

ಹುಬ್ಬಳ್ಳಿ: ಮೂಲಸೌಕರ್ಯ ಕ್ಷೇತ್ರಕ್ಕೆ ಆರ್ಥಿಕ ಸಂಪನ್ಮೂಲ ಹೊಂದಿಸಲು ಕೇಂದ್ರ ಸರ್ಕಾರ ರೂಪಿಸಿರುವ ನ್ಯಾಷನಲ್ ಮಾನಿಟೈಸೇಶನ್ ಪೈಪ್ಲೈನ್ (ಎನ್ಎಂಪಿ- ರಾಷ್ಟ್ರೀಯ ನಗದೀಕರಣ ಯೋಜನೆ) ಯೋಜನೆಯಡಿ ದೇಶದ 25 ವಿಮಾನ ನಿಲ್ದಾಣಗಳ ನಿರ್ವಹಣೆ ಹೊಣೆಯನ್ನು ಖಾಸಗಿಯವರಿಗೆ ವಹಿಸಲು ಗುರುತಿಸಿದೆ. ಇದರಲ್ಲಿ ರಾಜ್ಯದಿಂದ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಆಯ್ಕೆ ಮಾಡಲಾಗಿದೆ.
ನೀತಿ ಆಯೋಗದ ವೆಬ್ಸೈಟ್ನಲ್ಲಿ ಪ್ರಕಟವಾಗಿರುವ ಮಾಹಿತಿ ಪ್ರಕಾರ ಭುವನೇಶ್ವರ, ವಾರಾಣಸಿ, ಅಮೃತಸರ, ಇಂದೋರ್, ಪಾಟ್ನಾ, ನಾಗಪುರ, ಸೂರತ್, ಜೋಧಪುರ, ಚೆನ್ನೈ, ವಿಜಯವಾಡ, ತಿರುಪತಿ, ಭೋಪಾಲ್, ಹುಬ್ಬಳ್ಳಿ ಸೇರಿ ದೇಶದ 25 ವಿಮಾನ ನಿಲ್ದಾಣಗಳು ಆಯ್ಕೆಯಾಗಿವೆ. ಇದರಿಂದ 20,782 ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಹುಬ್ಬಳ್ಳಿ ನಿಲ್ದಾಣವನ್ನು 130 ಕೋಟಿ ರೂಪಾಯಿಗಳಿಗೆ
ಖಾಸಗಿ ತೆಕ್ಕೆಗೆ ನೀಡಲು ಉದ್ದೇಶಿಸಲಾಗಿದೆ. ಆಯ್ದ ಖಾಸಗಿ ಕಂಪನಿಯವರು ನಿಲ್ದಾಣಗಳನ್ನು ನಿರ್ವಹಿಸುತ್ತಾರೆ. ಇದಕ್ಕಾಗಿ ಸರ್ಕಾರಕ್ಕೆ ಇಂತಿಷ್ಟು ಹಣ ಎಂದು ಸಂದಾಯ ಮಾಡುತ್ತದೆ.
ನಾಲ್ಕು ಹಂತಗಳಲ್ಲಿ ಏರ್ಪೋರ್ಟ್ಗಳನ್ನು ಖಾಸಗಿಗೆ ವಹಿಸಿಕೊಡಲಾಗುತ್ತಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು 2023-24ನೇ ಸಾಲಿಗೆ ನಿಗದಿಪಡಿಸಲಾಗಿದೆ. ಮೊದಲ ಹಂತದಲ್ಲಿ (2021-22) ವಾರಾಣಸಿ, ನಾಗ್ಪುರ ಮತ್ತು ಭುವನೇಶ್ವರ, ಅಮೃತಸರ, ತಿರುಚಿ, ಇಂದೋರ್, ರಾಯಪುರ ನಿಲ್ದಾಣಗಳಿಂದ 3,600 ಕೋಟಿ ರೂ. ಹಾಗೂ 2022-23ರಲ್ಲಿ ಕ್ಯಾಲಿಕಟ್, ಕೊಯಿಮತ್ತೂರು, ನಾಗ್ಪುರ, ಪಾಟ್ನಾ, ಮಧುರೈ, ಸೂರತ್, ರಾಂಚಿ, ಜೋಧಪುರ ನಿಲ್ದಾಣಗಳಿಂದ 4,295 ಕೋಟಿ ರೂ., 2023-24ರಲ್ಲಿ ಚೆನ್ನೈ, ವಿಜಯವಾಡ, ತಿರುಪತಿ, ವಡೋದರಾ, ಭೋಪಾಲ್, ಹುಬ್ಬಳ್ಳಿ ನಿಲ್ದಾಣಗಳಿಂದ 4,193 ಕೋಟಿ ರೂಪಾಯಿ ಸಂಗ್ರಹಿಸುವ ನಿರೀಕ್ಷೆ ಇದೆ.
2024-25ರಲ್ಲಿ ಇಂಫಾಲ, ಅಗರ್ತಲಾ, ಉದಯಪುರ, ಡೆಹ್ರಾಡೂನ್, ರಾಜಮುದ್ರಿ ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದೆ. ಇವುಗಳಿಂದ 1,857 ಕೋಟಿ ರೂಪಾಯಿಗಳು ಸಂಗ್ರಹವಾಗುವ ನಿರೀಕ್ಷೆ ಹೊಂದಿದೆ.
ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ವಹಣೆಯನ್ನು ರಾಷ್ಟ್ರೀಯ ನಗದೀಕರಣ ಯೋಜನೆಯಡಿ ಖಾಸಗಿಯವರಿಗೆ ವಹಿಸುವ ಕುರಿತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಿಂದ ಅಧಿಕೃತ ಮಾಹಿತಿ ಬಂದಿಲ್ಲ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.| ಪ್ರಮೋದಕುಮಾರ ಠಾಕರೆ ನಿರ್ದೇಶಕ, ಹುಬ್ಬಳ್ಳಿ ವಿಮಾನ ನಿಲ್ದಾಣ