ಹುಬ್ಬಳ್ಳಿಯಲ್ಲಿ ಮತ್ತೆ ಆಪರೇಷನ್ ಫುಟ್​ಪಾತ್

h14-Encrochment 1
Published on

ಹುಬ್ಬಳ್ಳಿ: ಭಾನುವಾರ ನಗರದಲ್ಲಿ ಮತ್ತೆ ಆಪರೇಷನ್ ಫುಟ್​ಪಾತ್ ನಡೆಯಿತು. ಸ್ವತಃ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಂಜೆ ಏಕಾಏಕಿ ಕಾರ್ಯಾಚರಣೆ ಕೈಗೊಂಡ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ತಂಡ ಯಾರ ಪ್ರತಿರೋಧವನ್ನು ಲೆಕ್ಕಿಸದೇ ಫುಟ್​ಪಾತ್ ಮೇಲಿದ್ದ ಗೂಡಂಗಡಿ, ತಳ್ಳುಗಾಡಿ ಮುಂತಾದವುಗಳನ್ನು ವಶಕ್ಕೆ ತೆಗೆದುಕೊಂಡು ಬೇರೆಡೆ ಸಾಗಿಸಿದರು. ಅನಧಿಕೃತವಾಗಿ ಮುಂಚಾಚಿದ್ದ ಅಂಗಡಿಗಳ ಛಾವಣಿ ಭಾಗವನ್ನು ಜೆಸಿಬಿ ಬಳಸಿ ಕಿತ್ತು ಹಾಕಿದ್ದು ವಿಶೇಷವಾಗಿತ್ತು.

ಜಿಲ್ಲಾಧಿಕಾರಿ ನಿತೇಶ ಪಾಟೀಲ ನೇತೃತ್ವದಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತ, ದಾಜಿಬಾನಪೇಟೆ, ಬೆಳಗಾವಿ ಗಲ್ಲಿ, ಕಲಾದಗಿ ಓಣಿ, ದುರ್ಗದಬೈಲ್, ಇನ್ನಿತರ ಕಡೆ ತೆರವು ಕಾರ್ಯಾಚರಣೆ ನಡೆಯಿತು. 35ಕ್ಕೂ ಹೆಚ್ಚು ಅಂಗಡಿಗಳನ್ನು ತೆರವು ಗೊಳಿಸಲಾಗಿದೆ. ಇದೇ ರಸ್ತೆಯ ಇಕ್ಕೆಲಗಳಲ್ಲಿ ಮಾ.4 ಹಾಗೂ 5 ರಂದು ತೆರವು ಕಾರ್ಯಾಚರಣೆ ನಡೆಸಿ ಗೂಡಂಗಡಿಗಳ ಮಾಲೀಕರಿಗೆ ಬಿಸಿ ಮುಟ್ಟಿಸಲಾಗಿತ್ತು. ಆದರೂ, ಮತ್ತೆ ಅದೇ ಸ್ಥಳದಲ್ಲಿ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿದ್ದರು.

ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕಾರ್ಯಾಚರಣೆ ಆರಂಭಿಸಿಸುವ ಮೊದಲು ಅಧಿಕಾರಿಗಳು ಅಂಗಡಿಗಳನ್ನು ತೆರವುಗೊಳಿಸಲು ವ್ಯಾಪಾರಿಗಳಿಗೆ ಸೂಚನೆ ನೀಡಿದರು. ಕೆಲವರು ಇದಕ್ಕೆ ಸ್ಪಂದಿಸದಿದ್ದಾಗ ಡಬ್ಬಿ ಅಂಗಡಿಗಳನ್ನು ಎತ್ತಿಕೊಂಡು ಸಾಗಿಸಿದರು. ರಸ್ತೆ ಹಾಗೂ ಫುಟ್​ಪಾತ್ ಮೇಲೆ ಇರಿಸಿದ್ದ ವಸ್ತುಗಳನ್ನು ವಶಪಡಿಸಿಕೊಂಡರು. ಆಹಾರ ಪದಾರ್ಥ, ತಿನಿಸುಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಿದರು. ಅಂಗಡಿಗಳ ಕಟ್ಟಡ ಹೊರತುಪಡಿಸಿ ಮುಂದೆ ಬಂದಿದ್ದ ಛಾವಣಿಗಳ ಭಾಗವನ್ನು ಜೆಸಿಬಿ ಬಳಸಿ ತೆರವುಗೊಳಿಸಿದರು.

‘ಭಾನುವಾರ ಸಂಜೆ ಜೋರು ವ್ಯಾಪಾರ ನಡೆಯುತ್ತಿದ್ದ ವೇಳೆ ಏಕಾಏಕಿಯಾಗಿ ಕಾರ್ಯಾಚರಣೆ ನಡೆಸಲಾಗಿದೆ. ನಮಗೆ ಮುಂಚಿತವಾಗಿ ತಿಳಿಸಿಲ್ಲ’ ಎಂದು ಕೆಲವೆಡೆ ಅಂಗಡಿಕಾರರು ಪ್ರತಿರೋಧ ವ್ಯಕ್ತಪಡಿಸಿದರು. ಇನ್ನು ಕೆಲವರು ತಳ್ಳು ಗಾಡಿಗಳನ್ನು ಬೇರೆಡೆಗೆ ತೆಗೆದುಕೊಂಡು ಹೋದರು.

ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಡಿಸಿಪಿ ರಾಮರಾಜನ್, ಉಪ ವಿಭಾಗಾಧಿಕಾರಿ ಬಿ. ಗೋಪಾಲಕೃಷ್ಣ, ತಹಸೀಲ್ದಾರ್ ಶಶಿಧರ ಮಾಡ್ಯಾಳ, ಪಾಲಿಕೆ ಸಹಾಯಕ ಆಯುಕ್ತ ಎಸ್.ಸಿ. ಬೇವೂರ ಇದ್ದರು.

ದೋಸೆ ವ್ಯಾಪಾರಿ ಪೊಲೀಸ್ ವಶಕ್ಕೆ: ಚಾಟ್ ಸ್ಟ್ರೀಟ್ ಎಂದೇ ಹೆಸರಾದ ದುರ್ಗದಬೈಲ್ ಬಳಿಯ ಕಲಾದಗಿ ಓಣಿಯಲ್ಲಿ ಕಾರ್ಯಾಚರಣೆ ವೇಳೆ ದೋಸೆ ವ್ಯಾಪಾರಿ ಒಬ್ಬರು ಪ್ರತಿರೋಧವೊಡ್ಡಿದರು. ತಕ್ಷಣವೇ ಮಧ್ಯ ಪ್ರವೇಶಿಸಿದ ಪೊಲೀಸರು ಅವರನ್ನು ತಮ್ಮ ವಶಕ್ಕೆ ಪಡೆದರು.

ನೆನಪಿಗೆ ಬಂದ ಮಣಿವಣ್ಣನ್ ಕ್ರಮ: ಕಳೆದ ಮಾರ್ಚ್ 5ರಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ, ಪೊಲೀಸ್ ಆಯುಕ್ತ ಲಾಭೂರಾಮ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಅವರು ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಸಂಚರಿಸಿ ಫುಟ್​ಪಾತ್ ತೆರವುಗೊಳಿಸಲು ಎಚ್ಚರಿಕೆ ನೀಡಿದ್ದರು. ದುರ್ಗದಬೈಲ್ ಬಳಿಯ ರಸ್ತೆಯಲ್ಲಿ ತಿಂಡಿ ತಯಾರಿಸಿ ಮಾರುವ ತಳ್ಳುಗಾಡಿಗಳನ್ನು ತೆರವು ಮಾಡಿಸಿದ್ದರು. ಭಾನುವಾರ ಮತ್ತೆ ತೆರವು ಕಾರ್ಯಾಚರಣೆ ಕೈಗೊಂಡರು. ಈ ಎಲ್ಲ ಕ್ರಮಗಳು ಹಿಂದೆ 2005ರಲ್ಲಿ ಅಂದಿನ ಪಾಲಿಕೆ ಆಯುಕ್ತ ಪಿ. ಮಣಿವಣ್ಣನ್ ಅವರು ಕೈಗೊಂಡಿದ್ದ ಆಪರೇಷನ್ ಫುಟ್​ಪಾತ್ ಅನ್ನು ಸಾರ್ವಜನಿಕರ ನೆನಪಿಗೆ ತಂದವು.

ಮುಂದುವರಿಯಲಿದೆ…: ಕಾರ್ಯಾಚರಣೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಒತ್ತುವರಿ ತೆರವು ಕಾರ್ಯಾಚರಣೆ ಇಂದಿಗೆ ಮುಗಿಯುವುದಿಲ್ಲ. ಪ್ರತಿ ದಿನ ನಡೆಸಲಾಗುವುದು. ರಸ್ತೆಗಳು ಸಾಕಷ್ಟು ಅಗಲವಾಗಿದ್ದರೂ ವ್ಯಾಪಾರಿಗಳು ರಸ್ತೆ ಹಾಗೂ ಫುಟ್ ಪಾತ್ ಒತ್ತುವರಿ ಮಾಡಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸಾರ್ವಜನಿಕರ ಮನವಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ ಎಂದರು. ರಸ್ತೆ ಬದಿ ವ್ಯಾಪಾರಿಗಳಿಗಿಂತ ಮಳಿಗೆ ಹೊಂದಿರುವ ವ್ಯಾಪಾರಿಗಳು ಫುಟ್​ಪಾತ್​ಗಳನ್ನು ಅತಿಕ್ರಮಿಸಿದ್ದಾರೆ. ಅಂಗಡಿಯನ್ನು ಗೋದಾಮು ರೀತಿ ಬಳಸಿ ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಇಂತಹ ವ್ಯಾಪಾರಿಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಾಚರಣೆ ನಡೆಸಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ರ್ಪಾಂಗ್ ಸಲುವಾಗಿ 94 ಸ್ಥಳಗಳನ್ನು ಗುರುತಿಸಲಾಗಿದೆ. 54 ಕಡೆ ಬೀದಿ ಬದಿ ವ್ಯಾಪಾರ ಸ್ಥಳಗಳನ್ನು ಗುರುತಿಸಲಾಗಿದೆ. ಸದ್ಯದಲ್ಲೇ ಈ ಕುರಿತು ಆದೇಶ ಹೊರಡಿಸಲಾಗುವುದು. ಕೊಪ್ಪಿಕರ್ ರಸ್ತೆ ಹಾಗೂ ದಾಜಿಬಾನ ಪೇಟೆ ರಸ್ತೆ 18 ಮೀಟರ್ ಅಗಲವಿದೆ. ನಕ್ಷೆಯ ಪ್ರಕಾರ ರಸ್ತೆಯನ್ನು ಅಳೆದು ಒತ್ತುವರಿಯಾಗಿದ್ದರೆ ತೆರವುಗೊಳಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net