

ಚಾಮರಾಜನಗರ: ಜಿಲ್ಲೆಯಲ್ಲಿ ವಿಷಪ್ರಾಶನದಿಂದ ಹುಲಿಗಳು, ಕೋತಿಗಳ ಸಾವು ಸಂಭವಿಸಿರುವುದು ಮಾಸುವ ಮುನ್ನವೇ ಚಿರತೆಗೆ ವಿಷವಿಕ್ಕಿ ಸಾಯಿಸಿರುವ ಶಂಕೆ ವ್ಯಕ್ತವಾಗಿದೆ.
ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಐದು ಹುಲಿಗಳ ಸಾವು, ಗುಂಡ್ಲುಪೇಟೆ ತಾಲೂಕಿನ ಕಂದೇಗಾಲದ ಬಳಿ ಹತ್ತೊಂಬತ್ತು ಕೋತಿಗಳಿಗೆ ವಿಷ ಹಾಕಿ ಸಾಯಿಸಿರುವ ಪ್ರಕರಣ ಇನ್ನೂ ಹಸಿಯಾಗಿಯೇ ಇದೆ. ಇದರ ನಡುವೆ ತಾಲೂಕಿನ ಕೊತ್ತಲವಾಡಿ ಗ್ರಾಮದ ಬಳಿಯ ಕರಿಕಲ್ಲು ಕ್ವಾರಿಯಲ್ಲಿ ಶುಕ್ರವಾರ ಚಿರತೆ ಕಳೇಬರ ಪತ್ತೆಯಾಗಿದೆ.
ಗ್ರಾಮಸ್ಥರಿಂದ ಮಾಹಿತಿ ತಿಳಿದು ಸ್ಥಳಕ್ಕೆ ಬಿಅರ್‌ಟಿ ಹುಲಿ ಸಂರಕ್ಷಿತಾರಣ್ಯಪ್ರದೇಶದ ಚಾಮರಾಜನಗರ ಪ್ರಾದೇಶಿಕ ಕಚೇರಿಯ ಅರಣ್ಯಾಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದರು. 5-6 ವರ್ಷದ ಗಂಡು ಚಿರತೆಯ ಸಾವಿಗೆ ವಿಷ ಪ್ರಾಶನದ ಶಂಕೆಯನ್ನು ಅರಣ್ಯಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತ ಚಿರತೆಯ ಅಂಗಾಂಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಪಡೆದುಕೊಳ್ಳಲಿದ್ದಾರೆ.
ನಾಯಿ, ಹಸು ಕಳೇಬರ: ಚಿರತೆ ಮೃತಪಟ್ಟ ಸ್ಥಳದ ಸಮೀಪದಲ್ಲೇ ನಾಯಿ, ಹಸುವಿನ ಕಳೇಬರ ಪತ್ತೆಯಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ನಾಯಿ ಅಥವಾ ಹಸುವಿನ ಕಳೇಬರಕ್ಕೆ ವಿಷ ಹಾಕಿ ಚಿರತೆ ಸಾಯಿಸಿರಬಹುದು ಎಂಬ ಶಂಕೆ ಮೇಲ್ನೋಟಕ್ಕೆ ವ್ಯಕ್ತವಾಗುತ್ತಿದೆ. ಕೃತ್ಯದ ಹಿಂದಿರುವವರನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆ ತನಿಖೆ ನಡೆಸಿದೆ.
ಕಲ್ಲುಗಳ ರಾಶಿಯ ಮಧ್ಯೆ: ಕಲ್ಲುಗಳ ರಾಶಿಯ ಮಧ್ಯೆ ಚಿರತೆ ಕಳೇಬರ ಪತ್ತೆಯಾಗಿದೆ. ಬಾಯಿಂದ ರಕ್ತಕಾರುತ್ತಾ ಕಲ್ಲುಗಳ ನಡುವೆ ಸಿಕ್ಕಿ ಹಾಕಿಕೊಂಡ ಸ್ಥಿತಿಯಲ್ಲಿ ಚಿರತೆ ಸತ್ತು ಬಿದ್ದಿತ್ತು. ಇದನ್ನು ಗ್ರಾಮಸ್ಥರೊಬ್ಬರು ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಚಿರತೆ ಸಾವಿನ ಕುರಿತು ಅನುಮಾನಗಳಿವೆ. ಈ ಹಿನ್ನೆಲೆಯಲ್ಲಿ ಚಿರತೆ ಮತ್ತು ಸಮೀಪದಲ್ಲೇ ಬಿದ್ದಿದ್ದ ನಾಯಿ, ಹಸುವಿನ ಕಳೇಬರದ ಸ್ಯಾಂಪ್‌ಗಳನ್ನು ಕಲೆ ಹಾಕಿ ಲ್ಯಾಬ್‌ಗೆ ಕಳುಹಿಸಿದ್ದೇವೆ. ವರದಿ ಬಂದ ಬಳಿಕ ಚಿರತೆ ಸಾವಿಗೆ ಕಾರಣ ತಿಳಿಯುತ್ತದೆ. ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದೇವೆ. ಕರಿಕಲ್ಲು ಕ್ವಾರಿ ಮಾಲೀಕರು ಮತ್ತು ಇತರರನ್ನು ವಿಚಾರಣೆ ಮಾಡುತ್ತೇವೆ. ಶ್ರೀಪತಿ, ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ನಿರ್ದೇಶಕ, ಚಾಮರಾಜನಗರ