ಹುಬ್ಬಳ್ಳಿಯಲ್ಲಿ ರಂಗಪಂಚಮಿ ಸಂಭ್ರಮ

h11-Holi Bani Oni 2
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಶನಿವಾರ ರಂಗಪಂಚಮಿ ರಂಗೇರುವಂತೆ ಮಾಡಿತು. ನಗರದ ವಿವಿಧೆಡೆ ಜಮಾಯಿಸಿದ್ದ ಜನರು ಪರಸ್ಪರ ಬಣ್ಣ ಎರಚುವ ಮೂಲಕ ರಂಗಪಂಚಮಿಯ ಸಂಭ್ರಮದಲ್ಲಿ ಮಿಂದೆದ್ದರು.

ನಗರದ ಚನ್ನಮ್ಮ ವೃತ್ತ, ರಾಯಣ್ಣ ವೃತ್ತ, ಕಮರಿಪೇಟೆ, ದಾಜಿಬಾನಪೇಟೆ, ಬಾನಿ ಓಣಿ, ಮ್ಯಾದಾರ ಓಣಿ, ಮರಾಠ ಗಲ್ಲಿ, ಬಮ್ಮಾಪುರ ಓಣಿ, ಹಳೇ ಹುಬ್ಬಳ್ಳಿ, ಚನ್ನಪೇಟ, ನೇಕಾರ ನಗರ, ನವನಗರ ಮತ್ತಿತರ ಪ್ರದೇಶದಲ್ಲಿ ಸಾಂಪ್ರದಾಯಿಕ ಹೋಳಿ ಆಚರಣೆ ಆಡಿದರು.

ವಿವಿಧ ಬಡಾವಣೆಗಳಲ್ಲಿ ಬೆಳಗ್ಗೆಯಿಂದಲೇ ರಸ್ತೆಗಳಿದ ಯುವಕರು, ಮಕ್ಕಳು, ಮಹಿಳೆಯರು ಪರಸ್ಪರ ಬಣ್ಣ ಎರಚಿ ಸಂಭ್ರಮಿಸಿದರು. ಕೈಯಲ್ಲಿ ಬಣ್ಣದ ಚೀಲ, ತುತ್ತೂರಿ, ಪಿಚಕಾರಿ ಹಿಡಿದು ಬೈಕ್​ಗಳಲ್ಲಿ ಸುತ್ತಾಡಿದರು. ಎದುರು ಬಂದವರಿಗೆ ಬಣ್ಣ ಎರಚುತ್ತ, ಹೋಳಿ ಹಬ್ಬದ ಶುಭಾಶಯ ಹೇಳಿ ಸಂಭ್ರಮಿಸಿದರು.

ವಿವಿಧ ಆಕಾರದ ಮುಖವಾಡ ಧರಿಸಿದ ಯುವಕ, ಯುವತಿಯರು ನಗರದೆಲ್ಲೆಡೆ ಗಮನ ಸೆಳೆದರು. ಅಲ್ಲಲ್ಲಿ ಮೀಸಲಿಟ್ಟಿದ್ದ ಪ್ರತ್ಯೇಕ ಸ್ಥಳಗಳಲ್ಲಿ ಬಣ್ಣದಾಟವಾಡಿ ಕುಣಿದು ಕುಪ್ಪಳಿಸಿದರು. ಹಾಡು, ನೃತ್ಯವು ರಂಗಿನಾಟಕ್ಕೆ ಮೆರುಗು ಹೆಚ್ಚಿಸಿತು. ಪಿಚಕಾರಿಗಳಲ್ಲಿ ಬಣ್ಣದ ನೀರು ತುಂಬಿ, ವಾಹನ ಸವಾರರಿಗೆ ಎರಚಿ ಆನಂದಿಸಿದರು. ಕೆಲವರು ತಮಗೆ ಬೇಕಿದ್ದವರ ಮನೆಗಳಿಗೆ ತೆರಳಿ ಬಣ್ಣ ಹಚ್ಚಿದರು.

ಪೊಲೀಸರೂ ಮಿಂದೆದ್ದರು

ನಗರದ ವಿವಿಧೆಡೆ ಬಿಗಿ ಬಂದೋಬಸ್ತ್​ಗೆಂದು ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಪೊಲೀಸರು ತಾವೂ ಬಣ್ಣದಾಟವಾಡಿ ಸಂಭ್ರಮಿಸಿದರು. ಬೇರೆಯವರು ಬಣ್ಣ ಹಾಕಿದರೆ ತಾವೂ ಅವರಿಗೆ ಬಣ್ಣ ಹಚ್ಚಿ ಶುಭಾಶಯ ವಿನಿಮಯ ಮಾಡಿಕೊಂಡರು. ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರಾಜೀವ ಎಂ. ಅವರು ಪೊಲೀಸರ ತಂಡದೊಂದಿಗೆ ನಗರದೆಲ್ಲೆಡೆ ಸಂಚರಿಸಿ, ಬಿಗಿ ಬಂದೋಬಸ್ತ್ ಪರಿಶೀಲಿಸಿದರು.

ರತಿ-ಮನ್ಮಥರ ಮೂರ್ತಿ ಮೆರವಣಿಗೆ

ಹುಣ್ಣಿಮೆ ದಿನದಂದು ನಗರದ ಮ್ಯಾದಾರ ಓಣಿ, ಮರಾಠ ಗಲ್ಲಿ, ಬ್ಯಾಳಿ ಓಣಿ ಇತರೆಡೆ ಒಟ್ಟು 462 ರತಿ-ಮನ್ಮಥರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಕೆಲವೆಡೆ ಹುಣ್ಣಿಮೆ ದಿನದಂದೇ ಈ ಮೂರ್ತಿಗಳನ್ನು ದಹಿಸಿದರೆ, ಬಹಳಷ್ಟು ಮೂರ್ತಿಗಳನ್ನು ರಂಗಪಂಚಮಿ ದಿನವಾದ ಶನಿವಾರದಂದು ಮೆರವಣಿಗೆ ನಡೆಸಿದ ನಂತರ ದಹಿಸಲಾಯಿತು. ಮೆರವಣಿಗೆ ಉದ್ದಕ್ಕೂ ಜನರು ಗುಲಾಲ್ ಆಡಿದರು. ಕುಟುಂಬ ಸಮೇತ ಬಂದು ರತಿ-ಮನ್ಮಥ ಮೂರ್ತಿಗಳಿಗೆ ಪೂಜೆ ಸಲ್ಲಿಸಿದರು. ಬಹಳಷ್ಟು ಕಡೆಗೆ ಬಣ್ಣದ ಗಡಿಗೆಗಳನ್ನು ಒಡೆದು ಖುಷಿಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net