

ಹುಬ್ಬಳ್ಳಿ: ಇಲ್ಲಿಯ ದೇಶಪಾಂಡೆ ನಗರದ ಜಿಮಖಾನಾ ಮೈದಾನದಲ್ಲಿ ಕೇದಾರನಾಥದ ದಿವ್ಯ ದರ್ಶನಕ್ಕೆ ವೇದಿಕೆ ಸಜ್ಜುಗೊಂಡಿದೆ. ನೋಡಲು ಅಕ್ಷರಶಃ ಕೇದಾರದ ಶಿವಲಿಂಗ ಹಾಗೂ ವಾತಾವರಣವನ್ನು ನಿರ್ವಿುಸಲಾಗಿದ್ದು, ಅಂತಿಮ ಹಂತದ ಸಿದ್ಧತೆಗಳನ್ನು ಸಂಘಟಕರು ಶುಕ್ರವಾರ ಪರಿಶೀಲನೆ ಮಾಡಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನೇತೃತ್ವದ ಕ್ಷಮತಾ ಸೇವಾ ಸಂಸ್ಥೆ ವತಿಯಿಂದ ಮಹಾಶಿವರಾತ್ರಿ ಅಂಗವಾಗಿ ಫೆ. 18ರಂದು ಕೇದಾರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕೇದಾರ ಮಾದರಿಯಲ್ಲಿ ಗುಹೆ ಹಾಗೂ ದೇವಸ್ಥಾನ ನಿರ್ವಿುಸಲಾಗಿದ್ದು, ಇಲ್ಲಿ ಮಹಾಪೂಜೆ, ಶಿವನಾಮ ಸ್ಮರಣೆ, ಭಕ್ತಿ ಸಂಗೀತ, ಜಾಗರಣೆ ಕಾರ್ಯಕ್ರಮಗಳು ನಡೆಯಲಿವೆ.
ಸಕಲ ಸಿದ್ಧತೆ ಪರಿಶೀಲನೆ ಮಾಡಿದ ಕ್ಷಮತಾ ಸೇವಾ ಸಂಸ್ಥೆಯ ಗೋವಿಂದ ಜೋಶಿ ಅವರು, ಶನಿವಾರ ಬೆಳಗ್ಗೆ ವಿಶೇಷ ಪೂಜೆ ನಂತರ ಕೇದಾರ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗುವುದು. ಫಲಾಹಾರ ಮತ್ತು ಪ್ರಸಾದ ವಿತರಣೆ ಜರುಗಲಿದೆ. ನೇಪಾಳದಿಂದ ತರಿಸಿರುವ ಪಂಚಮುಖಿ ರುದ್ರಾಕ್ಷಿಗಳನ್ನು ಭಕ್ತರಿಗೆ ಉಚಿತವಾಗಿ ವಿತರಿಸಲಾಗುತ್ತದೆ ಎಂದರು.
ಸಂಜೆ 6.30ಕ್ಕೆ ಸಂಗೀತ ಸಭಾ ನಡೆಯಲಿದ್ದು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್, ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕರು, ಜನಪ್ರತಿನಿಧಿಗಳು ಪಾಲ್ಗೊಳ್ಳುವರು.
ಗಾಯಕರಾದ ಅನನ್ಯಭಟ್ಟ ಹಾಗೂ ನವೀನ ಸಜ್ಜು ಅವರಿಂದ ಸಂಗೀತ ಸಂಜೆ ನಡೆಯಲಿದೆ. ನೃತ್ಯ ಸಂಯೋಜಕರಾದ ಶುಭಂಕರ ಮತ್ತು ಅನಿಲ ನೇತೃತ್ವದ ವಿ ಡೈರೆಕ್ಟ್ ನೃತ್ಯ ತಂಡದಿಂದ ಶಿವ ತಾಂಡವ ನೃತ್ಯ ಏರ್ಪಡಿಸಲಾಗಿದೆ.
ಉಪಮೇಯರ್ ಉಮಾ ಮುಕುಂದ, ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ರೂಪಾ ಶೆಟ್ಟಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಮಹೇಂದ್ರ ಕೌತಾಳ, ರಂಗಾ ಬದ್ದಿ, ಶಿವಾನಂದ ಮುತ್ತಣ್ಣವರ, ಮುರಳೀಧರ ಮಳಗಿ, ಮಲ್ಲಿಕಾರ್ಜುನ ಪಾಟೀಲ ಇತರರು ಇದ್ದರು.