ಹುಬ್ಬಳ್ಳಿ ರೈಲ್ವೆ ವಿಭಾಗದ ಆರ್ಥಿಕತೆ ಚೇತರಿಕೆ

h31-Aravind Malakhede 2
Published on

ಹುಬ್ಬಳ್ಳಿ: ಕೋವಿಡ್ ನಂತರ ಇದೇ ಮೊದಲ ಬಾರಿಗೆ ಹುಬ್ಬಳ್ಳಿ ರೈಲ್ವೆ ವಿಭಾಗದ ಆರ್ಥಿಕತೆ ಮೊದಲಿನ ಸ್ಥಿತಿಗೆ ಬಂದಿದ್ದು, ಸರಕು ಸಾಗಣೆಯಲ್ಲಿ ಕಳೆದ ವರ್ಷದ ಆಗಸ್ಟ್​ನ ದಾಖಲೆ ಮೀರಿಸಿದೆ.

ನಗರದಲ್ಲಿ ಸೋಮವಾರ ಆನ್​ಲೈನ್ ಮೂಲಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಹುಬ್ಬಳ್ಳಿ ರೈಲ್ವೆ ವಿಭಾಗದ ಪ್ರಧಾನ ವ್ಯವಸ್ಥಾಪಕ ಅರವಿಂದ ಮಾಳಖೇಡೆ, 2019ರ ಆಗಸ್ಟ್​ಗೆ ಹೋಲಿಸಿದರೆ 2020ರ ಆಗಸ್ಟ್​ನಲ್ಲಿ ಶೇ. 10ರಿಂದ 12ರಷ್ಟು ಸರಕು ಸಾಗಣೆ ಹೆಚ್ಚಾಗಿದ್ದು, ಇದರಿಂದ ಆದಾಯವೂ ಹೆಚ್ಚಾಗಿದೆ ಎಂದರು.

ಕೋವಿಡ್​ನಿಂದಾಗಿ ಕಳೆದ ಏಪ್ರಿಲ್​ನಲ್ಲಿ ಹುಬ್ಬಳ್ಳಿ ರೈಲ್ವೆ ಆರ್ಥಿಕತೆ ಸಂಪೂರ್ಣ ಕುಸಿದಿತ್ತು. ಜೂನ್, ಜುಲೈನಲ್ಲಿ ಒಂದಿಷ್ಟು ಚೇತರಿಸಿಕೊಂಡಿತಾದರೂ, ಬಳ್ಳಾರಿಯಲ್ಲಿ ಕೋವಿಡ್ ಸೋಂಕಿತರ ಪ್ರಕರಣ ಹೆಚ್ಚಾಗಿದ್ದರಿಂದ ಸಂಪೂರ್ಣವಾಗಿ ಸುಧಾರಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ ಎಂದು ತಿಳಿಸಿದರು.

ಈ ಅವಧಿಯಲ್ಲಿ ಕೈಗಾರಿಕೋದ್ಯಮಿಗಳು, ವ್ಯಾಪಾರಸ್ಥರಿಗೆ ಸರಕು ಸಾಗಣೆಗೆ ಅನುಕೂಲವಾಗಲು ಒಂದಿಷ್ಟು ಯೋಜನೆಗಳನ್ನು ಜಾರಿಗೊಳಿಸಿ, ಕೆಲ ರಿಯಾಯಿತಿ ಹಾಗೂ ಅನುಕೂಲತೆ ಒದಗಿಸಲಾಯಿತು. ಇದು ಸರಕು ಸಾಗಣೆ ಹೆಚ್ಚಿಸುವ ಜೊತೆಗೆ ಹುಬ್ಬಳ್ಳಿ ವಿಭಾಗದ ಆದಾಯ ಹೆಚ್ಚಳಕ್ಕೂ ಅನುಕೂಲವಾಯಿತು ಎಂದು ಹೇಳಿದರು.

ಲಾಕ್​ಡೌನ್ ಅವಧಿಯಲ್ಲಿ ಸರಕು ಸಾಗಣೆಯ ಅನುಕೂಲಕ್ಕಾಗಿ ಪಾರ್ಸಲ್ ಸ್ಪೆಷಲ್ ರೈಲುಗಳ ಸಂಚಾರ ಪ್ರಾರಂಭಿಸಲಾಯಿತು. ಆಹಾರ ಸಾಮಗ್ರಿಗಳು, ಕಬ್ಬಿಣದ ಅದಿರು, ಸ್ಟೀಲ್, ಕಲ್ಲಿದ್ದಿಲು, ಇಂಧನ ಸೇರಿದಂತೆ ದೇಶದ ವಿವಿಧೆಡೆ ಅಗತ್ಯ ವಸ್ತುಗಳನ್ನು ಸಾಗಿಸಲಾಯಿತು. ಜೊತೆಗೆ ಬಾಂಗ್ಲಾ ದೇಶಕ್ಕೂ ಸರಕನ್ನು ರೈಲುಗಳ ಮೂಲಕ ರಫ್ತು ಮಾಡಲಾಯಿತು ಎಂದು ತಿಳಿಸಿದರು.

ಹುಬ್ಬಳ್ಳಿ, ಬಳ್ಳಾರಿ, ಮಡಗಾಂವ, ಮೀರಜ್, ಲೋಂಡಾ, ಸೊಲ್ಲಾಪುರ, ಗದಗ, ಬೆಂಗಳೂರು ಸೇರಿ ವಿವಿಧೆಡೆಯ ಕೈಗಾರಿಕೋದ್ಯಮಿಗಳು, ವ್ಯಾಪಾರಸ್ಥರು ಹಾಗೂ ರೈಲ್ವೆ ಗ್ರಾಹಕರು ಸರಕು ಸಾಗಣೆ ರೈಲುಗಳ ಪ್ರಯೋಜನ ಪಡೆದುಕೊಂಡರು.

