

ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ
ಛೋಟಾ ಬಾಂಬೆ ಅಭಿದಾನದ ಹುಬ್ಬಳ್ಳಿಯಲ್ಲೂ ಮಾದಕ ದ್ರವ್ಯದ ಘಾಟು ಜೋರಾಗೇ ಇದ್ದು, ಸ್ಯಾಂಡಲ್ವುಡ್ಗೆ ಮೆತ್ತಿಕೊಂಡಿರುವ ಮಾದಕ ದ್ರವ್ಯದ ಗಂಟು ಬಿಡಿಸಿರುವ ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳ (ಎನ್ಸಿಬಿ) ಇಲ್ಲಿಗೂ ಬರುವುದೇ ಎಂಬ ಕುತೂಹಲ ಮೂಡಿದೆ.
ಬೆಂಗಳೂರು ನಂತರದ ಎರಡನೇ ದೊಡ್ಡ ಮಹಾನಗರ ಹುಬ್ಬಳ್ಳಿ- ಧಾರವಾಡವನ್ನೇ ಟಾರ್ಗೆಟ್ ಮಾಡಿಕೊಂಡಿರುವ ಡ್ರಗ್ ಪೆಡ್ಲರ್ಗಳಿದ್ದಾರೆ. ಹಿಂದಿನ ಕಾಲದಿಂದಲೂ ವಾಣಿಜ್ಯ ನಗರಿಯ ಬೇರೆ ಬೇರೆ ಗಲ್ಲಿಗಳಲ್ಲಿ ಗಾಂಜಾ ಮಾರಾಟ ನಡೆಯುತ್ತ ಬಂದಿದೆ. ಗೋವಾ, ರಾಜಸ್ತಾನ, ಓಡಿಶಾ ಕಡೆಯಿಂದ ಇಲ್ಲಿಗೆ ಅಫೀಮು, ಚರಸ್ ಮತ್ತಿತರ ಡ್ರಗ್ಸ್ ಪೂರೈಕೆಯಾಗುತ್ತದೆ ಎಂದು ಕೇಳಿ ಬರುತ್ತದೆ. ಪೊಲೀಸ್ ದಾಳಿ ನಡೆದಾಗ ಕೆಲಕಾಲ ಸುಮ್ಮನಾಗುವ ದಂಧೆ, ಎಲ್ಲ ತಣ್ಣಗಾದ ಬಳಿಕ ಮತ್ತೆ ಶುರುವಾಗುತ್ತದೆ.
ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಮತ್ತಿತರ ಪ್ರದೇಶಗಳಿಂದ ರೈಲು, ಸರಕು ವಾಹನಗಳ ಮೂಲಕ ಹುಬ್ಬಳ್ಳಿಗೆ ಬರುತ್ತದೆ. ಕರಾವಳಿ ಪ್ರದೇಶಗಳಾದ ಗೋವಾ, ಗೋಕರ್ಣ; ದಾಂಡೇಲಿ, ಹಳಿಯಾಳ ಮತ್ತಿತರ ಪ್ರದೇಶಗಳಿಗೆ ಹುಬ್ಬಳ್ಳಿಯಿಂದ ಸರಬರಾಜಾಗುತ್ತದೆ.
ಪತ್ನಿ ಕೊಲೆ, ಗಾಂಜಾ ಮಾರಾಟ ಮತ್ತಿತರ ಹಲವು ಪ್ರಕರಣಗಳಲ್ಲಿ ಶಿಕ್ಷೆಗೀಡಾಗಿ ಕಲಬುರಗಿ ಜೈಲಿನಲ್ಲಿರುವ ಸೈಂಟಿಸ್ಟ್ ಮಂಜ್ಯಾ ಗಾಂಜಾ ದಂಧೆಯ ರೂವಾರಿಗಳಲ್ಲೊಬ್ಬ ಎನ್ನುತ್ತವೆ ಮೂಲಗಳು. ಈತ ಜೈಲಿನಲ್ಲಿ ಆಂಧ್ರ ಸಂಪರ್ಕವಿರುವ ಕೆಲವು ಕೈದಿಗಳ ಸ್ನೇಹ ಸಂಪಾದಿಸಿ, ಅವರ ಮೂಲಕ ಆಂಧ್ರ ಪ್ರದೇಶದ ಕೆಲ ಭಾಗದಿಂದ ಗಾಂಜಾ ಖರೀದಿಸಿ ಹುಬ್ಬಳ್ಳಿಗೆ ತಲುಪಿಸುತ್ತಾನೆ, ನಂತರ ಧಾರವಾಡ ಮತ್ತು ಹುಬ್ಬಳ್ಳಿಯ ಕೆಲವು ಹಳೇ ಪಾತಕಿಗಳು ಅದನ್ನು ಗಿರಾಕಿಗಳಿಗೆ ತಲುಪಿಸುತ್ತಾರೆ ಎಂದು ತಿಳಿದುಬಂದಿದೆ.
