ಹುಲಿಗಳ ದರ್ಶನದಿಂದ ಬಂಡೀಪುರ ಸಫಾರಿ ಹೈಲೈಟ್

18-MAY-GPT-1C
Published on

ಗುಂಡ್ಲುಪೇಟೆ: ಬಂಡೀಪುರ ಸಫಾರಿಗೆ ಆಗಮಿಸುವ ಬಹುತೇಕ ಪ್ರವಾಸಿಗರಿಗೆ ಹುಲಿ ಹಾಗೂ ಚಿರತೆಗಳು ಅಲ್ಲಲ್ಲಿ ದರ್ಶನ ನೀಡುತ್ತಿವೆ.

ಇತ್ತೀಚಿನ ದಿನಗಳಲ್ಲಿ ಬಂಡೀಪುರದ ಎರಡನೇ ಪ್ರಿನ್ಸ್ ಎಂದು ಕರೆಸಿಕೊಳ್ಳುತ್ತಿರುವ ಭೀಮ ಹಾಗೂ ಮೂರ್ಕೆರೆ ಸಮೀಪವೇ ತನ್ನ ಟೆರಟೆರಿ ಮಾಡಿಕೊಂಡು ನಾಲ್ಕು ಮರಿಗಳೊಂದಿಗೆ ಸುತ್ತಾಡುವ ಮೂರ್ಕೆರೆ ಫೀಮೇಲ್ ಪ್ರತಿ ದಿನವೂ ಒಂದಲ್ಲಾ ಒಂದು ಕಡೆ ಪ್ರವಾಸಿಗರಿಗೆ ದರ್ಶನ ನೀಡುತ್ತಿದೆ. ಕೆರೆಯಲ್ಲಿ ನೀರು ಕುಡಿಯಲು ತಾಯಿಯೊಂದಿಗೆ ಬರುವ ಮರಿಗಳ ಚಿನ್ನಾಟ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಕಳೆದ ವಾರ ಹೆಣ್ಣು ಹುಲಿ ಜಿಂಕೆಯನ್ನು ಬೇಟೆಯಾಡಿ ಸಫಾರಿ ವಾಹನಗಳ ಎದುರೇ ಎಳೆದುಕೊಂಡು ಸಾಗಿದ ದೃಶ್ಯ ಪ್ರವಾಸಿಗರ ಎದೆ ಝೆಲ್ ಎನ್ನಿಸಿತ್ತು.

ಬಂಡೀಪುರ ಕ್ಯಾಂಪಸ್‌ನ ಮಂಗಲ ರಸ್ತೆಯ ದೊಡ್ಡ ಮರದ ಮೇಲೆ ಕುಳಿತು ಬೇಟೆಯನ್ನು ಹೊಂಚುವ ಚಿರತೆ ಸಾಮಾನ್ಯವಾಗಿ ಪ್ರವಾಸಿಗರ ಆಕರ್ಷಣೆಯಾಗಿದೆ. ಅಲ್ಲದೆ ಸಮೀಪದ ತಾವರೆಕಟ್ಟೆ ಕೆರೆಯ ಬಳಿ ಮೈಚೆಲ್ಲಿ ವಿಶ್ರಾಂತಿ ಪಡೆಯುತ್ತಿರುವ ಚಿರತೆಯ ಫೋಟೋ ಬಹುತೇಕ ಪ್ರವಾಸಿಗರ ಮೊಬೈಲ್‌ಗಳಲ್ಲಿ ಸ್ಥಾನ ಪಡೆದಿದೆ. ಅಲ್ಲದೆ ಚಿರತೆಗಳು ಅರಣ್ಯ ಇಲಾಖೆ ಕಾಡಿನೊಳಗೆ ನಿರ್ಮಿಸಿರುವ ಚೆಕ್ ಡ್ಯಾಂ, ಸಫಾರಿ ಮಾರ್ಗದ ಮರಗಳ ಕೊಂಬೆಗಳ ಮೇಲೆ ಸಫಾರಿಗೆ ಹೋಗುವ ಪ್ರವಾಸಿಗರ ಕಣ್ಣಿಗೆ ನಿರಂತರವಾಗಿ ಕಾಣಿಸಿಕೊಳ್ಳುತ್ತಿವೆ. ಇತ್ತೀಚೆಗೆ ಸಫಾರಿ ವಾಹನಗಳ ಎದುರು ನಿಧಾನಕ್ಕೆ ಸಾಗಿದ ಭರ್ಜರಿ ಚಿರತೆಯ ಫೋಟೋ ವೈರಲ್ ಆಗುತ್ತಿದ್ದು ಪ್ರವಾಸಿಗರನ್ನು ಬಂಡೀಪುರಕ್ಕೆ ಕೈಬೀಸಿ ಕರೆಯುತ್ತಿವೆ.

ಟಿಕೆಟ್ ಕೌಂಟರ್ ಸ್ಥಳಾಂತರದಿಂದ ಅನುಕೂಲ ಪರಿಸರ ಸೂಕ್ಷ್ಮ ಪ್ರದೇಶದಲ್ಲಿರುವ ಬಂಡೀಪುರದಲ್ಲಿದ್ದ ಸಫಾರಿ ಕೇಂದ್ರದಲ್ಲಿ ದಿನೇ ದಿನೇ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದ್ದುದರಿಂದ ಅರಣ್ಯ ಇಲಾಖೆ ಟಿಕೆಟ್ ಕೌಂಟರ್ ಅನ್ನು ಮೇಲುಕಾಮನಹಳ್ಳಿಗೆ ಸ್ಥಳಾಂತರಿಸಿತು. ಇದರಿಂದ ಕ್ಯಾಂಪಸ್‌ನಲ್ಲಿ ಸಫಾರಿ ವಾಹನಗಳ ಸಂಚಾರ ಕಡಿಮೆಯಾಗಿದ್ದರಿಂದ ವನ್ಯಜೀವಿಗಳ ಸಂಚಾರ ಹೆಚ್ಚಾಗುತ್ತಾ ಬಂದಿದೆ. ಜಿಂಕೆಗಳು, ಕಾಡುಹಂದಿಗಳು, ಆನೆಗಳು, ಕಾಟಿಗಳು, ಆಗಾಗ್ಗೆ ಹುಲಿಗಳೂ ಮುಕ್ತವಾಗಿ ಸಂಚರಿಸುವಂತಾಗಿದೆ.

ಹೆಚ್ಚಿನ ಪ್ರವಾಸಿಗರು ಹುಲಿಗಳನ್ನು ನೋಡಲೆಂದೇ ಬಂಡೀಪುರ ಸಫಾರಿಗೆ ಆಗಮಿಸುತ್ತಿದ್ದಾರೆ. ಇತ್ತೀಚೆಗೆ ಹುಲಿಗಳೊಂದಿಗೆ ಕ್ಯಾಂಪಸ್‌ನ ಮರಗಳ ಮೇಲೆ ಮಲಗಿರುವ ಚಿರತೆಗಳು ಕಾಣಿಸುತ್ತಿರುವುದರಿಂದ ಮುದಗೊಳ್ಳುತ್ತಿದ್ದಾರೆ. ಎನ್.ಮಹದೇವ, ಬಂಡೀಪುರ ವಲಯದ ಆರ್‌ಎಫ್‌ಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net