ಹುಬ್ಬಳ್ಳಿಯಲ್ಲಿ ಮತ್ತೊಂದು ಪ್ರಕರಣ

carona logo
Published on

ಧಾರವಾಡ: ಹುಬ್ಬಳ್ಳಿಯಲ್ಲಿ ಶುಕ್ರವಾರ ಮತ್ತೊಂದು ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.

ಕೆಮ್ಮು, ನೆಗಡಿ ಹಾಗೂ ಜ್ವರದಿಂದ ಬಳಲುತ್ತಿದ್ದ ಹುಬ್ಬಳ್ಳಿ ಕೇಶ್ವಾಪುರ ಶಾಂತಿನಗರದ 57 ವರ್ಷದ ವ್ಯಕ್ತಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಈತನನ್ನು ಪಿ 589 ಎಂದು ಗುರುತಿಸಲಾಗಿದೆ. ಇದು ಜಿಲ್ಲೆಯ 10ನೇ ಪ್ರಕರಣವಾಗಿದೆ. ಈ ಪೈಕಿ ಇಬ್ಬರು ಈಗಾಗಲೇ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 8 ಜನ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜ್ವರದಿಂದ ಬಳಲುತ್ತಿದ್ದ ವ್ಯಕ್ತಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಕೆಲ ದಿನಗಳ ಹಿಂದೆ ಆತನ ಗಂಟಲ ದ್ರವದ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಕೋವಿಡ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆತನ ವರದಿ ವೈದ್ಯರ ಕೈ ಸೇರಿದ್ದು, ಪಾಸಿಟಿವ್ ಬಂದಿದೆ. ಕೋವಿಡ್ ಮೂಲ ಹಾಗೂ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಮಾಹಿತಿಯನ್ನು ಆರೋಗ್ಯ ಇಲಾಖೆ ಕಲೆ ಹಾಕುತ್ತಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ವಾರದಿಂದ ಒಂದೂ ಪ್ರಕರಣ ಪತ್ತೆಯಾಗಿರಲಿಲ್ಲ. ಕೆಂಪು ವಲಯದಿಂದ ಕಿತ್ತಳೆ ವಲಯಕ್ಕೆ ಜಿಲ್ಲೆ ಪದೋನ್ನತಿ ಪಡೆದಿತ್ತು. ಚಿಕಿತ್ಸೆಯಲ್ಲಿದ್ದವರು ಗುಣಮುಖರಾಗುತ್ತಿದ್ದಂತೆ ಜಿಲ್ಲೆ ಹಸಿರು ವಲಯಕ್ಕೆ ಸೇರುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಹೋದೆಯಾ ಪಿಶಾಚಿ ಎನ್ನುವಷ್ಟರಲ್ಲಿ ಬಂದೆ ಗವಾಕ್ಷೀಲಿ... ಎಂಬಂತೆ ಮತ್ತೊಂದು ಪ್ರಕರಣ ಪಾಸಿಟಿವ್ ಬಂದಿದ್ದರಿಂದ, ಆತಂಕ ಕಾಡತೊಡಗಿದೆ.

ಟ್ರಾವೆಲ್ ಹಿಸ್ಟರಿ ತಲೆಬಿಸಿ!

ಇಲ್ಲಿಯ ಕೇಶ್ವಾಪುರ ಶಾಂತಿ ನಗರ ನಿವಾಸಿಯೊಬ್ಬನಲ್ಲಿ ಶುಕ್ರವಾರ ಕರೊನಾ ವೈರಾಣು ಪತ್ತೆಯಾಗಿದ್ದು, ಆತ ಇತ್ತೀಚಿನ ದಿನಗಳಲ್ಲಿ ಎಲ್ಲೆಲ್ಲೆ ಹೋಗಿದ್ದ ಎನ್ನುವುದು ಇನ್ನಷ್ಟೇ ವಿವರವಾಗಿ ತಿಳಿದುಬರಬೇಕಿದೆ.

57 ವರ್ಷದ ವ್ಯಕ್ತಿ ಆರ್ಥಿಕವಾಗಿ ಸ್ಥಿತಿವಂತ, ತನ್ನ ಸಮಾಜದ ಗಣ್ಯರ ಸಾಲಿನಲ್ಲಿ ಗುರುತಿಸಿಕೊಂಡಿರುವ ಗೃಹಸ್ಥ. ಮೂಲತಃ ಅರವಿಂದ ನಗರ ಕಡೆಯನು. 20-25 ವರ್ಷದಿಂದ ಶಾಂತಿ ನಗರದ ಸ್ವಂತ ಮನೆಯಲ್ಲಿ ಪರಿವಾರದೊಂದಿಗೆ ನೆಲೆಸಿದ್ದಾನೆ. ಸ್ಥಳೀಯ ಕೆಲವು ಮೂಲಗಳ ಪ್ರಕಾರ ಲಾಕ್​ಡೌನ್ ಘೊಷಣೆಯಾದ ಮೇಲೆ ಆತ ಹೊರ ಊರಿಗೆ ಹೋಗಿ ಬಂದಿರುವ ಸಾಧ್ಯತೆ ಕಡಿಮೆ.

