

ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯ ಅಬ್ಬರ ನಗರದ ಹೊರ ವಲಯಗಳಲ್ಲಿ ಜೋರಾಗಿದೆ. ಮನೆ ಮನೆಗೆ ತೆರಳಿ ಪ್ರಚಾರ ನಡೆಸಲು ಅಭ್ಯರ್ಥಿಗಳು ಪೈಪೋಟಿಗೆ ಬಿದ್ದಿದ್ದಾರೆ.
ಪಾಲಿಕೆಯ ವಾರ್ಡ್ಗಳ ಕ್ರಮ ಸಂಖ್ಯೆಯಲ್ಲಿ ಕೊನೆಯಲ್ಲಿರುವ 76ರಿಂದ 82ರವರೆಗಿನ ವಾರ್ಡ್ ಗಳ ವ್ಯಾಪ್ತಿಯಲ್ಲಿ ಬರುವ ಬಿಡನಾಳ, ಎಸ್.ಎಂ. ಕೃಷ್ಣಾನಗರ, ಸೋನಿಯಾ ಗಾಂಧಿ ನಗರ, ಗಬ್ಬೂರು, ಹೊಸ ಗಬ್ಬೂರು, ನೇಕಾರನಗರ- ಇವು ಹೊರ ವಲಯಗಳು. ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕುರಿತು ಸಾಕಷ್ಟು ಕುರುಹುಗಳು ಇಲ್ಲಿ ಗೋಚರಿಸುತ್ತವೆ.
ಎಲ್ಲ 7 ವಾರ್ಡ್ಗಳು ಮಹಿಳೆಯರಿಗೆ ಮೀಸಲಾಗಿರುವುದರಿಂದ ಕಾಂಗ್ರೆಸ್-ಬಿಜೆಪಿ ಪಕ್ಷಗಳು ಸಾಕಷ್ಟು ಯೋಚಿಸಿ ತಡವಾಗಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿವೆ. ಬಹುತೇಕ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಸ್ಪರ್ಧೆ ಎಂಬುದು ಹೊಸ ಅನುಭವ. ಹಾಗಾಗಿಯೇ ಈ ವಾರ್ಡ್ಗಳಲ್ಲಿ ಸಾಕಷ್ಟು ಜೋರಾಗಿಯೇ ಪ್ರಚಾರ ನಡೆದಿದೆ. ಗುಂಪು ಗುಂಪಾಗಿ ಮತಯಾಚಿಸುವುದು, ಚರ್ಚೆ ನಡೆಸುವುದು ಸಾಮಾನ್ಯವಾಗಿ ಕಂಡುಬರುತ್ತಿದೆ. ಒಂದು ಪಕ್ಷದ ಅಭ್ಯರ್ಥಿ, ಬೆಂಬಲಿಗರು ಹಾಗೂ ಕಾರ್ಯಕರ್ತರ ದಂಡು ಬಂದು ಹೋದ ಕೆಲವೇ ನಿಮಿಷಗಳಲ್ಲಿ ಇನ್ನೊಂದು ದಂಡು ಹಾಜರು.
ಸೋನಿಯಾ ಗಾಂಧಿ ನಗರ, ಎಸ್.ಎಂ. ಕೃಷ್ಣಾನಗರ, ನೇಕಾರನಗರ, ಬಿಡನಾಳದಲ್ಲಿ 2 ಸಾವಿರಕ್ಕೂ ಅಧಿಕ ಆಶ್ರಯ ಮನೆಗಳಿವೆ. ಪಾಲಿಕೆ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳ ಟಾರ್ಗೆಟ್ ಆಶ್ರಯ ಬಡಾವಣೆಗಳ ನಿವಾಸಿಗಳೇ ಆಗಿದ್ದಾರೆ. ಈ ಬಡಾವಣೆಗಳ ನಿವಾಸಿಗಳ ದೂರುಗಳು, ಬೇಡಿಕೆಗಳು ಸಾಕಷ್ಟಿವೆ. ಕುಡಿಯುವ ನೀರಿನ ಸೌಲಭ್ಯ, ಪಕ್ಕಾ ರಸ್ತೆ, ಗಟಾರ್, ಬೀದಿ ದೀಪಗಳ ನಿರ್ವಹಣೆ ಎಲ್ಲವೂ ಸಾಕಷ್ಟು ಸುಧಾರಣೆ ಕಾಣಬೇಕಾಗಿದೆ.
