ಹುಮನಾಬಾದ್ ಮುಖ್ಯಾಧಿಕಾರಿ ಅಮಾನತು ಮಾಡಿ

Verranna patil
Published on

ಹುಮನಾಬಾದ್: ಪಟ್ಟಣದಲ್ಲಿ ಸಾರ್ವಜನಿಕರಿಗೆ ವಿದ್ಯುತ್ ದೀಪ, ಚರಂಡಿ ಸ್ವಚ್ಛತೆ ಸೇರಿ ಇತರ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಸಂಪೂರ್ಣ ವಿಫಲವಾದ ಹಾಗೂ ಕರ್ತವ್ಯದಲ್ಲಿ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವ ಪುರಸಭೆ ಮುಖ್ಯಾಧಿಕಾರಿಯನ್ನು ಅಮಾನತ್ತು ಮಾಡಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ, ಜಿಪಂ ಮಾಜಿ ಸದಸ್ಯ ವೀರಣ್ಣ ಪಾಟೀಲ್ ಆಗ್ರಹಿಸಿದ್ದಾರೆ.

ಪುರಸಭೆ ಮುಖ್ಯಾಧಿಕಾರಿ ಕೇಂದ್ರ ಸ್ಥಾನದಲ್ಲಿ ಇರುವುದಿಲ್ಲ. ಮನಸ್ಸಿಗೆ ಬಂದAತೆ ಬೆಳಗ್ಗೆ ೧೨ಕ್ಕೆ ಕಚೇರಿ ಆಗಮಿಸಿ, ಸಂಜೆ ೪ ಗಂಟೆಗೆ ಹೋಗುತ್ತಾರೆ. ಬೇರೆಡೆಯಿಂದ ಆಗಮಿಸುವ ಮುಖ್ಯಾಧಿಕಾರಿಗೆ ಇಲ್ಲಿನ ಸ್ವಚ್ಛತೆ, ವಿದ್ಯುತ್ ದೀಪ ಸೇರಿ ಇತರ ಸಮಸ್ಯೆಗೆ ಸ್ಪಂದಿಸಲು ಸಾಧ್ಯವೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ರಾಜರೋಷವಾಗಿ ಅವ್ಯವಹಾರದಲ್ಲಿ ತೊಡಗಿದ್ದು, ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಅಳವಡಿಸಲು ವಿದ್ಯುತ್ ದೀಪಗಳ ಖರೀದಿಯಲ್ಲಿ ಅವ್ಯವಹಾರ ಆಗಿದೆ. ೪೫೦ ದೀಪಗಳ ಪೈಕಿ ೨೦೦ ಅಳವಡಿಸಲಾಗಿದೆ. ಕಳಪೆ ದೀಪಗಳನ್ನು ಅಳವಡಿಸಿದ್ದು, ವಾರದಲ್ಲಿಯೇ ಕೆಟ್ಟಿವೆ. ದೀಪಗಳನ್ನು ಶೇ.೪೬ ಕಡಿಮೆ ಗುತ್ತಿಗೆಯಲ್ಲಿ ಖರೀದಿಸಲಾಗಿದೆ. ಇದರಿಂದ ಗುಣಮಟ್ಟದ ದೀಪಗಳು ಪೂರೈಸಲು ಸಾಧ್ಯವೇ ಇಲ್ಲ. ಕಳಪೆಯಲ್ಲಿ ಅಧಿಕಾರಿಗಳ ಕೈವಾಡವಿದ್ದು, ಅವ್ಯವಹಾರಗಳ ಕುರಿತು ಪೌರಾಡಳಿತ ಸಚಿವ ರಹೀಮ್ ಖಾನ್ ಉನ್ನತ ತನಿಖೆ ನಡೆಸಿ, ತಕ್ಷಣ ಮುಖ್ಯಾಧಿಕಾರಿಯನ್ನು ಅಮಾನತು ಮಾಡಿ, ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ಪಟ್ಟಣದ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ಖಾಸಗಿ ವ್ಯಕ್ತಿಗಳ ಒತ್ತುವರಿಗೆ ಅವಕಾಶ ಕಲ್ಪಿಸುತ್ತಿದ್ದಾರೆ. ಮುಖ್ಯವಾಗಿ ಗ್ರಂಥಾಲಯಕ್ಕೆ ಹೊಂದಿಕೊAಡ ಸ್ಥಳದಲ್ಲಿ ಖಾಸಗಿ ಅಂಗಡಿ ತಲೆ ಎತ್ತಿದ್ದು, ಮುಖ್ಯಾಧಿಕಾರಿ ಮೌನ ವಹಿಸಿದ್ದಾರೆ.

ಪಟ್ಟಣದ ಬಹುತೇಕ ಕಡೆ ಅನುಮತಿ ಇಲ್ಲದೆ ನಾಲ್ಕೈದು ಅಂತಸ್ತಿನ ಕಟ್ಟಡ ನಿರ್ಮಾಣವಾಗುತ್ತಿವೆ. ಆದರೂ ಕ್ರಮ ಕೈಗೊಳ್ಳುತ್ತಿಲ್ಲ. ಮುಖ್ಯಾಧಿಕಾರಿ ನಗರ ಸಂಚಾರವೇ ಮಾಡುತ್ತಿಲ್ಲ. ಇವರು ಸುತ್ತಾಡಿ ಜನರ ಸಮಸ್ಯೆ ಆಲಿಸುತ್ತಿಲ್ಲ. ಆಡಳಿತಾಧಿಕಾರಿ ಸಹಾಯಕ ಆಯುಕ್ತರಿಗೂ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಕಿಡಿ ಕಾರಿದರು. ಜಿಲ್ಲಾಧಿಕಾರಿ ಪುರಸಭೆಗೆ ಭೇಟಿ ನೀಡಿ, ಸಮಗ್ರ ತನಿಖೆ ನಡೆಸಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಪೌರಾಡಳಿತ ಸಚಿವ ರಹೀಂ ಖಾನ್ ಅವರಿಗೂ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net