

ಹೊಸನಗರ: ಹುಲಿಕಲ್ ಘಾಟ್ ರಸ್ತೆಯ ಚಂಡಿಕಾಂಬ ದೇಗುಲದ ಕೆಳಭಾಗದ ಹೇರ್ ಪಿನ್ ಕ್ರಾಸ್‌ನಲ್ಲಿ ರಸ್ತೆ ಬಿರುಕು, ಮಣ್ಣುಕುಸಿತದ ಘಟನಾ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಕೇಂದ್ರ ವಲಯದ ಮುಖ್ಯ ಅಭಿಯಂತ ಬಿ.ವಿ.ಜಗದೀಶ್ ಹಾಗೂ ಕಾಮಗಾರಿ ವಿನ್ಯಾಸ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ರಸ್ತೆ ಬಿರುಕಿನ ಪ್ರಮಾಣ, ಬಾರಿ ಪ್ರಮಾಣದ ಮಣ್ಣು ಕುಸಿತದ ಕಾರಣದ ಬಗ್ಗೆ ಅವಲೋಕಿಸಲಾಯಿತು. ಅಲ್ಲದೆ ಕಾಮಗಾರಿ ಯಾವ ರೀತಿ ನಡೆದರೆ ಕುಸಿತ ತಡೆಗಟ್ಟಬಹುದು ಎಂಬುದರ ಬಗ್ಗೆ ಮಾಹಿತಿ ಪಡೆದರು.
ಬೆಂಗಳೂರಿನ ಕನ್ಸಲ್ಟ್‌ಟೆಂಟ್ ಅಧಿಕಾರಿ ಶಿವಕುಮಾರ್, ಮಳೆಗಾಲದ ಆರಂಭದ ಹಂತದಲ್ಲಿ ಕಾಮಗಾರಿ ನಡೆಸುವಾಗ ಕೈಗೊಳ್ಳಬೇಕಾದ ಅಗತ್ಯ ಮಾಹಿತಿಗಳ ಬಗ್ಗೆ ಮಾಹಿತಿ ನೀಡಿದರು. ಒಂದು ವೇಳೆ ಸ್ವಲ್ಪ ಹಾದಿ ತಪ್ಪಿದರೂ ಘಾಟ್ ರಸ್ತೆ ಬಂದ್ ಆಗುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಕುಸಿತದ ನಂತರ ಮಣ್ಣಿಗೆ ನೀರು ಬೀಳದಂತೆ ಮಾಡಲಾದ ಪ್ಲಾಸ್ಟಿಕ್ ಹೊದಿಕೆಯನ್ನು ಅಧಿಕಾರಿಗಳು ಪರಿಶೀಲಿಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಮೊಗ್ಗ ವಲಯದ ಸೂಪರಿಂಟೆಂಡೆಂಟ್ ಎಂಜಿನಿಯರ್ ಎಸ್.ಗಣೇಶ್, ನಮ್ಮ ಮೊದಲ ಆದ್ಯತೆ ಬಿರುಕು ಬಿಟ್ಟ ರಸ್ತೆಯನ್ನು ಸಂರಕ್ಷಣೆ ಮಾಡುವುದು. ಹೆಚ್ಚಿನ ಮಣ್ಣು ಕುಸಿತ ಆಗದಂತೆ ತಡೆಯುವುದು. ಈಗಾಗಲೇ ಕಾಮಗಾರಿಗೆ 4.35 ಕೋಟಿ ರೂ. ಮಂಜೂರಾಗಿದೆ. ಮಳೆ ಬರುವಾಗ ಕಾಮಗಾರಿ ನಡೆಸುವುದು ಕಷ್ಟ. ಆದರೆ ಸಂಚಾರಕ್ಕೆ ಕುತ್ತು ಬಾರದ ರೀತಿಯಲ್ಲಿ ಕಾರ್ಯನಿರ್ವಹಿಸುವುದೇ ನಮ್ಮ ಆದ್ಯತೆ. ಈ ಹಂತದಲ್ಲಿ ರಿಸ್ಕ್ ತೆಗೆದುಕೊಳ್ಳುವುದು ಸರಿಯಲ್ಲ ಎಂದರು.
ಶಿವಮೊಗ್ಗ ವಿಭಾಗದ ಕಾರ್ಯಪಾಲಕ ಅಭಿಯಂತರ ನಾಗೇಶ್, ಹೊಸನಗರದ ಎಇಇ ಸುನಿಲ್, ಎಇ ಸಂತೋಷ್ ನಾಯ್ಕ, ಗುತ್ತಿಗೆದಾರ ಸಿ.ವಿ.ಚಂದ್ರಶೇಖರ್, ಪ್ರದೀಪ್ ಹುಲಿಕಲ್ ಇದ್ದರು.