ಸರಕು ಸಾಗಣೆಯ ಕಡಿಮೆ ಬೋಗಿ ಇರುವ ರೈಲುಗಳ ಸಂಚಾರಕ್ಕೆ 600ರಿಂದ 1,500 ಕಿಮೀವರೆಗೆ ಪರವಾನಗಿ ನೀಡಲಾಯಿತು. ಇದೀಗ ಈ ಸಂಚಾರದ ಪರವಾನಗಿಯನ್ನು 2 ಸಾವಿರ ಕಿಮೀವರೆಗೆ ವಿಸ್ತರಿಸಲಾಗಿದೆ. 50 ಕಿಮೀ, 75 ಕಿಮೀ ಹಾಗೂ 90 ಕಿಮೀ ಒಳಗೆ ಸಾಗಣೆ ಮಾಡುವ ಕಲ್ಲಿದ್ದಿ್ದು, ಕಬ್ಬಿಣದ ಅದಿರಿಗೆ ಶೇ. 50, 25 ಹಾಗೂ 10ರಷ್ಟು ರಿಯಾಯಿತಿ ನೀಡಲಾಗಿದೆ. 1,400 ಕಿಮೀಗೂ ಹೆಚ್ಚು ದೂರ ಸಾಗಿಸುವ ಕಲ್ಲಿದ್ದಿಲಿಗೆ ಶೇ. 20ರಷ್ಟು, 1,600 ಕಿಮೀಗಿಂತ ಹೆಚ್ಚು ದೂರ ಸಾಗಿಸುವ ಸ್ಟೀಲ್ ಹಾಗೂ ಕಬ್ಬಿಣದ ಅದಿರಿಗೆ ಶೇ. 20ರಷ್ಟು, ಕಬ್ಬಿಣದ ಅದಿರನ್ನು 700 ಕಿಮೀಗಿಂತ ಹೆಚ್ಚು ಸಾಗಿಸಿದರೆ ಶೇ. 15ರಷ್ಟು ಹಾಗೂ 1,500 ಕಿಮೀಗಿಂತ ಹೆಚ್ಚು ದೂರ ಸಾಗಿಸಿದರೆ ಶೇ. 20ರಷ್ಟು ರಿಯಾಯಿತಿ ನೀಡಲಾಗಿದೆ ಎಂದು ವಿವರಿಸಿದರು. ಕಡಿಮೆ ಬೋಗಿಗಳಲ್ಲಿ ಸರಕು ಸಾಗಿಸಲು ವ್ಯಾಪಾರ ಮಾಲಾ ಎಂಬ ಯೋಜನೆಯನ್ನು, ಕೃಷಿ ಬೆಳೆ, ಪರಿಕರಗಳ ಸಾಗಣೆಗೆ ಕಿಷನ್ ರೈಲ್ ಎಂಬ ರೈಲನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಉಣಕಲ್ಲ-ಧಾರವಾಡ ದ್ವಿಪಥ ಶೀಘ್ರ ಪೂರ್ಣ
ರೈಲುಗಳ ಸುರಕ್ಷಿತ ಸಂಚಾರಕ್ಕಾಗಿ ಮಳೆಗಾಲ ಪ್ರಾರಂಭವಾಗುವ 3 ತಿಂಗಳ ಮುಂಚೆಯೇ ಹಳಿಗಳ ನಿರ್ವಹಣೆಯಲ್ಲಿ ತೊಡಗಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಕಾಮಗಾರಿ ಕೈಗೊಳ್ಳುವುದು ಸವಾಲಿನ ಕೆಲಸವಾಗಿತ್ತು ಎಂದು ಡಿಜಿಎಂ ಅರವಿಂದ ಮಾಳಖೇಡೆ ಹೇಳಿದರು. ಬಳ್ಳಾರಿ- ವಾಸ್ಕೊ ಡ ಗಾಮಾ ಮಧ್ಯೆ ರೈಲ್ವೆ ದ್ವಿಪಥ ಮಾರ್ಗ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಉಣಕಲ್ಲ-ಧಾರವಾಡ ಮಧ್ಯದ ಕಾಮಗಾರಿ ಸೆ. 30ರೊಳಗೆ ಪೂರ್ಣಗೊಳ್ಳಲಿದೆ. ಮೀರಜ್-ಲೋಂಡಾ ಮಧ್ಯದ ಕಾಮಗಾರಿ ಪ್ರಗತಿಯಲ್ಲಿದೆ. ಘಟಪ್ರಭಾ-ಚಿಕ್ಕೋಡಿ ಮಧ್ಯದ ಕಾಮಗಾರಿ ಪೂರ್ಣಗೊಂಡಿದೆ. ಚಿಕ್ಕೋಡಿ-ರಾಯಭಾಗ- ಚಿಂಚಲಿ ಮಾರ್ಗ ದ್ವಿಪಥಗೊಳಿಸುವ ಕಾಮಗಾರಿ ಈ ವರ್ಷ ಪೂರ್ಣಗೊಳ್ಳಲಿದೆ ಎಂದರು. ಹುಬ್ಬಳ್ಳಿಯಲ್ಲಿ ರೊ-ರೊ ರೈಲು ಪ್ರಾರಂಭಿಸಲು ಯಾವುದೇ ಬೇಡಿಕೆ ಬಂದಿಲ್ಲ. ಬೇಡಿಕೆ ಬಂದರೆ ಈ ಕುರಿತು ಪರಿಶೀಲಿಸಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net