

ಹುಬ್ಬಳ್ಳಿ: ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ಜೂನ್ 4ರಂದು ರನ್ ಫಾರ್ ನೇಚರ್ (ನಿಸರ್ಗಕ್ಕಾಗಿ ಓಟ) ಆಯೋಜಿಸಲಾಗಿದೆ ಎಂದು ಗ್ರೀನ್ ಕರ್ನಾಟಕ ಅಸೋಸಿಯೇಷನ್ ಅಧ್ಯಕ್ಷ ಚನ್ನು ಹೊಸಮನಿ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 6.30ಕ್ಕೆ ತೋಳನಕೆರೆ ಉದ್ಯಾನದಿಂದ 3 ಕಿ.ಮೀ. ಹಾಗೂ 6 ಕಿ.ಮೀ. ಎರಡು ವಿಭಾಗದಲ್ಲಿ ಓಟ ಆರಂಭಗೊಳ್ಳಲಿದೆ. ಸುಮಾರು 800 ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಅಭಿವೃದ್ಧಿಗಾಗಿ ಮರಗಳನ್ನು ಕಡಿಯಲಾಗುತ್ತಿರುವುದರಿಂದ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ವಾತಾವರಣದಲ್ಲಿ ಬದಲಾವಣೆ ಕಂಡು ಬರುತ್ತಿದೆ. ಹಾಗಾಗಿ ನಾವು ಜೂ. 4ರಿಂದ ಆಗಸ್ಟ್ 30ರವರೆಗೆ 25 ಸಾವಿರ ಸಸಿಗಳನ್ನು ನೆಡುವ ಅಭಿಯಾನ ನಡೆಸಲಿದ್ದೇವೆ. ಈ ಅಭಿಯಾನದಲ್ಲಿ ಆಸಕ್ತರಿಗೆ ಉಚಿತವಾಗಿ ಸಸಿಗಳನ್ನು ನೀಡುತ್ತೇವೆ. ಮನೆಯಲ್ಲಿ ನೆಟ್ಟು ಪೋಷಿಸಬಹುದು. ಪಾಲಿಕೆ ಉದ್ಯಾನಗಳಲ್ಲಿ ಸಸಿಗಳನ್ನು ನೆಡಲು ರೋಟರಿ, ಲಯನ್ಸ್, ಸ್ಥಳೀಯ ಸಂಘ ಸಂಸ್ಥೆಗಳಿಗೆ ಉತ್ತೇಜನ ನೀಡುತ್ತೇವೆ ಎಂದು ಹೇಳಿದರು.
ರಸ್ತೆ ಬದಿ, ಖಾಲಿ ಸ್ಥಳಗಳಲ್ಲಿ ಸಸಿಗಳನ್ನು ನೆಡುವುದಿಲ್ಲ. ಸಾರ್ವಜನಿಕರು ಅಥವಾ ಸಂಘ ಸಂಸ್ಥೆಗಳು ನಾವು ಕೊಟ್ಟ ಸಸಿಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು. ಪ್ರತಿ ಶನಿವಾರ ಅಥವಾ ಭಾನುವಾರ ಫಾಲೋಅಪ್ ಮಾಡುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಸುಂಧರಾ ಫೌಂಡೇಷನ್ನ ಅಧ್ಯಕ್ಷ ಮೇಘರಾಜ ಕೆರೂರ, ವಿ ಕೇರ್ ಫೌಂಡೇಷನ್ನ ಅಧ್ಯಕ್ಷ ಗಂಗಾಧರ ಗುಜಮಾಗಡಿ, ವೆಂಕಟೇಶ ಕಾಟವೆ, ರವಿರಾಜ ಕಮ್ಮಾರ ಇದ್ದರು.