

ಹನೂರು: ಹುಲಿಗಳ ಸಾವು ಮರುಕಳುಹಿಸುತ್ತಿರುವ ಹಿನ್ನೆಲೆಯಲ್ಲಿ ಮಲೆಮಹದೇಶ್ವರ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿ (ಟೈಗರ್ ಪ್ರಾಜೆಕ್ಟ್) ಘೋಷಿಸುವ ವಿಚಾರ ಮುನ್ನೆಲೆಗೆ ಬಂದಿದ್ದು, ಈ ಸಂಬಂಧ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಅಧಿಕಾರಿಗಳ ಸಭೆ ನಡೆಸಿ ಅಂತಿಮ ವರದಿ ಸಲ್ಲಿಸಲು ಸೂಚಿಸಿದ್ದಾರೆ.
ಮಲೆಮಹದೇಶ್ವರ ವನ್ಯಜೀವಿ ಧಾಮದ ಹೂಗ್ಯಂ ವಲಯದ ಮಿಣ್ಯಂ ಅರಣ್ಯ ಪ್ರದೇಶದಲ್ಲಿ ಇತ್ತೀಚಿಗೆ 5 ಹುಲಿಗಳು ವಿಷ ಪ್ರಾಶನದಿಂದ ಮೃತಪಟ್ಟ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ನೇಮಿಸಿರುವ ಕೇಂದ್ರ ಉನ್ನತಾಧಿಕಾರಿ ಸಮಿತಿ ಈ ಬಗ್ಗೆ ತನಿಖೆ ನಡೆಸಿ 55 ಪುಟಗಳ ವರದಿ ಸಿದ್ಧಪಡಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿತ್ತು. ಪಶ್ಚಿಮ ಘಟ್ಟದಲ್ಲಿ ಪದೇ ಪದೆ ಸಂಭವಿಸುತ್ತಿರುವ ಹುಲಿ ಸಾವಿನ ಪ್ರಕರಣದ ಸಂಬಂಧ ಹುಲಿಗಳ ಸಂರಕ್ಷಣೆ ಕುರಿತು ಗಂಭೀರ ಯೋಜನೆಗಳನ್ನು ರೂಪಿಸಬೇಕಿದೆ ಎಂದು ಸಮಿತಿ ಸಲಹೆ ನೀಡಿದೆ. ಇತ್ತ ಹುಲಿಗಳ ಸಾವಿನ ಬಗ್ಗೆ ತನಿಖೆ ನಡೆಸಿದ್ದ ಎಸ್‌ಟಿಸಿಎ ವಿಶೇಷ ತಂಡ ಸಹ ಈ ಧಾಮವನ್ನು ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿ ಘೋಷಿಸಬೇಕು ಎಂದು ಶಿಫಾರಸು ಮಾಡಿದ್ದು, ಚರ್ಚೆಯಲ್ಲಿದೆ. ಪ್ರಸ್ತುತವೂ ಸ್ಥಳೀಯ ಜನರು ಹಾಗೂ ಸ್ಥಳೀಯ ಶಾಸಕರಿಂದ ವಿರೋಧ ವ್ಯಕ್ತವಾಗಿರುವುದು ಒಂದೆಡೆಯಾದರೆ, ಪರಿಸರ ವಾದಿಗಳಿಂದ ಹುಲಿ ಯೋಜನೆಯನ್ನು ಜಾರಿಗೊಳಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಹಾಗಾಗಿ ಹುಲಿ ಯೋಜನೆ ಅನುಷ್ಠಾನಕ್ಕೆ ಪರ - ವಿರೋಧ ಕೇಳಿ ಬರುತ್ತಲೇ ಇದೆ.
ಟೈಗರ್ ಪ್ರಾಜೆಕ್ಟ್ ಮುನ್ನೆಲೆಗೆ:
ಹುಲಿ ಯೋಜನೆ ಅನುಷ್ಠಾನ ಸಂಬಂಧ ಪರ, ವಿರೋಧವಿದೆ. ಈಗಿರುವಾಗ ಮಲೆಮಹದೇಶ್ವರ ವನ್ಯಜೀವಿ ಧಾಮ ವ್ಯಾಪ್ತಿಯ ಪಚ್ಚೆದೊಡ್ಡಿ ಅರಣ್ಯ ಪ್ರದೇಶದಲ್ಲಿ ಅ.2 ರಂದು ಹಂತಕರ ಕೃತ್ಯಕ್ಕೆ ಮತ್ತೊಂದು ಹುಲಿ ಬಲಿಯಾಗಿದೆ. ಇದರಿಂದ ಹುಲಿ ಯೋಜನೆ ಅಗತ್ಯವೆಂದು ಸರ್ಕಾರ ಮನಗಂಡಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅಧಿಕಾರಿಗಳ ಸಭೆ ನಡೆಸಿದ್ದು, ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಅಂತಿಮ ವರದಿ ಸಲ್ಲಿಸಲು ಅಧಿಕಾರಿಗಳಿಗೆ ತಿಳಿಸಿದ್ದಾರೆ. ಅರಣ್ಯ ಪ್ರದೇಶದೊಳಗಿನ ಹಾಡಿಗಳಲ್ಲಿರುವ ದನಕರುಗಳೆಷ್ಟು? ಈ ಹಾಡಿಗಳಲ್ಲಿ ಎಷ್ಟು ಜನರಿದ್ದಾರೆ? ಎಂಬ ಬಗ್ಗೆ ಸಂಪೂರ್ಣ ದತ್ತಾಂಶ ಕಲೆ ಹಾಕಿ ದಾಖಲಿಸಬೇಕು. ಒಂದೊಮ್ಮೆ ಹಾಡಿಯಲ್ಲಿರುವ ದನಕರುಗಳು ವನ್ಯಜೀವಿಯಿಂದ ಮೃತಪಟ್ಟರೆ ಪರಿಹಾರ ನೀಡಲು ಕ್ರಮ ವಹಿಸುವಂತೆ ಸೂಚಿಸಿದ್ದಾರೆ. ಹಾಗಾಗಿ ಹುಲಿ ಯೋಜನೆಯ ಅನುಷ್ಠಾನ ಮುನ್ನಲೆಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಯಾವ ದಿಕ್ಕನ್ನು ಪಡೆದುಕೊಳ್ಳಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ.