ಹುಮನಾಬಾದ್ ಬಂದ್ ಸಂಪೂರ್ಣ

24 HBD 1
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಜನಪರ ಸಂಘಟನೆಗಳ ಒಕ್ಕೂಟದಿಂದ ಹುಮನಾಬಾದ್‌ನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ರಾಷ್ಟ್ರಪತಿಗೆ ಬರೆದ ಮನವಿಪತ್ರವನ್ನು ತಹಸೀಲ್ದಾರ್ ಅಂಜುಂ ತಬಸ್ಸುಮ್ ಅವರಿಗೆ ಸಲ್ಲಿಸಲಾಯಿತು.
Published on

ಹುಮನಾಬಾದ್: ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಸಂಸತ್‌ನಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಗೃಹ ಸಚಿವ ಅಮಿತ್ ಷಾ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿ ತಾಲೂಕು ಜನಪರ ಸಂಘಟನೆಗಳ ಒಕ್ಕೂಟದಿಂದ ಮಂಗಳವಾರ ಬಂದ್ ಮೂಲಕ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಬಂದ್ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಸಂಪೂರ್ಣ ಅಂಗಡಿ ಹಾಗೂ ಶಾಲಾ ಕಾಲೇಜು ಮುಚ್ಚಿದ್ದವು. ಮೆಡಿಕಲ್, ಆಸ್ಪತ್ರೆ, ಸರ್ಕಾರಿ ಕಚೇರಿ ತೆರೆದಿದ್ದವು. ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ನಿಲ್ದಾಣ ಬಿಕೋ ಎನ್ನುತ್ತಿತ್ತು.

ಹಳೇ ತಹಸಿಲï ಕಚೇರಿ ಹತ್ತಿರದಿಂದ ಶಿವಾಜಿ, ಬಸವೇಶ್ವರ, ಬಾಲಾಜಿ, ಸರ್ದಾರ್ ಪಟೇಲ್ ವೃತ್ತದ ಮೂಲಕ ಮುಖ್ಯರಸ್ತೆ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ನಡೆದ ಬೃಹತ್ ಮೆರವಣಿಗೆಯುದ್ದಕ್ಕೂ ಷಾ ವಿರುದ್ಧ ಘೋಷಣೆಗಳು ಮೊಳಗಿದವು. ನಂತರ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹಲವಾರು ಪ್ರಮುಖರು, ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನದ ಫಲವಾಗಿಯೇ ಅಮಿತ್ ಷಾ ಸಚಿವರಾಗಿದ್ದಾರೆ. ಅಂಥವರ ಬಗ್ಗೆ ಅವಮಾನಕರ ಹೇಳಿಕೆ ನೀಡಿದ ಷಾ ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ವಿರುದ್ಧ ಕಿಡಿಕಾರಿದರು.

ಸಚಿವ ಷಾ ಅವರನ್ನು ಸಂಪುಟದಿಂದ ವಜಾಗೊಳಿಸಿ ದೇಶದ್ರೋಹಿ ಪ್ರಕರಣ ದಾಖಲಿಸಿದೇಶದಿಂದ ಗಡಿಪಾರು ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ಸಚಿವರ ಕೈಗೊಂಬೆಯಾಗಿರುವ ಭಾಲ್ಕಿ ಡಿವೈಎಸ್‌ಪಿ ಅವರನ್ನು ಅಮಾನತು ಗೊಳಿಸಬೇಕೆಂಬ ಹಕ್ಕೊತ್ತಾಯಿಸಿ ರಾಷ್ಟ್ರಪತಿ ಹಾಗೂ ರಾಜಪಾಲರಿಗೆ ಬರೆದ ಮನವಿಪತ್ರವನ್ನು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಅಂಜುಂ ತಬಸ್ಸುಮ್ ಅವರಿಗೆ ಸಲ್ಲಿಸಲಾಯಿತು.

ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಒಕ್ಕೂಟದ ಅಧ್ಯಕ್ಷ ರಮೇಶ ಡಾಕುಳಗಿ, ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಪುತ್ತ ಮಾಳಗೆ, ಉಪಾಧ್ಯಕ್ಷ ಶೇಖ್ ಮಕ್ಸೂದ್, ಪ್ರಭುರಾವ ತಾಳಮಡಗಿ, ಗಜೇಂದ್ರ ಕನಕಟ್ಟಕರ, ಪ್ರಮುಖರಾದ ಲಕ್ಷ್ಮಣರಾವ ಬುಳ್ಳಾ, ಅಂಕುಶ ಗೋಖಲೆ, ಗೌತಮ ಸಾಗರ, ಶಿವರಾಜ ಚೀನಕೇರಾ, ಯಾಸಿನ್ ಅಲಿ, ಸುರೇಶ ಘಾಂಗ್ರೆ, ವೀರಪ್ಪ ಧುಮ್ಮನಸೂರ, ಅಶೋಕ ಕಟ್ಟಿ, ಅನೀಲ ದೊಡ್ಡಿ, ಗಣಪತಿ ಅಷ್ಟೂರೆ, ಮಲ್ಲಿಕಾರ್ಜುನ ಮಹೇಂದ್ರಕರ, ಪ್ರಭುರಾವ ಚಿತ್ತಾಕೋಟ, ಜೈರಾಜ ವೈದ್ಯ, ಸುಭಾಷ ಆರ್ಯ, ಬಸವರಾಜ ಮೋಳಕೇರಾ, ನರಸಪ್ಪ ಪರಸನೋರ, ಝರೇಪ್ಪ ಬೆಲ್ದಾಳೆ, ಶಿವಪತ್ರ ಮಾಳಗೆ, ಗೌತಮ ಚವ್ಹಾಣ್, ಗೌತಮ ಪ್ರಸಾದ, ಧರ್ಮರಾಯ ಘಾಂಗ್ರೆ, ಮಲ್ಲಿಕಾರ್ಜುನ ಶರ್ಮಾ, ಶಶಿಕಾಂತ ಡಾಂಗೆ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net