

ಶಿಗ್ಗಾಂವಿ: ಊಟ, ವಸತಿ ಇಲ್ಲದೆ ಅನಾರೋಗ್ಯಕ್ಕೀಡಾಗಿದ್ದ ನಿರ್ಗತಿಕ ವೃದ್ಧೆಯನ್ನು ವೃದ್ಧಾಪ್ಯ ಕೇಂದ್ರಕ್ಕೆ ಸೇರಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿ ಮಾನವೀಯತೆ ಮೆರೆದ ಘಟನೆ ಶನಿವಾರ ಸಂಜೆ ಹುಲಗೂರ ಪಟ್ಟಣದಲ್ಲಿ ನಡೆದಿದೆ.
ಹುಬ್ಬಳ್ಳಿ ತಾಲೂಕಿನ ಮಂಟೂರ ಗ್ರಾಮದ ಫಾತೀಮಾ(87) ಆನಾರೋಗ್ಯಕ್ಕೆ ಒಳಗಾಗಿದ್ದರು. ಸುಮಾರು ದಿನಗಳಿಂದ ಹುಲಗೂರ ದರ್ಗಾ ಮುಂದೆ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದಳು. ಆದರೆ, ಲಾಕ್ಡೌನ್ನಿಂದ ದರ್ಗಾ ಬಂದ್ ಮಾಡಿದ ಹಿನ್ನೆಲೆಯಲ್ಲಿ ಊಟ, ವಸತಿಯ ಸಮಸ್ಯೆಯಾಗಿದೆ. ದರ್ಗಾ ಹತ್ತಿರದ ಖಾದ್ರಿ ಮನೆತನದವರು ಅವಳಿಗೆ ಊಟ ನೀಡಿದ್ದಲ್ಲದೇ ಅವಳನ್ನು ಸ್ವಗ್ರಾಮಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ. ಆದರೆ, ಅವಳ ಸಂಬಂಧಿಕರು ಮನೆಗೆ ಸೇರಿಸಿಕೊಳ್ಳದ ಕಾರಣ ಮರಳಿ ದರ್ಗಾಕ್ಕೆ ತಂದು ಬಿಡಲಾಗಿತ್ತು.
ಸ್ಥಳೀಯ ವಕೀಲರೊಬ್ಬರು ಟ್ವಿಟರ್ ಮೂಲಕ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಮಾಹಿತಿ ನೀಡಿದ್ದರು. ಕೂಡಲೆ ಅವರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಪರಿಶೀಲಿಸುವಂತೆ ಸೂಚಿಸಿದ್ದರು. ಕೂಡಲೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ.ಎನ್. ಹೆಗಡೆ ಅವರು ಅಂಗನವಾಡಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಯ ಸಹಾಯದಿಂದ ವೃದ್ಧೆಯನ್ನು ಆರೋಗ್ಯ ತಪಾಸಣೆಗೆ ಒಳಪಡಿಸಿ ಶಿಗ್ಗಾಂವಿಯ ವೃದ್ಧಾಪ್ಯ ಕೇಂದ್ರಕ್ಕೆ ಸುರಕ್ಷಿತವಾಗಿ ಸೇರಿಸಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿಯೂ ಪ್ರಶಂಸೆಗೆ ಪಾತ್ರವಾಗಿದೆ.