ಹುಬ್ಬಳ್ಳಿಯಲ್ಲಿ ಭಾರತ - ನ್ಯೂಜಿಲೆಂಡ್ ಎ ಹಣಾಹಣಿ

h7-Cricket 2
Published on

ಹುಬ್ಬಳ್ಳಿ : ಸುಮಾರು 3 ವರ್ಷಗಳ ಬಳಿಕ ಹುಬ್ಬಳ್ಳಿಯು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಅಣಿಯಾಗಿದೆ. ಇಂದಿನಿಂದ ಸೆ. 11ರವರೆಗೆ ಇಲ್ಲಿನ ರಾಜನಗರ ಕೆಎಸ್‌ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ) ಮೈದಾನದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಎ ತಂಡಗಳ ನಡುವಿನ 2ನೇ ಚತುರ್ದಿನ ಟೆಸ್ಟ್ ಪಂದ್ಯ ನಡೆಯಲಿದೆ. ಇದಕ್ಕಾಗಿ ಸಿದ್ಧತೆಗಳು ಪೂರ್ಣಗೊಂಡಿವೆ.
ಬೆಂಗಳೂರಿನಲ್ಲಿ ನಡೆದ ಮೊದಲ ಚತುರ್ದಿನ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು. ಭಾರತ ಎ ಪರ ಅಭಿಮನ್ಯು ಈಶ್ವರನ್, ರಜತ್ ಪಾಟಿದಾರ ಹಾಗೂ ತಿಲಕ್ ವರ್ಮಾ ಶತಕ ಸಿಡಿಸಿದ್ದರು. ವೇಗಿ ಮುಕೇಶ ಕುಮಾರ 5 ವಿಕೆಟ್ ಪಡೆದು ಮಿಂಚಿದ್ದರು. ನ್ಯೂಜಿಲೆಂಡ್ ಎ ಪರ ಜೋ ಕಾರ್ಟರ್ ಭರ್ಜರಿ ಶತಕ ಬಾರಿಸಿದ್ದರು. 3ನೇ ಹಾಗೂ ಸರಣಿಯ ಕೊನೆಯ ಚತುರ್ದಿನ ಪಂದ್ಯ ಬೆಂಗಳೂರಿನಲ್ಲಿಯೇ ಆಯೋಜನೆಯಾಗಿದೆ.
ಉಭಯ ತಂಡಗಳ ಅಟಗಾರರು ಸೋಮವಾರ ರಾತ್ರಿಯೇ ಹುಬ್ಬಳ್ಳಿಗೆ ಆಗಮಿಸಿದ್ದು, ಕಳೆದೆರಡು ದಿನ ಮೈದಾನದಲ್ಲಿ ಅಭ್ಯಾಸ ನಡೆಸಿದ್ದಾರೆ. ಅಭ್ಯಾಸಕ್ಕೆ ಮಳೆ ಅಡ್ಡಿಪಡಿಸಿಲ್ಲ ಎಂಬುದು ಸಮಧಾನದ ಸಂಗತಿ. ಪಂದ್ಯ ನೋಡಲು ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. 4 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ.
ಹುಬ್ಬಳ್ಳಿಯಲ್ಲಿ ಈ ಹಿಂದೆ 2019ರ ಮೇ ತಿಂಗಳಲ್ಲಿ ಭಾರತ-ಶ್ರೀಲಂಕಾ ಎ ತಂಡಗಳ ನಡುವೆ 1 ಚತುರ್ದಿನ ಪಂದ್ಯ ಹಾಗೂ 2 ಏಕದಿನ ಪಂದ್ಯಗಳು ನಡೆದಿದ್ದವು. ಇದಕ್ಕೂ ಮೊದಲು 2017ರಲ್ಲಿ ಭಾರತ-ಬಾಂಗ್ಲಾದೇಶ ಎ ಮಹಿಳಾ ತಂಡಗಳ ನಡುವೆ ಕ್ರಿಕೆಟ್ ಪಂದ್ಯಕ್ಕೆ ಹುಬ್ಬಳ್ಳಿ ಆತಿಥ್ಯ ವಹಿಸಿತ್ತು.
ಹುಬ್ಬಳ್ಳಿಯಲ್ಲಿ 2013ರಲ್ಲಿ ಭಾರತ- ವೆಸ್ಟ್ ಇಂಡೀಸ್ ಎ ತಂಡಗಳ ನಡುವೆ ಮೊದಲ ಬಾರಿ ಆಯೋಜನೆಯಾಗಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವು ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಆಗ ಖ್ಯಾತನಾಮ ಆಟಗಾರರಾದ ವಿರೇಂದ್ರ ಸೆಹ್ವಾಗ್, ಗೌತಮ ಗಂಭೀರ, ಜಹೀರ ಖಾನ್ ಆಡಿದ್ದರು. ಈಗ ಭಾರತ ಟೆಸ್ಟ್ ತಂಡದಲ್ಲಿರುವ ಚೇತೇಶ್ವರ ಪೂಜಾರ ಈ ಮೈದಾನದಲ್ಲಿ ಅಜೇಯ ತ್ರಿಶತಕ ಬಾರಿಸಿದ್ದು ಕ್ರಿಕೆಟ್ ಪ್ರೇಮಿಗಳ ನೆನಪಿನಲ್ಲಿ ಉಳಿದಿದೆ.
ಈ ಬಾರಿ ಋತುರಾಜ ಗಾಯಕವಾಡ, ರಾಹುಲ ಚಹರ್, ಕುಲದೀಪ ಯಾದವ, ಉಮ್ರಾನ್ ಮಲ್ಲಿಕ್ ಅವರಂಥ ಅಂತಾರಾಷ್ಟ್ರೀಯ ಅಟಗಾರರು ಭಾರತ ಎ ತಂಡದಲ್ಲಿ ಇದ್ದಾರೆ.
ಭಾರತ ಎ ತಂಡದ ಮುಖ್ಯ ಕೋಚ್ ವಿ.ವಿ.ಎಸ್. ಲಕ್ಷ್ಮಣ ಹಾಗೂ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯ ಹರ್ವಿಂದರ್ ಸಿಂಗ್ ಹುಬ್ಬಳ್ಳಿಗೆ ಆಗಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net