

ಹುಬ್ಬಳ್ಳಿ: ಹುಬ್ಬಳ್ಳಿ ಫಿಟ್ನೆಸ್ ಕ್ಲಬ್ ಹಾಗೂ ವಿಆರ್ಎಲ್ ಆಶ್ರಯದಲ್ಲಿ ನ. 20ರಂದು ಬೆಳಗ್ಗೆ 5.30ಕ್ಕೆ ಗೋಕುಲ ರಸ್ತೆಯ ಕೆಎಲ್ಇ ತಾಂತ್ರಿಕ ಮಹಾವಿದ್ಯಾಲಯದಿಂದ ಹಾಫ್ ಮ್ಯಾರಥಾನ್ ಏರ್ಪಡಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಡಾ. ಎಸ್.ಪಿ. ಬಳಿಗಾರ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೀಡಾಪಟುಗಳು ಹಾಗೂ ಸಾರ್ವಜನಿಕ ಆರೋಗ್ಯದ ಹಿತ ದೃಷ್ಟಿಯಿಂದ ಅನೇಕ ವರ್ಷಗಳಿಂದ ಮ್ಯಾರಥಾನ್ ಆಯೋಜಿಸಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದರು.
ಈಗಾಗಲೇ ಮ್ಯಾರಥಾನ್ಗೆ 2,100 ಜನರು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟು 2,500 ಜನರು ಸೇರುವ ನಿರೀಕ್ಷೆ ಇದೆ. ಮ್ಯಾರಥಾನ್ನಲ್ಲಿ ಭಾಗವಹಿಸುವ ಆಸಕ್ತರು ಹೆಸರು ನೋಂದಣಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಮಹಿಳೆ ಹಾಗೂ ಪುರಷರಿಗೆ 21.1 ಕಿಮೀ., 10 ಕಿಮೀ. ಹಾಗೂ 18 ವರ್ಷದೊಳಗಿನವರಿಗೆ 5 ಕಿಮೀ. ಹೀಗೆ ಮೂರು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ 5 ಲಕ್ಷ ರೂಪಾಯಿ ಮೌಲ್ಯದ ಬಹುಮಾನಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಸಾರ್ವಜನಿಕ ಆರೋಗ್ಯ ಕಾಪಾಡಿಕೊಳ್ಳುವುದು ಜತೆಗೆ ಫಿಟ್ನೆಸ್ ಎಷ್ಟು ಮುಖ್ಯ ಎಂಬುದರ ಜಾಗೃತಿ ಮೂಡಿಸುವುದು ಕ್ಲಬ್ ಉದ್ದೇಶ. ಈ ದಿಸೆಯಲ್ಲಿ ನಡೆಯುತ್ತಿರುವ ಮ್ಯಾರಾಥಾನ್ಗೆ ಜನರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದರು.
ಗೋಷ್ಠಿಯಲ್ಲಿ ಅರುಣ ವೈ, ದೀಪಕ ಕಟಾವಕರ, ಡಾ. ಮಹೇಶ ಇತರರು ಇದ್ದರು.
===========