ಸಾಮಾನ್ಯವಾಗಿ ನಿತ್ಯ ಬೆಳಗ್ಗೆ ಒಂದರ್ಧ ಗಂಟೆಯಾದರೂ ವಾಯು ವಿಹಾರಕ್ಕೆ ಹೋಗಿ ಬರುತ್ತಿದ್ದ. ಕೆಲವೊಮ್ಮೆ ಒಬ್ಬನೇ ಹೋಗುತ್ತಿದ್ದ. ಪರಿಚಿತರು ಅಚಾನಕ್ಕಾಗಿ ಸಿಕ್ಕಾಗ ಲೋಕಾಭಿರಾಮ ಮಾತಾಡುತ್ತ ಜತೆಗೆ ಹೋಗುತ್ತಿದ್ದ. ಲಾಕ್​ಡೌನ್ ಆದೇಶವನ್ನು ಗೌರವಿಸಿ ವ್ಯಕ್ತಿಯು ಸಾಕಷ್ಟು ಕಾಲ ಮನೆಯಲ್ಲೇ ಇದ್ದನಾದರೂ, ಆಗಾಗ ಕೆಲಸದ ಮೇಲೆ ಮಾರುಕಟ್ಟೆ ಕಡೆ ಹೋಗುತ್ತಿದ್ದನು ಎಂದು ತಿಳಿದುಬಂದಿದೆ.

ಬಾಡೂಟ ಪ್ರಿಯ:

ಶುಕ್ರವಾರ ಪತ್ತೆಯಾದ ಕರೊನಾ ಸೋಂಕಿತ ವ್ಯಕ್ತಿ ಬಾಡೂಟ ಪ್ರಿಯ ಎಂದು ತಿಳಿದುಬಂದಿದೆ. ವಾರಕ್ಕೊಂದೆರಡು ದಿನವಾದರೂ ಮಾಂಸದ ಅಡುಗೆ ಮಾಡಿಸುವುದು, ಬಂಧು-ಮಿತ್ರರನ್ನು ಊಟಕ್ಕೆ ಕರೆಯುವುದು ಆತನ ಪದ್ಧತಿ. ಲಾಕ್​ಡೌನ್ ಅವಧಿಯಲ್ಲಿ ಆತನ ನಿವಾಸದಲ್ಲಿ ನಾಲ್ಕೈದು ಸಲ ಆಪ್ತ ವರ್ಗದವರು ಸೇರಿ ಸಣ್ಣ ಪಾರ್ಟಿ ಮಾಡಿರುವ ಶಂಕೆಯಿದೆ.

ಭರ್ಜರಿ ಊಟಕ್ಕಾಗಿ ಮಾಂಸ ತರಲು ಈ 57 ವರ್ಷದ ವ್ಯಕ್ತಿಯೇ ಹೊರಗಡೆ ಹೋಗುವುದು ವಾಡಿಕೆ. ಹಾಗೆ ಆತ ಮಾಂಸಕ್ಕಾಗಿ ತೊರವಿಹಕ್ಕಲ, ಕರಾಡಿ ಓಣಿ ಪ್ರದೇಶದ ಅಂಗಡಿಗೆ ಹೋಗಿದ್ದನೆ ಎನ್ನುವ ಪ್ರಶ್ನೆ ಎದ್ದಿದೆ.

ಕಿಟ್ ವಿತರಿಸಿದ್ದನೆ?

ಶಾಂತಿನಗರ ಪ್ರದೇಶದ ಸೋಂಕಿತ ಆರ್ಥಿಕವಾಗಿ ಸ್ಥಿತಿವಂತನಾಗಿದ್ದು, ಸ್ವಭಾವತಃ ಸ್ವಲ್ಪ ಉದಾರಿಯೂ ಹೌದು. ಹೀಗಾಗಿ, ಸಾರ್ವಜನಿಕ ಬದುಕು ಸ್ತಬ್ಧವಾಗಿರಬೇಕೆಂಬ ಆದೇಶ ಜಾರಿಯಿಂದ ಸಂಕಷ್ಟದಲ್ಲಿ ಸಿಲುಕಿರುವ ತಮ್ಮ ಸಮಾಜದ ಬಡವರಿಗೆ ಆಹಾರ ಧಾನ್ಯದ ಕಿಟ್ ವಿತರಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ಆತ ಎಲ್ಲೆಲ್ಲಿ ಯಾರ್ಯಾರಿಗೆ ನೆರವು ನೀಡಿದ್ದಾನೆ, ಯಾವಾಗ ಜನರನ್ನು ಭೇಟಿಯಾಗಿದ್ದಾನೆ, ಆಗೆಲ್ಲ ಮಾಸ್ಕ್ ಧರಿಸಿದ್ದನೆ ಎಂಬ ಕುರಿತು ಸಹ ಆರೋಗ್ಯ ಇಲಾಖೆಯವರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಸೋಂಕಿತನು ತಮ್ಮ ಸಮಾಜದ ವಿವಿಧ ರಾಜಕೀಯ ವ್ಯಕ್ತಿಗಳು ಹಾಗೂ ಗಣ್ಯರನ್ನೂ ಸಾಂರ್ದಭಿಕವಾಗಿ ಭೇಟಿಯಾಗಿರುವ ಸಾಧ್ಯತೆ ಇದೆ. ಹೀಗಾಗಿ, ಪ್ರವಾಸ ವಿವರವು ಹೊರ ಊರುಗಳನ್ನು ಒಳಗೊಂಡಿಲ್ಲದಿದ್ದರೂ ಆತನ ಸಂಪರ್ಕವು ನೂರಾರು ಜನರನ್ನು ಕ್ವಾರಂಟೈನ್​ಗೆ ಒಳಪಡಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net