ಚಾಮರಾಜನಗರ: ಐದು ಹುಲಿಗಳ ಸಾವಿನ ಪ್ರಕರಣದಲ್ಲಿ ವ್ಯಾಘ್ರಗಳ ಜೀವಗಳನ್ನು ಮೊದಲೇ ರಕ್ಷಣೆ ಮಾಡಬಹುದಾಗಿದ್ದ ಎಲ್ಲ ಅವಕಾಶಗಳನ್ನೂ ಕೈ ಚೆಲ್ಲಿರುವ ಅರಣ್ಯ ಇಲಾಖೆ ಅವು ಸತ್ತ ಮೇಲೆ ವಿಷ ಹಾಕಿದವರನ್ನು ಸೆರೆ ಹಿಡಿಯಲು ಶುಕ್ರವಾರ ತನಿಖೆಯನ್ನು ಚುರುಕುಗೊಳಿಸಿತು.
ಹೂಗ್ಯಂ ವಲಯದ ಮೀಣ್ಯಂ ಅರಣ್ಯ ಪ್ರದೇಶದ ಮುಖ್ಯರಸ್ತೆಯ ಕೂಗಳತೆ ದೂರದಲ್ಲಿ ನಡೆದಿರುವ ದುರಂತವನ್ನು ಕೇವಲ ಶಿಸ್ತುಬದ್ಧ ನಿತ್ಯ ಗಸ್ತಿನಲ್ಲಿ ಮೊದಲೇ ಪತ್ತೆ ಹಚ್ಚಿ ತಡೆಯಬಹುದಾಗಿತ್ತು. ಆದರೆ ಇದಾಗದೇ ನಿರ್ಲಕ್ಷ್ಯ ತೋರಿದ್ದಕ್ಕೆ ತಾಯಿ ಮತ್ತು ನಾಲ್ಕು ಮರಿ ಹುಲಿಗಳ ಪ್ರಾಣ ಹೋಯಿತು. ಇದೀಗ ಅರಣ್ಯ ಇಲಾಖೆಯ ದೊಡ್ಡದೊಡ್ಡ ಅಧಿಕಾರಿಗಳು ಸ್ಥಳಕ್ಕೆ ಬಂದು ಸಾವಿಗೆ ಕಾರಣ, ಕಾರಣಕರ್ತರನ್ನು ಹುಡುಕುತ್ತಿದೆ.
ಹಸು ಮಾಲೀಕನಿಗಾಗಿ ತನಿಖೆ: ವಿಷಪ್ರಾಶನವಾಗಿದ್ದ ಸತ್ತ ಹಸುವಿನ ಮಾಂಸ ತಿಂದು ಹುಲಿಗಳ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಹಸುವಿನ ಮಾಲೀಕನ್ಯಾರು ಎಂದು ತಿಳಿದುಕೊಳ್ಳಲು ತನಿಖೆ ನಡೆಯುತ್ತಿದೆ. ಇದಕ್ಕಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಗುಮಾನಿ ಇರುವ ದನಗಾಹಿಗಳಲ್ಲಿ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಯಲಾಗಿದೆ. ವಿಷ ಪ್ರಾಶನವಾಗಿದ್ದ ಹಸು ಯಾರಿಗೆ ಸೇರಿದ್ದು ಎಂಬ ಬಗ್ಗೆ ತಿಳಿದುಕೊಳ್ಳಲು ಪ್ರಯತ್ನ ನಡೆಯುತ್ತಿದೆ.
