ಹುಲಿ ದಾಳಿಗೆ ಮೂರು ಹಸುಗಳು ಬಲಿ

Published on

ಗುಂಡ್ಲುಪೇಟೆ: ತಾಲೂಕಿನ ಬೆರಟಹಳ್ಳಿ ಸಮೀಪ ಗುರುವಾರ ಮಧ್ಯಾಹ್ನ ಹುಲಿ ದಾಳಿ ನಡೆಸಿ ಮೂರು ಹಸುಗಳನ್ನು ಕೊಂದು ಹಾಕಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯಕ್ಕೆ ಸೇರಿದ ಗ್ರಾಮದ ಕೆರೆಯ ಸಮೀಪ ಶಿವಪ್ಪ ಮತ್ತು ಕುಮಾರ್ ಎಂಬುವರ ಹಸುಗಳು ಮೇಯುತ್ತಿದ್ದಾಗ ಹುಲಿ ಏಕಾಏಕಿ ದಾಳಿ ನಡೆಸಿದೆ. ಹಸುಗಳ ಅರಚಾಟ ಕೇಳಿದ ಸುತ್ತಮುತ್ತಲಿನ ರೈತರು ಸ್ಥಳಕ್ಕೆ ಬರುತ್ತಿದ್ದಂತೆ ಹುಲಿ ಪೊದೆಗಳತ್ತ ಓಡಿಹೋಗಿದೆ.

ಘಟನೆಯಲ್ಲಿ ಗಾಯಗೊಂಡಿದ್ದ ಕುಮಾರ್ ಎಂಬುವರ ಎರಡು ಮತ್ತು ಶಿವಪ್ಪ ಎಂಬುವರ ಒಂದು ಹಸು ಸ್ಥಳದಲ್ಲಿಯೇ ಮೃತಪಟ್ಟಿವೆ. ವಿಷಯ ತಿಳಿದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಹಸುಗಳ ಮಹಜರು ನಡೆಸಿ ಜಾನುವಾರು ನಷ್ಟಕ್ಕೆ ಪರಿಹಾರ ಕೊಡಿಸುವ ಭರವಸೆ ನೀಡಿದರು.

ಹುಲಿ ಸೆರೆಗೆ ಗ್ರಾಮಸ್ಥರ ಒತ್ತಾಯ: ಕಳೆದ ಎರಡು ವರ್ಷಗಳಿಂದಲೂ ಗ್ರಾಮದ ಸುತ್ತಮುತ್ತಲೇ ಓಡಾಡುತ್ತಿರುವ ಹುಲಿ ಜಾನುವಾರುಗಳನ್ನು ಕೊಲ್ಲುತ್ತಿದೆ. ಕಳೆದ ವರ್ಷವೂ ಇದೇ ಸ್ಥಳದಲ್ಲಿ ದಾಳಿ ನಡೆಸಿ ಮೂರು ಜಾನುವಾರುಗಳನ್ನು ಕೊಂದುಹಾಕಿತ್ತು. ನಂತರ ಸಮೀಪದ ಕಗ್ಗಳ, ಕಗ್ಗಳದಹುಂಡಿ, ತ್ರಿಯಂಭಕಪುರ, ಕೆಲಸೂರು, ಪಡಗೂರು, ಕಲ್ಲಹಳ್ಳಿ ಸುತ್ತಮುತ್ತಲೂ ನೂರಾರು ರಾಸುಗಳನ್ನು ಕೊಂದು ಹಾಕಿದೆ. ಇದರಿಂದ ರೈತರು ತಮ್ಮ ಜಮೀನುಗಳಿಗೆ ಹೋಗಲು ಭಯಪಡುತ್ತಿದ್ದಾರೆ. ಆದ್ದರಿಂದ ಇನ್ನಾದರೂ ಸಂಬಂಧಪಟ್ಟವರು ಹುಲಿ ಸೆರೆಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net