ಹುಬ್ಬಳ್ಳಿಯಲ್ಲಿ ವಿಮಾನ ಚಾಲನೆ ತರಬೇತಿ

H5 Flying Training
Published on

ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣದ ವ್ಯಾಪ್ತಿಯಲ್ಲಿ ವಿಮಾನ ಚಾಲನೆ ತರಬೇತಿ ಕೇಂದ್ರ (ಫ್ಲೈಯಿಂಗ್ ಟ್ರೇನಿಂಗ್ ಸೆಂಟರ್-ಎಫ್​ಟಿಸಿ) ಆರಂಭಿಸಲು ಕೇಂದ್ರ ವಿಮಾನಯಾನ ಸಚಿವಾಲಯ ಒಪ್ಪಿಗೆ ಸೂಚಿಸಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಕೇಂದ್ರ ಸ್ಥಾಪನೆಯಿಂದ ಹುಬ್ಬಳ್ಳಿಗೆ ಮತ್ತೊಂದು ಹಿರಿಮೆ ದೊರೆಯಲಿದೆ. ದೇಶದಲ್ಲಿ ಪೈಲಟ್​ಗಳ ಕೊರತೆ ನೀಗಿಸಲು ಕೇಂದ್ರ ಸರ್ಕಾರ ದೇಶಾದ್ಯಂತ ಆರು ವಿಮಾನ ತರಬೇತಿ ಕೇಂದ್ರಗಳನ್ನು ಆರಂಭಿಸುತ್ತಿದೆ. ಉತ್ತರ ಕರ್ನಾಟಕದಲ್ಲಿ ವೈಮಾನಿಕ ಶಾಲೆಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಈ ತರಬೇತಿ ಕೇಂದ್ರ ತಲೆ ಎತ್ತಲಿರುವುದು ಈ ಭಾಗದ ಜನತೆಗೆ ಸಂತಸದ ವಿಷಯವಾಗಿದೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನ ಚಾಲನಾ ತರಬೇತಿ ಕೇಂದ್ರ ಆರಂಭಿಸುವಂತೆ ಈ ಹಿಂದಿನ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ಹಾಗೂ ಈಗಿನ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಮನವಿ ಸಲ್ಲಿಸಿದ್ದೆ. ಈ ಮನವಿಗೆ ಸ್ಪಂದಿಸಿದ ಸಚಿವ ಸಿಂಧಿಯಾ ಅವರು ಬೇಡಿಕೆ ಈಡೇರಿಸಿದ್ದಾರೆ. ಇದರಿಂದ ವಿಮಾನ ಚಾಲನಾ ತರಬೇತಿ ಬಯಸುವ ಈ ಭಾಗದ ಯುವಕ- ಯುವತಿಯರಿಗೆ ಉತ್ತಮ ಅವಕಾಶವಾಗಲಿದೆ. ಜತೆಗೆ ಕೈಗಾರಿಕೋದ್ಯಮಕ್ಕೂ ಸಹಕಾರಿಯಾಗಲಿದೆ ಎಂದು ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ತರಬೇತಿ ಕೇಂದ್ರ ಸ್ಥಾಪನೆಗೆ ಒಪ್ಪಿಗೆ ಸೂಚಿಸಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಜೋಶಿ ಧನ್ಯವಾದ ತಿಳಿಸಿದ್ದಾರೆ.

ಪಂಜಾಬ್ ವಿರುದ್ಧ ಅಸಮಾಧಾನ

ಹುಬ್ಬಳ್ಳಿ: ಪಂಜಾಬ್​ನ ಭಟಿಂಡಾದ ಫ್ಲೈ ಓವರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಾಹನ ಹಾಗೂ ಬೆಂಗಾವಲು ಪಡೆಯ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ವರ್ತನೆಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಖಂಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಪಂಜಾಬ್ ಸರ್ಕಾರ ರಾಜಕೀಯ ಉದ್ದೇಶಕ್ಕಾಗಿ ಅಂದಾಜು 20 ನಿಮಿಷಗಳವರೆಗೆ ಪ್ರಧಾನಿ ಹಾಗೂ ಅವರ ಬೆಂಗಾವಲು ಪಡೆಯನ್ನು ಫ್ಲೈ ಓವರ್ ಮೇಲೆ ಕಾಯುವಂತೆ ಮಾಡಿದ್ದು ಇಡಿ ದೇಶಕ್ಕೆ ಅವಮಾನ ಮಾಡಿದಂತಾಗಿದೆ. ಯಾವುದೇ ರಾಜ್ಯಕ್ಕೆ ಪ್ರಧಾನಿ ಭೇಟಿ ನೀಡಿದಾಗ ಅವರ ರಕ್ಷಣೆ ಹಾಗೂ ಭದ್ರತಾ ವ್ಯವಸ್ಥೆಯ ಹೊಣೆಗಾರಿಕೆ ಹಾಗೂ ಕರ್ತವ್ಯ ಆಯಾ ರಾಜ್ಯ ಸರ್ಕಾರದ್ದಾಗಿರುತ್ತದೆ. ಪ್ರಧಾನಿಯವರು ಸಂಚರಿಸುತ್ತಿದ್ದ ಮಾರ್ಗ ಜನ ಸಂಚಾರ ರಹಿತವಾಗಿದ್ದರೂ ಪ್ರತಿಭಟನಾಕಾರರು ನುಸುಳಿರುವುದು ಪಂಜಾಬ ಸರ್ಕಾರದ ಬೇಜವಾಬ್ದಾರಿ ಕರ್ತವ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net