ಹುಲಿ ಕುಟುಂಬದ ಅಂತ್ಯಕ್ರಿಯೆ:
ತಾಯಿ ಹುಲಿಯ ಕಳೇಬರವನ್ನು ಕಟ್ಟಿಗೆಯಿಂದ ಸುಡುವ ಮೂಲಕ ಅಂತ್ಯಕ್ರಿಯೆಯನ್ನು ಅರಣ್ಯ ಅಧಿಕಾರಿಗಳು ನಡೆಸಿದರು. ಬಳಿಕ ಮಧ್ಯಾಹ್ನ ಸ್ಥಳಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆಗಮಿಸಿ ನಾಲ್ಕು ಮರಿ ಹುಲಿಗಳ ಅಂತ್ಯಕ್ರಿಯೆಲ್ಲಿ ಪಾಲ್ಗೊಂಡರು. ವಿಷ ಪ್ರಾಶನದಿಂದ ಮೃತಪಟ್ಟಿರುವ ತಾಯಿ ಹುಲಿ ಗಾತ್ರದಲ್ಲಿ ಗಂಡು ಹುಲಿಯಷ್ಟೇ ದೈತ್ಯವಾಗಿತ್ತು. ಇದನ್ನು ಚಿತೆಗೆ ಇಡಲು ಸುಮಾರು 25ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟರು. ಮರಿ ಹುಲಿಗಳು ಕೊಳೆತ ಸ್ಥಿತಿಯಲ್ಲಿ ಚಿತೆ ಏರಿದವು. ವಿಷವಿಕ್ಕಿದ್ದ ಹಸುವಿನ ಮಾಂಸ ತಿಂದು ಒಂದೊಂದೂ ಹುಲಿಯೂ ಒಂದೊಂದು ಕಡೆ ಸತ್ತು ಬಿದ್ದಿದ್ದವು. ತಾಯಿ ಹುಲಿ ತನ್ನ ಮರಿಗಳಿಂದ ದೂರದಲ್ಲಿ ಬಿದ್ದಿತ್ತು. ಇವು ಸತ್ತು ಬಿದ್ದಿದ್ದ ಜಾಗ ದುರಂತದ ಭೀಕರತೆಯನ್ನು ಸಾರಿ ಸಾರಿ ಹೇಳುತ್ತಿತ್ತು. ಕಾಡಿನಲ್ಲಿ ಮೇಯಲು ಬಂದ ಹಸುವನ್ನು ಹುಲಿ ಬೇಟೆಯಾಡಿದೆ. ಒಂದು ದಿನದ ಬಳಿಕ ಬಂದು ಮಾಂಸ ತಿನ್ನುವುದರೊಳಗೆ ಅದಕ್ಕೆ ವಿಷ ಬೆರೆಸಲಾಗಿದೆ. ಹುಲಿಗಳು ಮಾಂಸ ತಿಂದು ಮೃತಪಟ್ಟಿವೆ ಎಂದು ಮೇಲ್ನೋಟಕ್ಕೆ ವಿಶ್ಲೇಷಿಸಲಾಗುತ್ತಿದೆ.
ಕೃತ್ಯದಲ್ಲಿ ಭಾಗಿಯಾಗಿದ್ರೆ ಶರಣಾಗಿ:
ಮಾದಪ್ಪ ವಾಹನ ಎಂದೇ ಖ್ಯಾತಿ ಪಡೆದಿರುವ ಹುಲಿಗಳ ಮೇಲೆ ನಮಗೆ ಅಪಾರ ಪ್ರೀತಿ. ಐದು ಹುಲಿಗಳ ಸಾವು ಘೋರ ಪ್ರಕರಣವಾಗಿದೆ. ಈ ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದರೂ ನೇರವಾಗಿ ಶರಣಾಗಿ. ಇತರರಿಗೆ ತೊಂದರೆ ಕೊಡಬೇಡಿ ಎಂದು ಹನೂರು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದ್ದಾರೆ. ಇನ್ನು ದುರಂತಕ್ಕೆ ಅಧಿಕಾರಿಗಳ ಕರ್ತವ್ಯ ಲೋಪವೂ ಕಾರಣ ಎಂದು ಪರಿಸರವಾದಿ ಜೋಸ್ೆ ಹೂವಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವನ್ಯಜೀವಿಧಾಮದಲ್ಲಿ ದಿನಗೂಲಿ ನೌಕರರಿಗೆ ವೇತನ ನೀಡಿಲ್ಲ. ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ಈ ಹಿಂದೆ ಕರ್ತವ್ಯ ಲೋಪದಡಿಯಲ್ಲಿ ಅಮಾನತ್ತುಗೊಂಡಿದ್ದರು. ಅವರನ್ನು ಇಲ್ಲಿಗೆ ನಿಯೋಜಿಸಿದ್ದೇ ಸರ್ಕಾರದ ತಪ್ಪಿನ ನಡೆಯಾಗಿದೆ ಎಂದು ದೂರಿದ್ದಾರೆ.
