯ ಮೂರ್ತಿಗೆ ವಿವಿಧ ಪುಷ್ಪಗಳಿಂದ ವಿಶೇಷ ಅಲಂಕಾರ ಸೇವೆ, ಪ್ರಾತಃಕಾಲದಿಂದ ಅಭಿಷೇಕ ಸೇರಿ ಅನೇಕ ಪೂಜಾ ಕೈಂಕರ್ಯಗಳು ಅದ್ದೂರಿಯಾಗಿ ಜರುಗಿದವು. ಬೆಳಗ್ಗೆ 8ಕ್ಕೆ ಮಹಾಮಂಗಳಾರತಿ ನೆರವೇರಿತು.
ಬುರುಜನಹಟ್ಟಿ, ಹೊಳಲ್ಕೆರೆ ರಸ್ತೆ, ಧವಳಗಿರಿ ಬಡಾವಣೆ, ಬಿವಿಕೆಎಸ್ ಲೇಔಟ್, ನೆಹರುನಗರ ಸೇರಿ ನಗರದ ವಿವಿಧ ಬಡಾವಣೆಗಳಿಂದ ಸಾವಿರಾರು ಭಕ್ತರು ತಂಡೋಪ ತಂಡವಾಗಿ ಆಗಮಿಸಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಕ್ತಿಯಲ್ಲಿ ಮಿಂದೆದ್ದರು.
ನೆರೆದಿದ್ದ ಭಕ್ತರು ಮಹಾಮಂಗಳಾರತಿ, ತೀರ್ಥ ಪಡೆದು ಮಹಾ ಅನ್ನದಾಸೋಹದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಮುರುಘಾಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಚಂದ್ರವಳ್ಳಿ ವಾಯುವಿಹಾರಿ ಬಳಗದ ಅಧ್ಯಕ್ಷ ಟಿಎಸ್‌ಎನ್ ಜಯಣ್ಣ, ಕಾರ್ಯದರ್ಶಿ ಕುಲೆನೂರು ಗೌಡ್ರು, ಖಜಾಂಚಿ ಡಾ.ಸಿ. ಚನ್ನಕೇಶವ, ಬ್ಯಾಂಕ್ ಜಯರಾಮ್, ಪ್ರಧಾನ ಅರ್ಚಕ ಶಿವಕುಮಾರ್, ಪದಾಧಿಕಾರಿಗಳಾದ ಕೆ.ಬಿ.ಕೃಷ್ಣಪ್ಪ, ಈಶ್ವರಪ್ಪ, ಚಂದ್ರಶೇಖರ್, ಕೃಷ್ಣಪ್ಪ, ಕೆ.ರವಿ, ಬಸವರಾಜಪ್ಪ, ಕೆ.ಟಿ.ಯಲ್ಲಪ್ಪರೆಡ್ಡಿ, ಪೈಲ್ವಾನ್ ತಿಪ್ಪೇಸ್ವಾಮಿ, ಟಿ.ಹನುಮಂತಪ್ಪ, ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷ ಡಾ.ಪ್ರಭಾಕರ್ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.