ಹುಬ್ಬಳ್ಳಿಯ ಪಿ.ಸಿ. ಜಾಬಿನ ಕಾಲೇಜಿಗೆ ನ್ಯಾಕ್ ಎ++ ಮಾನ್ಯತೆ

h13-PC Jabin College
Published on

ಹುಬ್ಬಳ್ಳಿ: ನಗರದ ಕೆಎಲ್​ಇ ಸಂಸ್ಥೆಯ ಪಿ.ಸಿ. ಜಾಬಿನ ಸ್ವಾಯತ್ತ ವಿಜ್ಞಾನ ಕಾಲೇಜ್​ಗೆ ನ್ಯಾಕ್​ನಿಂದ ಎ++ ಶ್ರೇಣಿಯ ಮಾನ್ಯತೆ ದೊರೆತಿದೆ. ನ್ಯಾಕ್​ನ 5ನೇ ಆವೃತ್ತಿಯಲ್ಲಿ ಎ++ ಮಾನ್ಯತೆ ಗಳಿಸಿದ ದೇಶದ 2ನೇ ಹಾಗೂ ಸ್ವಾಯತ್ತ ವಿಭಾಗದಲ್ಲಿ ಮೊದಲ ಕಾಲೇಜ್ ಆಗಿದೆ ಎಂದು ಸಂಸ್ಥೆಯ ಹಿರಿಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, 1999ರಲ್ಲಿ ನ್ಯಾಕ್ (ಎನ್​ಎಎಸಿ-ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ) ಮೊದಲ ಆವೃತ್ತಿಯಲ್ಲಿ ಜಾಬಿನ ಕಾಲೇಜ್ 4 ಸ್ಟಾರ್ ಮಾನ್ಯತೆ ಪಡೆದಿತ್ತು. ಬಳಿಕ 2006ರಲ್ಲಿ ಬಿ++, 2012ರಲ್ಲಿ ಎ ಹಾಗೂ 2017ರಲ್ಲಿ ಎ ಶ್ರೇಣಿಯ ಮಾನ್ಯತೆ ಗಳಿಸಿದ್ದೇವು. ಇದೀಗ 3.54 ಸಿಜಿಪಿಎ ಗಳೊಂದಿಗೆ ಎ++ ಮಾನ್ಯತೆ ಪಡೆಯುವುದರೊಂದಿಗೆ ಉತ್ತಮ ಸಾಧನೆ ಮಾಡಿದ್ದೇವೆ ಎಂದರು.

ನಾರ್ಥ್ ಓರಿಸ್ಸಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಪ್ರದೀಪ ಚಾಂದ ನೇತೃತ್ವದಲ್ಲಿ, ಮಧ್ಯಪ್ರದೇಶ ಇಂದೋರದ ಇನ್​ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಡಾ. ಪ್ರದೋಶ ಬನಸಾಲ (ಮೆಂಬರ್ ಕೋ-ಆರ್ಡಿನೇಟರ್), ಜಮ್ಮು ಕಾಶ್ಮೀರದ ಶ್ರೀನಗರದ ಅಮರಸಿಂಗ್ ಕಾಲೇಜ್ ಪ್ರಾಚಾರ್ಯ ಡಾ. ಶೇಕ್ ಅಜೀಜ್ ಬಶೀರ (ಸದಸ್ಯ) ಅವರನ್ನೊಳಗೊಂಡ ತಂಡ ಜೂನ್ 15 ಮತ್ತು 16ರಂದು ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿತ್ತು. ವಿದ್ಯಾರ್ಥಿಗಳಿಗೆ ನೀಡಿರುವ ಸೌಲಭ್ಯ ಹಾಗೂ ಗುಣಮಟ್ಟದ ವಿಜ್ಞಾನ ಶಿಕ್ಷಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net