ಹುಬ್ಬಳ್ಳಿಯ ಲಾಕ್​ಡೌನ್ ಚಿತ್ರಗಳಿಗೆ ಪ್ರಶಂಸೆ

h29-Kiran
Published on

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಪತ್ರಿಕಾ ಛಾಯಾಗ್ರಾಹಕರ ಸಂಘ ಬೆಂಗಳೂರಿನ ಚಿತ್ರಕಲಾ ಪರಿಷತ್​ನಲ್ಲಿ ಏರ್ಪಡಿಸಿದ್ದ ಕೋವಿಡ್ 19 ಛಾಯಾಚಿತ್ರ ಪ್ರದರ್ಶನದಲ್ಲಿ ಹುಬ್ಬಳ್ಳಿಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಕಿರಣ ಬಾಕಳೆ ಅವರ ಛಾಯಾಚಿತ್ರಗಳು ಪ್ರದರ್ಶನಗೊಂಡಿವೆ.

ಕಿರಣ ಬಾಕಳೆ ಅವರ ಪುತ್ರರಾದ ವಿನಾಯಕ ಹಾಗೂ ವಿಜಯ್ ಅವರು ತೆಗೆದಿರುವ ಛಾಯಾಚಿತ್ರಗಳೂ ಪ್ರದರ್ಶನಗೊಂಡವು.

ಕರೊನಾ ಸೋಂಕಿನಿಂದ ನಿಧನ ಹೊಂದಿದ ಕೇಂದ್ರ ಸಚಿವ ಸುರೇಶ ಅಂಗಡಿ ಅವರು ಕರೊನಾ ಸೇನಾನಿಗಳಿಗೆ ನಮಸ್ಕರಿಸುತ್ತಿರುವ ಛಾಯಾಚಿತ್ರ, ಕೂಲಿ ಕಾರ್ವಿುಕರ ಛಾಯಾಚಿತ್ರಗಳು, ನಗರದ ಚಿಟಗುಪ್ಪಿ ಆಸ್ಪತ್ರೆಯಲ್ಲಿ ಬಾಣಂತಿಯರು ಕರೊನಾ ಪರೀಕ್ಷೆ ಮಾಡಿಸಿಕೊಳ್ಳುತ್ತಿರುವುದು, ಲಾಕ್​ಡೌನ್ ಸಂದರ್ಭದಲ್ಲಿ ಅನವಶ್ಯಕವಾಗಿ ಹೊರಬಂದ ಸಾರ್ವಜನಿಕರಿಗೆ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿ ಪೊಲೀಸರು ಬಸ್ಕಿ ತೆಗೆಸುತ್ತಿರುವುದು, ರೈಲು ನಿಲ್ದಾಣದಲ್ಲಿ ಕೋವಿಡ್ ತಪಾಸಣೆ, ಮಹಿಳೆಯರು ಅಂತರ ಕಾಯ್ದುಕೊಂಡು ಆಹಾರದ ಪೊಟ್ಟಣ ತೆಗೆದುಕೊಳ್ಳಲು ನಿಂತಿರುವುದು ಸೇರಿದಂತೆ 8 ಛಾಯಾಚಿತ್ರಗಳು ಪ್ರದರ್ಶನಗೊಂಡಿವೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹಾಸ್ಯನಟ ಟೆನ್ನಿಸ್ ಕೃಷ್ಣ, ಪತ್ರಕರ್ತರಾದ ಶಿವಾನಂದ ತಗಡೂರು, ರವಿ ಹೆಗಡೆ ಮತ್ತಿತರರು ಛಾಯಾಚಿತ್ರಗಳನ್ನು ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net