ಹುಲಿ, ಕೋತಿಗಳ ಹತ್ಯೆ ಪ್ರಕರಣ ಕುರಿತು ಧ್ವನಿಯೆತ್ತದ ಚಾಮರಾಜನಗರದ ಜನಪ್ರತಿನಿಧಿಗಳು: ಸಂಸದ ಯದುವೀರ್  ಕಿಡಿ

Yaduveer
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
Published on

ಮೈಸೂರು: ಚಾಮರಾಜನಗರದಲ್ಲಿ ಹುಲಿಗಳು ಹಾಗು ಕೋತಿಗಳ ಹತ್ಯೆ ಪ್ರಕರಣ ಕುರಿತು ಚಾಮರಾಜನಗರದ ಯಾವುದೇ ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿಲ್ಲ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಸಮಾಧಾನ ವ್ಯಕ್ತಪಡಿಸಿದರು.

ಇದೊಂದು ಗಂಭೀರವಾದ ಸಮಸ್ಯೆ. ಏಕೆ ಅವರಿಗೆ ಅರ್ಥ ಆಗುತ್ತಿಲ್ಲ ಎಂಬುದೇ ಗೊತ್ತಾಗುತ್ತಿಲ್ಲ. ಈ ವಿಚಾರದಲ್ಲಿ ನಾನು ಮಾತ್ರವೇ ಧ್ವನಿ ಎತ್ತುವಂತಾಗುತ್ತಿದೆ. ಅರಣ್ಯದಲ್ಲಿ ರಾತ್ರಿ ಸಂಚಾರದ ಬಗ್ಗೆ ಸದನದಲ್ಲಿ ನಾನೊಬ್ಬನೇ ಧ್ವನಿ ಎತ್ತುತ್ತಿದ್ದೇನೆ. ಚಾಮರಾಜನಗರ ಜನಪ್ರತಿನಿಧಿಗಳು ಇನ್ನಾದರೂ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರಕರಣ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದು ಆಗ್ರಹಿಸಿದರು.

ಸಭೆ ಕರೆದಾಗಲೂ ಅರಣ್ಯ ಇಲಾಖೆ ಅಧಿಕಾರಿಗಳು ಬರುವುದಿಲ್ಲ. ಅರಣ್ಯದ ಬಗ್ಗೆ ನಮಗೆ ಏನೂ ಗೊತ್ತಿಲ್ಲ ಎಂದುಕೊಂಡಿದ್ದಾರೆ. ಆದರೆ, ನಮಗೆ ಎಲ್ಲ ಗೊತ್ತಿದೆ. ಚಾಮರಾಜನಗರ ಶೇ.50ಕ್ಕೂ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿದೆ. ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಸಿಎಂ ಸಿದ್ದರಾಮಯ್ಯ ವೇದಿಕೆಯಲ್ಲಿ ಗದರಿದ್ದ ಪೊಲೀಸ್ ಅಧಿಕಾರಿ ಸ್ವಯಂ ನಿವೃತ್ತಿ ಕುರಿತು ಪ್ರತಿಕ್ರಿಯಿಸಿದ ಅವರು, ಮಾನಸಿಕವಾಗಿ ಕುಗ್ಗಿ ಹೋಗಿದ್ದ ಅಧಿಕಾರಿ ಈ ನಿರ್ಧಾರ ಕೈಗೊಂಡಿದ್ದಾರೆ. ಅಧಿಕಾರಿಯ ಸ್ವಯಂ ನಿವೃತ್ತಿ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ನಡವಳಿಕೆಯೇ ಕಾರಣ ಎಂದು ಯದುವೀರ್ ಕಿಡಿಕಾರಿದರು.

ಅಧಿಕಾರಿಗಳು ತಪ್ಪು ಮಾಡಿದ್ದರೆ ಕಾನೂನು ಚೌಕಟ್ಟಿನಲ್ಲಿ ಕ್ರಮ ಆಗಬೇಕು. ಅದನ್ನು ಬಿಟ್ಟು ಬಹಿರಂಗವಾಗಿ ಅಧಿಕಾರಿಗೆ ಅವಮಾನ ಮಾಡುವುದು ಸರಿಯಲ್ಲ. ಇದು ನಮ್ಮ ರಾಜ್ಯ ಮಾತ್ರವಲ್ಲ, ಪ್ರಪಂಚದಲ್ಲಿ ಎಲ್ಲಿಯೂ ಆಗಬಾರದು. ಅಧಿಕಾರಿಗಳು, ಜನಪ್ರತಿನಿಧಿಗಳು ಪರಸ್ಪರ ಗೌರವ ಕೊಟ್ಟು ಕೆಲಸ ಮಾಡಬೇಕು.

ಸಿಎಂ ಸಿದ್ದರಾಮಯ್ಯ ನಡೆದುಕೊಂಡ ರೀತಿ ಎಲ್ಲರೂ ನೋಡಿದ್ದಾರೆ. ಅಧಿಕಾರಿಗಳು ಜನಪ್ರತಿನಿಧಿಗಳ ಆದೇಶ ಪಾಲಿಸಬೇಕು. ಪಾಲಿಸದಿದ್ದರೆ ಅದನ್ನು ಕೇಳಲು ನಮಗೆ ಸಾಕಷ್ಟು ಮಾರ್ಗಗಳಿವೆ. ಅದನ್ನು ಬಿಟ್ಟು ಈ ರೀತಿ ನಡೆದುಕೊಂಡಿದ್ದು ಸರಿಯಲ್ಲ ಎಂದು ಹೇಳಿದರು.

ಕಾಂಗ್ರೆಸ್ ಆಂತರಿಕ ವಿಚಾರದ ಬಗ್ಗೆ ಮಾಹಿತಿ ಇಲ್ಲ. ರಾಜ್ಯ ಸರ್ಕಾರದ ಆಂತರಿಕ ಕಚ್ಚಾಟದಿಂದಾಗಿ ಆಡಳಿತ ಯಂತ್ರ ಕುಸಿದಿದೆ. ಕಾಡು ಪ್ರಾಣಿಗಳ ಸಾವು, ಚಾಮುಂಡಿಬೆಟ್ಟದ ನಿರ್ವಹಣೆ ಸೇರಿದಂತೆ ಎಲ್ಲ ವಲಯದಲ್ಲಿ ವಿಫಲವಾಗಿದೆ. ರಾಜ್ಯ ಸರ್ಕಾರ ಉತ್ತಮ ಆಡಳಿತ ನೀಡುವತ್ತ ಗಮನ ಹರಿಸಬೇಕು ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಪಕ್ಷದ ಆಂತರಿಕ ವಿಚಾರ. ಈ ಕುರಿತು ಬಹಿರಂಗವಾಗಿ ಮಾತನಾಡುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net