ಹುಲಿಕಲ್ ಬಳಿ ಭೀಕರ ಅಪಘಾತ: ತಂದೆ-ಮಗ ಸಾವು; ಪತ್ನಿಗೆ ತೀವ್ರ ಸ್ವರೂಪದ ಪೆಟ್ಟು

WEB
Published on

ಹೊಸನಗರ: ಒಂದು ಲಾರಿ ಡಿಕ್ಕಿಯಾಗಿದ್ದರಿಂದ ಬೈಕ್ ಮೇಲಿಂದ ಕೆಳಗೆ ಬಿದ್ದ ಮೂವರ ಮೇಲೆ ಮತ್ತೊಂದು ಲಾರಿ ಹರಿದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟು, ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಲಿಕಲ್ ಸಮೀಪ ಗುರುವಾರ ತಡರಾತ್ರಿ ಸಂಭವಿಸಿದೆ. ಭೀಕರ ಅಪಘಾತದಲ್ಲಿ ಹತ್ತು ವರ್ಷದ ಬಾಲಕ ಸೇರಿ ಇಬ್ಬರು ಮೃತಪಟ್ಟಿದ್ದು, ಮಹಿಳೆ ತೀವ್ರವಾಗಿ ಗಾಯಗೊಂಡಿದ್ದಾರೆ.

ಮೃತರನ್ನು ಹೊಸನಗರ ತಾಲೂಕು ಮಾಸ್ತಿಕಟ್ಟೆ ಸಮೀಪದ ಕಂಪದ ಕೈ ನಿವಾಸಿ ರವಿ(47) ಮತ್ತು ಅವರ ಅಣ್ಣನ ಮಗ ಶಿಶಿರ(10) ಎಂದು ಗುರುತಿಸಲಾಗಿದೆ. ರವಿ ಅವರ ಪತ್ನಿ ಶಾಲಿನಿ (42) ತೀವ್ರವಾಗಿ ಗಾಯಗೊಂಡಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ರವಿ ಅವರು ಪತ್ನಿ ಮತ್ತು ಅಣ್ಣನ ಮಗನೊಂದಿಗೆ ಹುಲಿಕಲ್ ದೇವಸ್ಥಾನಕ್ಕೆ ತೆರಳಿದ್ದು, ಕಾರ್ತಿಕ ದೀಪೋತ್ಸವ ಪೂಜೆ ಮುಗಿಸಿಕೊಂಡು ಮಾಸ್ತಿಕಟ್ಟೆ ಕಡೆ ವಾಪಾಸಾಗುತ್ತಿದ್ದ ವೇಳೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದ್ದ, ಬೈಕ್ ಪಲ್ಟಿಯಾಗಿ ಮೂವರೂ ಕೆಳಗೆ ಬಿದ್ದಿದ್ದಾರೆ. ಆಗ ಕುಂದಾಪುರ ಕಡೆಯಿಂದ ಮಾಸ್ತಿಕಟ್ಟೆ ಕಡೆ ಬರುತ್ತಿದ್ದ ಮತ್ತೊಂದು ಲಾರಿ ಈ ಮೂವರ ಮೇಲೆ ಹರಿದಿದೆ. ರವಿ ಮತ್ತು ಶಿಶಿರ ತಲೆ ಮೇಲೆ ಲಾರಿ ಹರಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಾಲಿನಿ ಅವರು ಕಾಲು ನಜ್ಜುಗುಜ್ಜಾಗಿದೆ ಎನ್ನಲಾಗಿದೆ. ಚಾಲಕರು ಅಪಘಾತಕ್ಕೆ ಕಾರಣವಾದ ಎರಡೂ ಲಾರಿಗಳನ್ನು ನಿಲ್ಲಿಸದೆ ಪರಾರಿಯಾಗಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net