

ಹುಬ್ಬಳ್ಳಿ: ನಾಲ್ಕೈದು ಯುವಕರ ಗುಂಪು ದ್ವಿಚಕ್ರ ವಾಹನಗಳಲ್ಲಿ ಒಬ್ಬನನ್ನು ಅಟ್ಟಿಸಿಕೊಂಡು ಬಂದು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿದ ಘಟನೆ ಇಲ್ಲಿಯ ದೇಶಪಾಂಡೆ ನಗರದ ಕೃಷ್ಣ ನಗರದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಚಾಮುಂಡೇಶ್ವರಿ ನಗರದ ಲೋಕೇಶ ಲಕ್ಷ್ಮಣ ಕಡೇಮನಿ (20) ಎಂಬಾತ ಹತ್ಯೆಯಾದವನು ಎಂದು ತಿಳಿದು ಬಂದಿದೆ. ಈತನ ಎದೆ, ಬೆನ್ನು ಸೇರಿ ನಾಲ್ಕೈದು ಕಡೆ ಇರಿದ ದುಷ್ಕರ್ವಿುಗಳು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ. ತೀವ್ರ ಗಾಯಗೊಂಡಿದ್ದ ಯುವಕನನ್ನು ಕಿಮ್ಸ್ಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಲಿಲ್ಲ.
ಲೋಕೇಶ ಕಡೇಮನಿ ಗುಟ್ಖಾ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಯುವತಿ ವಿಷಯಕ್ಕೆ ಸಂಬಂಧಿಸಿದ ದ್ವೇಷದಿಂದ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ಉಪನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ನಗರದಲ್ಲಿ ಇತ್ತೀಚೆಗೆ ಮಚ್ಚು, ಲಾಂಗುಗಳ ಅಟ್ಟಹಾಸ ನಡೆದಿರಲಿಲ್ಲ. ಈಗ ಜನವಸತಿ ಪ್ರದೇಶದಲ್ಲಿ, ಕೃಷ್ಣ ಕಲ್ಯಾಣ ಮಂಟಪದ ಹಿಂಭಾಗದ ಖಾಲಿ ಜಾಗದಲ್ಲಿ ಬರ್ಬರವಾಗಿ ಹತ್ಯೆ ನಡೆದಿದ್ದು, ನಾಗರಿಕರು ಆತಂಕ ಪಡುವಂತಾಗಿದೆ.