

ಹುಬ್ಬಳ್ಳಿ: ಡೊಳ್ಳು ವಾದ್ಯದ ಅಬ್ಬರ, ಗೊಂಬೆಗಳ ಗಾಂಭೀರ್ಯ ನಡಿಗೆ, ಸಾಂಪ್ರದಾಯ ಮೇಳೈಸಿಕೊಂಡ ಪೂರ್ಣ ಕುಂಭ ಹೊತ್ತ ಮಹಿಳೆಯರು, ವಿವಿಧ ಕಲಾ ತಂಡಗಳ ನೃತ್ಯದೊಂದಿಗೆ ಸಾಗಿದ ಭವ್ಯ ಮೆರವಣಿಗೆಯು ಹುಬ್ಬಳ್ಳಿಯ ಜನತೆಯನ್ನು ಬೆರಗುಗೊಳಿಸಿತು.
ಎಸ್.ಎಸ್. ಶೆಟ್ಟರ್ ಫೌಂಡೇಷನ್ ನೇತೃತ್ವದಲ್ಲಿ ಕನ್ನಡದ ನಂ. 1 ದಿನಪತ್ರಿಕೆ ‘ವಿಜಯವಾಣಿ’ ಹಾಗೂ ದಿಗ್ವಿಜಯ ನ್ಯೂಸ್ ಸಹಯೋಗದೊಂದಿಗೆ ವಿದ್ಯಾನಗರ ಕಾಡಸಿದ್ದೇಶ್ವರ ಕಾಲೇಜ್ ಎದುರಿನಿಂದ ಶಿರೂರ್ ಪಾರ್ಕ್ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಭಾನುವಾರ ಆಯೋಜಿಸಿದ್ದ ಹುಬ್ಬಳ್ಳಿ ಯುಗಾದಿ ಉತ್ಸವದ ಮೆರವಣಿಗೆ ಆಕರ್ಷಣೀಯವಾಗಿತ್ತು. ಮೆರವಣಿಗೆಯ ಉದ್ದಕ್ಕೂ ಭಾರತೀಯ ಕಲಾ ಶ್ರೀಮಂತಿಕೆ ಅನಾವರಣಗೊಂಡವು.
ಮೆರವಣಿಗೆಯ ಮುಂಚೂಣಿಯಲ್ಲಿದ್ದ ಆಳೆತ್ತರದ ಗೊಂಬೆಗಳು ಗಮನ ಸೆಳೆದವು. ರಾಜ, ರಾವಣ, ಮಹಿಷಾಷುರ, ನಂದಿ ಮುಖದ ಗೊಂಬೆಗಳು ನಿಧಾನವಾಗಿ ಹೆಜ್ಜೆ ಹಾಕುತ್ತ ಸಾಗಿದವು. ಹುಬ್ಬಳ್ಳಿಯ ಚಿನ್ನು ಮತ್ತು ತಂಡದವರು ಗೊಂಬೆಯೊಂದಿಗೆ ಪಾಲ್ಗೊಂಡಿದ್ದರು. ಬೆಳಗಾವಿಯ ಶಿವಸಂಭು ಡೊಳ್ಳು ವಾದ್ಯ ತಂಡದ ಗಂಡು ಧ್ವನಿಯು ಸುತ್ತಮುತ್ತಲಿನ ಜನರನ್ನು ಮೆರವಣಿಗೆಯತ್ತ ಕರೆ ತಂದಿತು. ಬಹುತೇಕ ಹಸಿರು ವರ್ಣದ ಸೀರೆಯಲ್ಲಿ ಪೂರ್ಣಕುಂಭ ಹೊತ್ತ ಐದು ನೂರಕ್ಕೂ ಹೆಚ್ಚು ಮಹಿಳೆಯರು ಮೆರವಣಿಗೆಗೆ ಮೆರಗು ತಂದಿದ್ದರು.