ಹು-ಧಾ ಆರ್ಥಿಕ ಮತ್ತು ಮಾದಕ ದ್ರವ್ಯಗಳ ಠಾಣೆ ಪೊಲೀಸರು ಸ್ಥಳೀಯ ಠಾಣೆ ಪೊಲೀಸರ ಸಹಾಯದಿಂದ ಕಳೆದ ವರ್ಷ ಆಂಧ್ರ ಮೂಲದ ನಾಲ್ವರನ್ನು ಬಂಧಿಸಿ 22 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದರು. ಇದೀಗ ದಂಧೆಕೋರರು ಮತ್ತೆ ದಂಧೆ ಶುರುಮಾಡಿದ್ದು, ಪೊಲೀಸರು ಇವರನ್ನು ಬೇರು ಸಮೇತ ಮಟ್ಟ ಹಾಕುವ ಮೂಲಕ ಹಾಳಾಗುತ್ತಿರುವ ಯುವಜನತೆಯನ್ನು ರಕ್ಷಿಸಬೇಕು ಎಂಬ ಅಭಿಪ್ರಾಯ ಸಾಮಾನ್ಯವಾಗಿದೆ. ಈ ಬಗ್ಗೆ ಪ್ರತಿಕ್ರಿಯೆಗೆ ಪೊಲೀಸ್ ಆಯುಕ್ತ ಆರ್. ದಿಲೀಪ ಅವರು (ಸಭೆಯಲ್ಲಿದ್ದ ಪ್ರಯುಕ್ತ) ಲಭ್ಯವಾಗಲಿಲ್ಲ.
ಕೊಲೆ ಹಿಂದೆ ಗಾಂಜಾ ವಾಸನೆ: ಮೊನ್ನೆಯಷ್ಟೇ ಗೋಪನಕೊಪ್ಪದಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಜೋಡಿ ಕೊಲೆ ಹಿಂದೆ ಗಾಂಜಾ ವಾಸನೆ ಕೇಳಿ ಬರುತ್ತಿದೆ. ಇತ್ತೀಚೆಗೆ ದೇಶಪಾಂಡೆ ನಗರದಲ್ಲಿ ಭವಾನಿ ನಗರದ ಯುವಕನನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದರು. ಕೊಲೆ ಮಾಡಿದ ಮೀಸೆ ಚಿಗುರದ ಯುವಕರೂ ಗಾಂಜಾ ಸೇವನೆ ಮಾಡುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ. ಹೀಗೆ ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡುವಷ್ಟು ಮಟ್ಟಿಗೆ ಯುವಕರು ಬಾಲ ಬಿಚ್ಚುವುದಕ್ಕೆ ಗಾಂಜಾದಂಥ ಮಾದಕ ದ್ರವ್ಯಗಳ ನಶೆ ಅಥವಾ ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ಹುಟ್ಟಿಕೊಂಡ ಜಗಳಗಳು ಕಾರಣವಾಗಿರುತ್ತದೆ ಎಂದು ಪೊಲೀಸರೂ ಹೇಳುತ್ತಾರೆ.
ಸ್ಥಳೀಯ ಗಾಂಜಾಕ್ಕಿಲ್ಲ ಬೆಲೆ: ಮಲೆನಾಡ ಸೆರಗು ಮುಂಡಗೋಡ, ಯಲ್ಲಾಪುರ, ಕಲಘಟಗಿ ಭಾಗದ ಕೆಲವೆಡೆ ಅಲ್ಲಲ್ಲಿ ಗಾಂಜಾ ಬೆಳೆಯಲಾಗುತ್ತದೆ. ಆದರೆ, ಆ ಗಾಂಜಾಕ್ಕೆ ಹೆಚ್ಚು ಬೆಲೆಯಿಲ್ಲ. ಆಂಧ್ರದಿಂದ ಬರುವ ಕುಳಿ ಗಾಂಜಾಕ್ಕೆ ಹೆಚ್ಚು ಬೆಲೆಯುಂಟು. ವೃತ್ತಿಪರ ಗಾಂಜಾ ಬೆಳೆಗಾರರು ನಶೆ ಏರುವ ಗಾಂಜಾ ಬೆಳೆಯುತ್ತಾರೆ. ಒಮ್ಮೆ ಬೆಳೆದ ಗಿಡದ ಎಲೆಗಳನ್ನು ಕತ್ತರಿಸಿ ಮತ್ತೆ ಅದರಲ್ಲಿ ಬೆಳೆ ತೆಗೆಯುತ್ತಾರೆ. ಆ ಗಾಂಜಾಕ್ಕೆ ಹೆಚ್ಚು ಬೆಲೆ. ಸ್ಥಳೀಯವಾಗಿ ಬೆಳೆಯುವ ಗಾಂಜಾಕ್ಕೆ ನಶೆ ಕಡಿಮೆ ಎನ್ನುತ್ತವೆ ಮೂಲಗಳು.
ವಿಐಪಿ, ವಿದ್ಯಾರ್ಥಿಗಳೇ ಟಾರ್ಗೆಟ್
ಹುಬ್ಬಳ್ಳಿ ಗಾಂಜಾ ಕುಳಗಳಿಗೆ ನಗರದ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಪ್ರತಿಷ್ಠಿತ ಉದ್ಯಮಿಗಳು, ಶ್ರೀಮಂತರ ಮಕ್ಕಳೇ ಟಾರ್ಗೆಟ್. ಖಾಯಂ ಗಿರಾಕಿಗಳ ಮೂಲಕ ಸದ್ದಿಲ್ಲದೇ ದಂಧೆ ನಡೆಸುವುದು ಇವರಿಗೆ ಕರಗತ. ಒಮ್ಮೆ ಗಾಂಜಾ ಚಟಕ್ಕೆ ದಾಸರಾದವರು ಶಾಶ್ವತವಾಗಿ ದಂಧೆಕೋರರ ಹಿಂದೆ ಬೀಳುತ್ತಾರೆ. ಗಾಂಜಾ ಸೇವನೆಗಾಗಿ ಎಷ್ಟು ಹಣ ಬೇಕಾದರೂ ಬಿಚ್ಚುತ್ತಾರೆ, ಏನು ಬೇಕಾದರೂ ಮಾಡುತ್ತಾರೆ ಎಂಬ ದೌರ್ಬಲ್ಯವೇ ಇವರ ಬಂಡವಾಳವಾಗಿದೆ.