ಹುಲಸೂರಿನಲ್ಲಿ ವಾನರ ಹಿಂಡು ಉಪಟಳ

Capture
Published on

ರಾಜಕುಮಾರ ಹೊನ್ನಾಡೆ ಹುಲಸೂರು
ಪಟ್ಟಣದಲ್ಲಿ ಮಂಗಗಳ ಹಾವಳಿ ಮಿತಿಮೀರಿದೆ. ದಿನಬೆಳಗಾದರೆ ಕೋಡಂಗಿಗಳ ಹಿಂಡು ಮನೆ ಆವರಣದಲ್ಲಿ ಬಂದು ಕುಳಿತುಕೊಳ್ಳುತ್ತದೆ. ಆಟವಾಡುವ ಮಕ್ಕಳಿಗೆ ಕಚ್ಚಿ ಗಾಸಿಗೊಳಿಸುತ್ತಿವೆ. ಇದರಿಂದ ಮಹಿಳೆಯರು ಮತ್ತು ಮಕ್ಕಳು ಮನೆಯಿಂದ ಹೊರಗಡೆ ಬರಲು ಹೆದರುವಂತಾಗಿದೆ.

ಹೊಲ-ಗದ್ದೆಗಳಲ್ಲಿ ಬೆಳೆಗಳ ರಾಶಿ ಮುಗಿದಿರುವುದರಿಂದ ಮಂಗಗಳು ಆಹಾರ ಅರಸಿಕೊಂಡು ಪಟ್ಟಣಕ್ಕೆ ಬರುತ್ತಿವೆ. ಮನೆಯ ಮೇಲೆ ಮತ್ತು ಅಂಗಳದಲ್ಲಿ ಒಣಗಿಸಲು ಹಾಕುವ ಧಾನ್ಯಗಳನ್ನು ತಿಂದು ಹಾಳುಮಾಡುತ್ತಿವೆ. ಅವುಗಳನ್ನು ಓಡಿಸಲು ಹೋದರೆ ಮೈಮೇಲೆ ಎರಗುತ್ತವೆ ಎಂದು ನಿವಾಸಿಗಳು ಗೋಳು ತೋಡಿಕೊಳ್ಳುತ್ತಾರೆ. ಇನ್ನು ಮನೆಯ ಮೇಲೆ ತಗಡಿನ ಶೀಟ್ ಇರುವ ಜನರ ಕಷ್ಟ ಹೇಳತೀರದಾಗಿದೆ. ಪತ್ರಾಸ್ಗಳ ಮೇಲೆ ಕುಣಿದಾಡಿ ಜೋರಾಗಿ ಶಬ್ದ ಮಾಡುವುದಲ್ಲದೆ ಹಾಳು ಮಾಡುತ್ತಿವೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಪಟ್ಟಣದ ಓಣಿಗಳಲ್ಲಿ ಹಿಂಡುಹಿಂಡಾಗಿ ಓಡಾಡುವ ಮಂಗಗಳು ಮನೆಯ ಹೊರಗಡೆ ಇರುವ ವಸ್ತುಗಳೊಂದಿಗೆ ಆಟವಾಡುತ್ತ ಹಾಳು ಮಾಡುತ್ತವೆ. ಹಿರಿಯರು ಕೆಲಸಕ್ಕೆ ಹೋದಾಗ ಯಾರೂ ಇಲ್ಲದನ್ನು ಗಮನಿಸಿ ಮನೆಯೊಳಗೆ ನುಗ್ಗಿ ದಾಂಧಲೆ ಮಾಡುತ್ತವೆ. ಮಕ್ಕಳನ್ನು ಕಂಡರೆ ಹೆದರಿಸುತ್ತವೆ. ವಾರ್ಡ್​ 1ರಲ್ಲಿ ಸೋಮವಾರ ಅನುಶ್ರೀ ಎಂಬ ಬಾಲಕಿ ಮನೆಯ ಮೇಲೆ ಆಟವಾಡಲು ಹೋಗಿದ್ದಾಗ ಮಂಗವೊಂದು ಕಾಲಿಗೆ ಕಚ್ಚಿ ಗಾಯ ಮಾಡಿದೆ. ಚಿಕಿತ್ಸೆ ಕೊಡಿಸಿದ್ದು 7-8ರಿಂದ ಹೊಲಿಗೆ ಬಿದ್ದಿವೆ. ಹಿಂದೆಯೂ ಇದೇ ರೀತಿಯ ಘಟನೆಗಳು ಜರುಗಿವೆ.