ಸೋನಿಯಾ ಗಾಂಧಿ ನಗರದಲ್ಲಿ ಗಟಾರದಲ್ಲಿನ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲ. ಗಟಾರದಲ್ಲಿಯೇ ನೀರು ನಿಂತು ರೋಗಗಳು ಹರಡಲು ಕಾರಣವಾಗುತ್ತಿದೆ. ಮಳೆಗಾಲದಲ್ಲಿ ಪರಿಸ್ಥಿತಿ ಅಯೋಮಯ. ಬಿಡನಾಳದಿಂದ ಕುಂದಗೋಳಕ್ಕೆ ಹೋಗುವ ರಸ್ತೆ ಬದಿಯಲ್ಲಿ ಎಷ್ಟೋ ದಿನಗಳಿಂದ ಚೆಲ್ಲಿರುವ ತ್ಯಾಜ್ಯವು ಡಂಪಿಂಗ್ ಯಾರ್ಡನ್ನು ನೆನಪಿಸುತ್ತದೆ.
ಇಸ್ಲಾಂಪುರ ಮುಖ್ಯ ರಸ್ತೆ, ಟಿಪ್ಪುನಗರ ಮುಖ್ಯ ರಸ್ತೆ, ಜವಳಿ ಪ್ಲಾಟ್, ಇಂದಿರಾ ನಗರ ಹೂಗಾರ ಪ್ಲಾಟ್, ಗೌಸಿಯಾನಗರ, ರಣದಮ್ಮ ಕಾಲನಿ, ಈಶ್ವರನಗರ, ಛಬ್ಬಿ ಪ್ಲಾಟ್, ಆದರ್ಶ ಪಾರ್ಕ್, ಮದನಿ ಕಾಲನಿ, ಎಂ.ಡಿ. ಕಾಲನಿ, ಇನ್ನಿತರ ಬಡಾವಣೆಗಳು ಈ ವಾರ್ಡ್ಗಳ ವ್ಯಾಪ್ತಿಯಲ್ಲಿವೆ.
ಗೆಲುವಿಗೆ ಜಿದ್ದಾಜಿದ್ದಿ: ಹು-ಧಾ ಪೂರ್ವ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ 23 ವಾರ್ಡ್ಗಳ ಪೈಕಿ 18 ಮಹಿಳೆಯರಿಗೆ ಮೀಸಲಾಗಿದೆ. ಇದರಲ್ಲಿ ವಾರ್ಡ್ ನಂ. 76ರಿಂದ 82ರವರೆಗೆ ಎಲ್ಲ 7 ವಾರ್ಡ್ಗಳು ಮಹಿಳಾ ಮೀಸಲಾತಿಯಡಿ ಬಂದಿದೆ. ಇದರಿಂದ ಬಹುತೇಕ ಸ್ಪರ್ಧಿಗಳು ಹೊಸಮುಖಗಳೇ ಆಗಿರುವುದು ಇಲ್ಲಿಯ ವಿಶೇಷ. ಬಿಜೆಪಿ-ಕಾಂಗ್ರೆಸ್ ನಡುವೆ ಆಪ್ ಮತ್ತು ಎಐಎಂಐಎಂ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
76ನೇ ವಾರ್ಡ್ನಿಂದ ಕಾಂಗ್ರೆಸ್ನಿಂದ ಪಾಲಿಕೆ ಮಾಜಿ ಸದಸ್ಯ ಅಲ್ತಾಫ್ ಕಿತ್ತೂರ ಅವರ ಪತ್ನಿ ಸಾಯಿರಾಬಾನು ಅವರು ಸ್ಪರ್ಧಿಸಿದ್ದಾರೆ. ಹಿಂದಿನ ಚುನಾವಣೆಯವಲ್ಲಿ ಅಲ್ತಾಫ್ ಅವರು ಜೆಡಿಎಸ್ನಿಂದ ಚುನಾಯಿತರಾಗಿದ್ದರು. ಬಿಜೆಪಿಯಿಂದ ಸುಧಾ ದಾಮೋದರ, ಎಐಎಂಐಎಂನಿಂದ ವಹೀದಾ ಕಿತ್ತೂರ ಕಣದಲ್ಲಿದ್ದಾರೆ. 77ರಲ್ಲಿ ಪಾಲಿಕೆ ಮಾಜಿ ಸದಸ್ಯೆ ಫಹಮೀದಾ ಕಿಲ್ಲೆದಾರ ಅವರ ಪುತ್ರಿ ಬತುಲಾ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದಾರೆ. ಬಿಜೆಪಿಯಿಂದ ಸ್ವಾಲೇಹಾ ಹೊಸೂರ, ಎಐಎಂಐಎಂನಿಂದ ಹುಸೇನಾಬಿ ನಾಲ್ವತ್ತವಾಡ ಟಿಕೆಟ್ ಪಡೆದಿದ್ದಾರೆ.
ವಾರ್ಡ್ ನಂ. 78ರಲ್ಲಿ ಬಿಜೆಪಿಯಿಂದ ಸ್ನೇಹಾ ಹಂಜಿ, ಕಾಂಗ್ರೆಸ್ನಿಂದ ಶಿವಗಂಗಾ ಎಸ್.ಎಸ್., ಆಪ್ನಿಂದ ಸೌಮ್ಯ ವಿಠ್ಠಲ ಪವಾರ, 79ರಲ್ಲಿ ಬಿಜೆಪಿಯಿಂದ ನಾಗವೇಣಿ ಟಿಕಾರೆ, ಕಾಂಗ್ರೆಸ್ನಿಂದ ಫಾಮಿದಾ ಕಾರಡಗಿ, ಎಐಎಂಐಎಂನಿಂದ ಸಲ್ಮಾ ಮುಲ್ಲಾ ಸ್ಪರ್ಧಿಸಿದ್ದಾರೆ. 80ರಲ್ಲಿ ಕಾಂಗ್ರೆಸ್ನಿಂದ ಯಲ್ಲಮ್ಮ ಪಲ್ಲಾಟೆ, ಬಿಜೆಪಿಯಿಂದ ಶಾಂತಾ ಹಿರೇಮಠ, 81ರಲ್ಲಿ ಕಾಂಗ್ರೆಸ್ನಿಂದ ಮಂಜುಳಾ ಜಾಧವ, ಬಿಜೆಪಿಯಿಂದ ಸಾರಿಕಾ ಬಿಜವಾಡ, ಎಐಎಂಐಎಂನಿಂದ ಪದ್ಮಾವತಿ ಬಳ್ಳಾರಿ, 82ರಲ್ಲಿ ಕಾಂಗ್ರೆಸ್ನಿಂದ ವಿದ್ಯಾ ಪಾಟೀಲ, ಬಿಜೆಪಿಯಿಂದ ಶಾಂತಾ ಕೊಗೊಡ, ಇತರರು ಸ್ಪರ್ಧಿಸಿದ್ದಾರೆ.
ಬಿಡ್ನಾಳ 2ನೇ ಹಂತ ಆಶ್ರಯ ಬಡಾವಣೆ ಯಲ್ಲಿ ರಸ್ತೆ, ಗಟಾರ್ ವ್ಯವಸ್ಥೆ ಇಲ್ಲ. ಮಳೆ ಬಂದರೆ ಮನೆಯಿಂದ ಹೊರಗೆ ಬರಲು ಸಾಧ್ಯವೇ ಇಲ್ಲ. ಟ್ಯಾಂಕರ್ ಮೂಲಕ ಮನಸ್ಸಿಗೆ ಬಂದಾಗ ಜಲಮಂಡಳಿಯವರು ನೀರು ಪೂರೈಕೆ ಮಾಡುತ್ತಾರೆ.| ಫೈರೋಜಾ ಬೇಪಾರಿಬಿಡ್ನಾಳ ನಿವಾಸಿ