ವಿಷವಿಕ್ಕಿರುವುದು ಖಚಿತ:
ಹುಲಿಗಳ ವಿಷ ಪ್ರಾಶನದಿಂಧ ಮೃತಪಟ್ಟಿರುವುದಾಗಿ ಚಾಮರಾಜನಗರ ವೃತ್ತದ ಸಿಸಿಎ್ ಹೀರಾಲಾಲ್ ಖಚಿತ ಪಡಿಸಿದರು. ಹುಲಿಗಳ ಮರಣೋತ್ತರ ಪರೀಕ್ಷೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 10 ವರ್ಷದ ತಾಯಿ, 8ರಿಂದ 10 ತಿಂಗಳ ಹಸುಗಳು ಮೂರು ದಿನಗಳ ಹಿಂದೆಯೇ ಮೃತಪಟ್ಟಿವೆ. ಪ್ರಾಥಮಿಕ ಹಂತದ ತನಿಖೆಯಲ್ಲಿ ಹುಲಿಗಳ ವಿಷಪ್ರಾಶನದಿಂದ ಸತ್ತಿವೆ. ಹಸು ಸತ್ತ ಮೇಲೆ ವಿಷ ಹಾಕಲಾಗಿದೆಯೇ ಅಥವಾ ವಿಷ ಹಾಕಿದ ಹಸವನ್ನು ಕಾಡಿನೊಳಗೆ ಇಡಲಾಗಿದೆಯೋ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಹುಲಿ ಮತ್ತು ಹಸುವಿನ ಅಂಗಾಂಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವಿಷ ಯಾವುದು ಮತ್ತು ಎಷ್ಟು ಪ್ರಮಾಣದ್ದು ಎಂದು ಬಳಿಕ ತಿಳಿಯಲಿದೆ ಎಂದರು. ತಮಿಳುನಾಡಿನವರ ಹಸುಗಳನ್ನು ತಂದು ಇಲ್ಲಿನ ದನಗಾಹಿಗಳ ಮೂಲಕ ಮೇಯಿಸಲಾಗುತ್ತಿತ್ತು. ಇದಕ್ಕೆ ತಡೆಯೊಡ್ಡಿದ ವೇಳೆ ವಿಧಾನಸೌಧದಲ್ಲೂ ವಿಚಾರ ಪ್ರಸ್ತಾಪವಾಗಿತು.
ಎನ್‌ಟಿಸಿಎ ತಂಡ ರಚನೆ:
ಹುಲಿಗಳ ಸಾವಿನ ತನಿಖೆ ನಡೆಸಲು ಎನ್‌ಟಿಸಿಎ ವಿಶೇಷ ತನಿಖಾ ತಂಡ ರಚನೆ ಮಾಡಿದೆ. ಬೆಂಗಳೂರು ಪ್ರಾದೇಶಿಕ ಕಚೇರಿಯ ಎಐಜಿ ವಿ.ಹರಿಣಿ, ದಕ್ಷೀಣ ವಿಭಾಗದ ಡಬ್ಲೂೃಸಿಸಿಬಿ ಆರ್‌ಡಿಡಿ ತೆನ್‌ಮೋಳಿ ಅವರಿಗೆ 15 ದಿನಗಳ ಒಳಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಲಾಗಿದೆ. ತನಿಖೆಗೆ ಸಹಕಾರ ನೀಡುವಂತೆ ಎನ್‌ಟಿಸಿಎ ಡಿಐಜಿಎ್ ಜಿ.ಭಾನುಮತಿ ರಾಜ್ಯ ಸರ್ಕಾರಕ್ಕೆ ಕೋರಿದ್ದಾರೆ. ಇನ್ನು ಈಗಾಗಲೇ ರಾಜ್ಯ ಸರ್ಕಾರದಿಂದ ರಚನೆಯಾಗಿದ್ದ ತನಿಖಾ ತಂಡದ ಸದಸ್ಯರಲ್ಲಿ ಕೆಲವರು ಶುಕ್ರವಾರ ಸ್ಥಳಕ್ಕೆ ಆಗಮಿಸಿರಲಿಲ್ಲ.
