ಹುಲಿಕುಂಟೆಯಲ್ಲಿ ಟೋಲ್ ಪ್ಲಾಜಾ ಕಾರ್ಯಾರಂಭ

11111
Published on

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ರಸ್ತೆಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸುವರ್ಣ ಚತುಷ್ಪದ ರಸ್ತೆಗಳನ್ನು ನಿರ್ಮಿಸಿದ್ದರು. ಕೇಂದ್ರದಲ್ಲಿ ನಿತಿನ್ ಗಡ್ಕರಿ ಅವರು ಹೆದ್ದಾರಿ ಸಚಿವರಾದ ಬಳಿಕ ದೇಶಾದ್ಯಂತ ರಸ್ತೆಗಳ ಕಾಮಗಾರಿಗೆ ವೇಗ ಸಿಕ್ಕಿದೆ ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ದೊಡ್ಡಬಳ್ಳಾಪುರ ಉಪನಗರದ ಹೊರವರ್ತುಲ ರಸ್ತೆಯ ದಾಬಸ್‌ಪೇಟೆ-ದೊಡ್ಡಬಳ್ಳಾಪುರ ಟೋಲ್ ರಸ್ತೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶುಕ್ರವಾರ ಹುಲಿಕುಂಟೆ ಟೋಲ್ ಪ್ಲಾಜಾಗೆ ಚಾಲನೆ ನೀಡಿ, ಮಾತನಾಡಿದರು.
ದಾಬಸ್‌ಪೇಟೆ-ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಮಾರ್ಗವಾಗಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಹಲವು ತೊಡಕುಗಳಿಂದ ನನೆಗುದಿಗೆ ಬಿದ್ದಿತ್ತು. ಈಗ ಹೆದ್ದಾರಿ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರಕ್ಕೆ ಮುಕ್ತವಾಗಿದೆ ಎಂದರು.
ಉಪನಗರ ಹೊರವರ್ತುಲ ರಸ್ತೆ ಯೋಜನೆಯಡಿ ಟೋಲ್ ರಸ್ತೆ ನಿರ್ಮಾಣ ಮಾಡಲಾಗಿದ್ದು, ಈಗಾಗಲೇ ಮೊದಲ ಹಂತದಲ್ಲಿ ನೆಲ್ಲೂರು-ದೇವನಹಳ್ಳಿಯ 34.15 ಕಿ.ಮೀ. ಟೋಲ್ ಸುಂಕ ಸಂಗ್ರಹ 2023ರ ನ.17ರಿಂದ ಪ್ರಾರಂಭವಾಗಿದೆ. ಬೆಂಗಳೂರು ನಗರಕ್ಕೆ ಪ್ರಮುಖ ನಗರಗಳನ್ನು ಸಂಪರ್ಕಿಸುವ ಕಾರಣಕ್ಕಾಗಿ ಉಪನಗರದ ಹೊರವರ್ತುಲ ರಸ್ತೆ( ಎಸ್‌ಟಿಆರ್‌ಆರ್) ನಿರ್ಮಾಣ ಮಾಡಲಾಗಿದೆ. ಮೊದಲ ಹಂತದಲ್ಲಿ 101 ಕಿಮೀಗಳ ದಾಬಸ್‌ಪೇಟೆ-ಹೊಸಕೋಟೆ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಈಗಾಗಲೇ ದೇವನಹಳ್ಳಿ ಬಳಿಯ ನೆಲ್ಲೂರು ಟೋಲ್ ಸುಂಕ ಸಂಗ್ರಹ ಪ್ರಾರಂಭವಾಗಿದೆ. ಎರಡನೇ ಹಂತದಲ್ಲಿ ಹುಲಿಕುಂಟೆ ಟೋಲ್ ಸುಂಕ ಆರಂಭವಾಗಿದೆ.
ಸುಂಕ ಪಾವತಿಸಿಯೇ ಒಳ ಪ್ರವೇಶ: ತಾಲೂಕಿನ ಒಳಗೆ ಬರಬೇಕಾದರೆ, ಟೋಲ್ ಪಾವತಿ ಮಾಡಿಯೇ ಪ್ರವೇಶ ಮಾಡಬೇಕಾದ ದುಸ್ಥಿತಿ ಎದುರಾಗಿದೆ. ಬೆಂಗಳೂರಿಂದ ಬರುವವರು ಮಾರಸಂದ್ರ ಟೋಲ್‌ನಲ್ಲಿ, ಗೌರಿಬಿದನೂರು, ಹಿಂದೂಪುರದಿಂದ ಬರುವವರು ಗುಂಜೂರು ಟೋಲ್‌ನಲ್ಲಿ, ಹೊಸಕೋಟೆಯಿಂದ ಬರುವವರು ನೆಲ್ಲೂರು ಟೋಲ್‌ನಲ್ಲಿ ಮತ್ತು ತುಮಕೂರು, ದಾಬಸ್‌ಪೇಟೆ ಕಡೆಯಿಂದ ಬರುವ ವಾಹನ ಸವಾರರು ನೂತನ ಹುಲಿಕುಂಟೆ ಟೋಲ್ ಪ್ಲಾಜಾದಲ್ಲಿ ಸುಂಕ ಪಾವತಿ ಮಾಡಿ ದೊಡ್ಡಬಳ್ಳಾಪುರಕ್ಕೆ ಆಗಮಿಸಬೇಕಿದೆ.
14ರಿಂದಲೇ ವಸೂಲಿ: ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆಯಲ್ಲಿ ಟೋಲ್ ಪ್ಲಾಜಾ ನಿರ್ಮಾಣವಾಗಿದೆ. ಜೂ.14 ರಿಂದ ಖಾಸಗಿ ಮತ್ತು ವಾಣಿಜ್ಯ ವಾಹನಗಳಿಂದ ಟೋಲ್ ಸುಂಕ ಸಂಗ್ರಹಿಸಲಾಗುತ್ತಿದೆ. ದ್ವಿಚಕ್ರ ವಾಹನಗಳಿಗೆ ಟೋಲ್ ಸುಂಕದಿಂದ ವಿನಾಯಿತಿ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ದರ ಸಿದ್ಧಪಡಿಸಿದ್ದು, ದಿನದ 24 ಗಂಟೆಯಲ್ಲಿ ಕಾರಿನ ಒನ್‌ವೇ ಪ್ರಯಾಣಕ್ಕೆ 105 ರೂ., ರೌಂಡ್ ಟ್ರಿಪ್‌ಗೆ 155 ರೂ. ನಿಗದಿ ಮಾಡಿದೆ. ಮಾಸಿಕ ಪಾಸ್‌ನಲ್ಲಿ 50 ಒನ್‌ವೇ ಪ್ರಯಾಣಕ್ಕೆ ಅವಕಾಶವಿದ್ದು, 3,470 ರೂ. ನಿಗದಿ ಪಡಿಸಿದೆ ಎಂದು ಶಾಸಕರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net