

ಚಾಮರಾಜನಗರ : ಹೆಬ್ಬುಲಿ ಅಬ್ಬರವೋ, ಕಿರುಬುಲಿ ಅಬ್ಬರವೋ..ಎಂದು ಪದ ಕಟ್ಟುತ್ತಾ, ಹೆಜ್ಜೆ ಹಾಕುತ್ತಾ ‘ಹುಲಿ ವೀರಪ್ಪ’ನ ಪೂಜೆ ಮಾಡುತ್ತಾ ಅಪಾಯಕಾರಿ ವ್ಯಾಘ್ರದೊಂದಿಗೆ ಸಹಜ ಸಹಬಾಳ್ವೆ ನಡೆಸುತ್ತಿರುವ ಸೋಲಿಗರನ್ನು ಗುರುತಿಸಿ ಪ್ರಧಾನ ಮಂತ್ರಿ ನರೇಂದ್ರಮೋದಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ..!
119ನೇ ಮನ್ ಕೀ ಬಾತ್‌ನಲ್ಲಿ ಪಿಎಂ ನರೇಂದ್ರ ಮೋದಿ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಕುರಿತು ಮಾತನಾಡಿ, ಹಲವು ಪ್ರದೇಶಗಳಲ್ಲಿ ಇಂದಿಗೂ ಪ್ರಾಣಿ ಮತ್ತು ಮಾನವ ಸಂಘರ್ಷಗಳು ನಡೆಯುತ್ತಿರುತ್ತದೆ.
ಆದರೆ ಅತಿ ಹೆಚ್ಚು ಹುಲಿಗಳಿರುವ ಪ್ರದೇಶವಾಗಿರುವ ಚಾಮರಾಜನಗರ ಬಿಆರ್‌ಟಿ ಅರಣ್ಯ ಪ್ರದೇಶದಲ್ಲಿ ಹುಲಿಗಳನ್ನು ಉಳಿಸುವುದರಲ್ಲಿ ಸ್ಥಳೀಯ ಸೋಲಿಗರ ಪಾತ್ರ ಮಹತ್ವದ್ದಾಗಿದೆ ಎಂದು ಬಣ್ಣಿಸಿದ್ದಾರೆ.
ಮುಂದುವರಿದು ಈಗಲೂ ಮಾನವ-ಪ್ರಾಣಿ ಸಂಘರ್ಷ ನಡೆಯುತ್ತಲೇ ಇರುತ್ತದೆ. ಆದರೂ ಅದನ್ನು ಕಾಪಾಡಿಕೊಂಡು ಹೋಗಲಾಗುತ್ತಿದೆ ಎಂದರೆ ಅದಕ್ಕೆ ಸೋಲಿಗರೆ ಕಾರಣರಾಗಿದ್ದಾರೆ ಎಂದು ಪ್ರಧಾನಿ ಮೋದಿ ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಕರ್ನಾಟಕದ ಹೆಮ್ಮೆಯ ಹುಲಿವೇಷದ ಕುರಿತು ವಿಶೇಷವಾಗಿ ಮೋದಿ ಅವರು ಮಾತನಾಡಿದ್ದಾರೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹುಲಿವೇಷ ತೊಟ್ಟು ಕುಣಿಯವವರ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತದೆ ಎಂದು ಬಣ್ಣಿಸಿದ್ದಾರೆ.
ಹುಲಿಯೊಂದಿಗೆ ಸಹಬಾಳ್ವೆ:20211ರಲ್ಲಿ ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶವಾಗಿ ೋಷಣೆಯಾಯಿತು. ಸುಮಾರು 574 ಚದರ ಕಿ.ಮೀ 55 ಸಾವಿರ ಹೆಕ್ಟೇರ್ ಪ್ರದೇಶದಲ್ಲಿರುವ ಕಾಡಿನಲ್ಲಿ ಆಗ 25 ಇದ್ದ ಹುಲಿಗಳ ಸಂಖ್ಯೆ ಈಗ 40ಕ್ಕೂ ಹೆಚ್ಚಿವೆ. ಅರಣ್ಯದ ಒಳಗೆ 22 ಸೋಲಿಗರ ಪೋಡುಗಳು, ಅರಣ್ಯದ ಅಂಚಿನಲ್ಲಿ 39 ಪೋಡುಗಳಿವೆ. ಸುಮಾರು 12 ಸಾವಿರ ಸೋಲಿಗರು ವಾಸ ಮಾಡುತ್ತಿದ್ದಾರೆ. ಹುಲಿ ಮತ್ತು ಮಾನವನ ಸಹಬಾಳ್ವೆ ಇಲ್ಲಿ ದೈವಸ್ವರೂಪದಿಂದ ಕೂಡಿದೆ. ಸೋಲಿಗರು ಹುಲಿಯನ್ನು ಆರಾಧನೆ ಮಾಡುತ್ತಾರೆ. ಕಾಡಿನಲ್ಲಿ ಸೋಲಿಗರು ಕಟ್ಟಿಕೊಂಡಿರುವ ಒಟ್ಟು 480 ಸಣ್ಣ ಸಣ್ಣ ದೇಗುಲಗಳವೆ. ಇವುಗಳಲ್ಲಿ ಹುಲಿ ವಾಹನಗಳ ಉತ್ಸವ ನಡೆಯುತ್ತವೆ. ದೊಡ್ಡಸಂಪಿಗೆ, ಗುಂಡ್ಲು ಜಲಾಶಯದ ಅರಣ್ಯಗಳಲ್ಲಿ ‘ಹುಲಿ ವೀರಪ್ಪ’ನ ಕೆತ್ತನೆಯ ವಿಗ್ರಹಗಳಿವೆ. ಇಲ್ಲಿ ವ್ಯಾಘ್ರದ ಕುರಿತು ಪದಗಳನ್ನು ಕಟ್ಟಿ ಪೂಜೆ ಸಲ್ಲಿಸುತ್ತಾರೆ. ಮಂಗಳೂರು ಕಡೆ ಹುಲಿ ವೇಷ ಧರಿಸುತ್ತಾರೆ. ಆದರೆ ಇಲ್ಲಿ ಸೊಪ್ಪುಗಳನ್ನು ಮೈಗೆ ಕಟ್ಟಿಕೊಂಡು ಕುಣಿಯುವ ವಿಭಿನ್ನ ಶೈಲಿಯ ಗೊರುಕನ ನೃತ್ಯ ಬಹಳ ಪ್ರಸಿದ್ಧಿ ಪಡೆದುಕೊಂಡಿದೆ. ಸೋಲಿಗರು ಹುಲಿಗಳ ಬಗ್ಗೆ ಅಪಾರವಾದ ಜ್ಞಾನ ಹೊಂದಿದ್ದಾರೆ. ಹುಲಿಗಳ ಚಲನವಲನ, ದಾಳಿಯ ಅಪಾಯಗಳನ್ನೆಲ್ಲಾ ಅರಿತಿದ್ದಾರೆ. ಬೇರೆ ಕಡೆ ಹುಲಿ ಕಾಣಿಸಿಕೊಂಡರೆ ಸೆರೆ ಹಿಡಿಯುವ ಕಾರ್ಯಾಚರಣೆಗಾಗಿ ಇಲ್ಲಿನ ಸೋಲಿಗರನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಹೀಗಾಗಿ ಬಿಆರ್‌ಟಿ ಕಾಡಿನಲ್ಲಿ ಹುಲಿ ದಾಳಿಗೆ ಸೋಲಿಗ ಬಲಿ ಎಂಬ ಸುದ್ದಿಗಳು ವರದಿಯಾಗುವುದು ಕಡಿಮೆ. ಇಬ್ಬರ ನಡುವೆ ಸಂಘರ್ಷವಿಲ್ಲದೆ ಇರುವುದು ಸಹಬಾಳ್ವೆಯ ಸಂಕೇತವಾಗಿದೆ. ಹುಲಿಗಳ ಸಂಖ್ಯೆ ಹೆಚ್ಚಳಕ್ಕೂ ಕಾರಣವಾಗಿದೆ.
ಬಿಅರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ವರ್ಷಾನುಗಟ್ಟಲೆಯಿಂದ ಸೋಲಿಗರು ನೆಲೆಸಿದ್ದಾರೆ. ಕಾಡನ್ನು ತನ್ನದೆಂಬಂತೆ ಸಂರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಹುಲಿಗಳ ಪ್ರಮಾಣವೂ ಹೆಚ್ಚಾಗಿದೆ. ಹುಲಿ ಮತ್ತು ಮಾನವ ಸಹಬಾಳ್ವೆ ಇದೆ. ಹೀರಾಲಾಲ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ ವೃತ್ತ, ಚಾಮರಾಜನಗರ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ಸೋಲಿಗರು ಮತ್ತು ಹುಲಿ ಸಹಬಾಳ್ವೆ ಕುರಿತು ಮಾತನಾಡಿರುವುದಕ್ಕೆ ಸಂತಸವಾಯಿತು. ನಾವು ಪ್ರಕೃತಿ ಆರಾಧಕರು, ಹುಲಿಗಳ ಮೂರ್ತಿಯ ವಾಹನಕ್ಕೆ ಪೂಜೆ ಸಲ್ಲಿಸುತ್ತೇವೆ. ಹಾಡು ಕಟ್ಟಿ ಉತ್ಸವ ಮಾಡುತ್ತೇವೆ. ಹಾಗೆಯೇ ನಮ್ಮೊಂದಿಗೆ ಕಾಡಿನಲ್ಲಿ ಬದುಕುತ್ತಿರುವ ಪ್ರಾಣಿಗಳಲ್ಲಿ ಹುಲಿಯೂ ಒಂದು. ನಮ್ಮನ್ನು ಹುಲಿ ಅರ್ಥ ಮಾಡಿಕೊಂಡಿದೆ. ನಾವು ಹುಲಿಯನ್ನು ಅರ್ಥ ಮಾಡಿಕೊಂಡು ಬದುಕುತ್ತಿದ್ದೇವೆ. ಪ್ರಾಣಿಗಳೊಂದಿಗಿನ ಸಹಬಾಳ್ವೆಯೇ ನಮ್ಮ ಸಂಸ್ಕೃತಿ. ಡಾ.ಸಿ.ಮಾದೇಗೌಡ, ಕಾರ್ಯದರ್ಶಿ, ಜಿಲ್ಲಾ ಬುಡಕಟ್ಟು ಗಿರಿಜನರ ಅಭಿವೃದ್ಧಿ ಸಂಘ, ಚಾಮರಾಜನಗರ