ಹುಲಿಗಳ ಅಂತ್ಯಕ್ರಿಯೆಲ್ಲಿ ಸಚಿವ ಭಾಗಿ: ಹುಲಿಗಳ ಅಂತ್ಯಕ್ರಿಯೆಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಭಾಗಿಯಾದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 1 ತಾಯಿ ಹಾಗೂ 4 ಹುಲಿ ಮರಿಗಳು ಅಸಹಜವಾಗಿ ಮೃತಪಟ್ಟಿರುವುದು ನಿಜಕ್ಕೂ ದೊಡ್ಡ ದುರಂತ. ಹಾಗಾಗಿ ಸ್ಥಳಕ್ಕೆ ಖುದ್ದು ಭೇಟ ನೀಡಿ ಪರಿಶೀಲಿಸುವುದರ ಮೂಲಕ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದೇನೆ ಎಂದು ಹೇಳಿದರು. ವಿಷ ಪ್ರಾಶನದಿಂದ ಹುಲಿಗಳು ಮೃತಪಟ್ಟಿವೆ ಎಂಬುದು ತಿಳಿದಿದೆ. ಉನ್ನತ ಮಟ್ಟದ ತನಿಖಾ ತಂಡವನ್ನು ರಚಿಸಲಾಗಿದ್ದು, ಕೂಲಂಕುಷವಾಗಿ ಪರಿಶೀಲಿಸಿ ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಈ ದುಷ್ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ದಲ್ಲಿ ಅಂತಹವರ ವಿರುದ್ಧ ಕಾನೂನಿನ ರೀತಿ ಕಠಿಣ ಕ್ರಮ ಜರುಗಿಸಲಾಗುವುದು. ಇನ್ನು ವನ್ಯಜೀವಿ ಸಂರಕ್ಷಣೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಾಷ್ಟ್ರೀಯ ಪ್ರಾಣಿ ಹುಲಿ ಸಂಖ್ಯೆಯಲ್ಲಿ ರಾಜ್ಯ 2ನೇ ಸ್ಥಾನದಲ್ಲಿದೆ. ಆನೆಗಳ ಸಂಖ್ಯೆಯು ಹೆಚ್ಚಾಗುತ್ತಿದೆ. ಆದರೆ ದುರಾದುಷ್ಟವಶಾತ್ ಇಂತಹ ದುರ್ಘಟನೆಯಾಗಿರುವುದು ನಿಜಕ್ಕೂ ನೋವಿನ ಸಂಗತಿ ಎಂದರು.
ಮಲೈ ಮಹದೇಶ್ವರರ ವಾಹನವೆಂದು ಹುಲಿಯನ್ನು ಪೂಜಿಸುವ ಬೆಟ್ಟದ ಸನ್ನಿಧಿಯಲ್ಲೇ ತಾಯಿ ಹುಲಿ ಸೇರಿದಂತೆ ಐದು ಹುಲಿಗಳು ಸಾವನ್ನಪ್ಪಿರುವ ಸುದ್ದಿ ಅತ್ಯಂತ ಆಘಾತಕಾರಿ, ಅಮಾನವೀಯ ಹಾಗೂ ಭಕ್ತರ ಮನಸ್ಸಿಗೆ ಘಾಸಿ ತರಿಸಿರುವ ಘಟನೆಯಾಗಿದೆ. ಹುಲಿಗಳ ಸಾವಿನ ಸತ್ಯಾಂಶ ಬಯಲಿಗೆಳೆದು ದುಷ್ಕರ್ಮಿಗಳನ್ನು ಬಂಧಿಸಬೇಕು. ಬಿ.ವೈ.ವಿಜಯೇಂದ್ರ, ಅಧ್ಯಕ್ಷ, ಬಿಜೆಪಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳುಹಿಸಿದಂತೆ ಅಗತ್ಯ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜತೆಗೆ ಗಸ್ತನ್ನು ಇನ್ನಷ್ಟು ಹೆಚ್ಚಿಸುವುದರ ಮೂಲಕ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ದುರ್ಘಟನೆಯ ಸಂಬಂಧ ಸಿಎಂ ಸಿದ್ದರಾಮಯ್ಯ ಅವರಿಗೆ ತಿಳಿಸಲಾಗಿದೆ. ತನಿಖೆಯು ತಾರ್ಕಿಕ ಹಂತಕ್ಕೆ ಹೋಗಬೇಕಿದ್ದು, ವರದಿ ಆಧರಿಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಈಶ್ವರ ಖಂಡ್ರೆ, ಅರಣ್ಯ ಸಚಿವ