ಮಂಗಗಳ ಜತೆಗೆ ಕೆಂಪು ಕೋತಿಗಳ ಉಪಟಳವೂ ಹೆಚ್ಚಾಗಿದೆ. ಪಾಲಕರು ಕೆಲಸಕ್ಕೆ ಹೋದಾಗ ಮನೆಯಲ್ಲಿ ನುಗ್ಗಿ ಧವಸ-ಧಾನ್ಯಗಳನ್ನು ತೆಗೆದುಕೊಂಡು ಹೋಗುತ್ತವೆ. ಇದರಿಂದ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಹೋಗುವುದು ಕಷ್ಟವಾಗಿದೆ. ಮನೆಯ ಮೇಲೆ ಕುಣಿದಾಡುತ್ತಿರುವುದರಿಂದ ಪತ್ರಾಸ್ಗಳು ಬಿದ್ದು ಹಾನಿ ಸಂಭವಿಸಿದೆ. ಅರಣ್ಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಪರಿಹಾರ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಪಟ್ಟಣದಲ್ಲಿ ಮಂಗಗಳ ಉಪಟಳ ಹೆಚ್ಚಾಗಿದೆ. ಓಡಿಸಲು ಹೋದರೆ ಹೆದರಿಸುತ್ತಿವೆ. ಮಕ್ಕಳನ್ನು ಮನೆಯಲ್ಲಿ ಬಿಟ್ಟು ಹೊಲದ ಕೆಲಸಕ್ಕೆ ಹೋದಾಗ ದಾಳಿ ಮಾಡಿ ಕಚ್ಚುತ್ತಿವೆ. ನನ್ನ ಮಗಳಿಗೂ ಕಚ್ಚಿ ಗಂಭೀರ ಗಾಯ ಮಾಡಿವೆ. ಸ್ಥಳೀಯ ಗ್ರಾಮ ಪಂಚಾಯಿತಿಯವರಾದರೂ ಇವುಗಳ ಹಾವಳಿ ಕಡಿವಾಣಕ್ಕೆ ಕ್ರಮ ಕೈಗೊಳ್ಳಬೇಕು.
| ಲೋಕೇಶ ಮೇತ್ರೆ, ರೈತ ಹುಲಸೂರು

ಹುಲಸೂರಿನಲ್ಲಿ ಮಂಗಗಳ ಹಾವಳಿ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ವನ್ಯಜೀವಿಗಳು ಉಪಟಳ ಮಾಡಿದರೆ ನಾವು ಏನೂ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಹುಚ್ಚು ಹಿಡಿದಿದ್ದರೆ ಹಿಡಿದುಕೊಂಡು ಹೋಗಬಹುದು. ಮಂಗ ಕಚ್ಚಿ ಗಾಯ ಮಾಡಿದರೆ ಆಸ್ಪತ್ರೆಯ ವೆಚ್ಚವನ್ನು ಇಲಾಖೆ ಭರಿಸುತ್ತದೆ. ಪಾಲಕರು ಇಲಾಖೆ ಅಧಿಕಾರಿಗಳನ್ನು ಸಂಪಕರ್ಿಸಬೇಕು. ಸಾರ್ವಜನಿಕರು ಕೂಡ ವನ್ಯಜೀವಿಗಳಿಗೆ ತೊಂದರೆ ಕೊಡಬಾರದು.
| ಎಸ್.ಎಂ.ಖಾದ್ರಿ, ವಲಯ ಅರಣ್ಯಾಧಿಕಾರಿ ಬಸವಕಲ್ಯಾಣ

ಪಟ್ಟಣದಲ್ಲಿ ಮಂಗಗಳ ಉಪಟಳ ಮಾಡುತ್ತಿರುವುದು ಮತ್ತು ಇವುಗಳ ಸಂಖ್ಯೆ ಹೆಚ್ಚಾಗಿರುವ ಬಗ್ಗೆ ಗಮನಕ್ಕೆ ಬಂದಿದೆ. ಸ್ಥಳಾಂತರ ಮಾಡುವಂತೆ ಗ್ರಾಮ ಪಂಚಾಯಿತಿಯಿಂದ ಅರಣ್ಯ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು.
| ಭೀಮಶಪ್ಪ ದಂಡಿನ್, ಪಿಡಿಒ ಹುಲಸೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net